ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಿಂದ 2 ನಾಮಪತ್ರ

| Published : Apr 18 2024, 02:16 AM IST

ಸಾರಾಂಶ

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಜಿ.ಕುಮಾರ ನಾಯಕ ಸಾಂಕೇತಿಕವಾಗಿ ಎರಡು ನಾಮಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಇಂದು ಬೃಹತ್‌ ರ್‍ಯಾಲಿ ಮೂಲಕ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ರಾಯಚೂರು

ಪಕ್ಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನೊಳಗೊಂಡ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಅವರು ಬುಧವಾರ ಎರಡು ನಾಮಪತ್ರಗಳನ್ನು ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜಿ.ಕುಮಾರ ನಾಯಕ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಲ್‌.ಚಂದ್ರಶೇಖರ ನಾಯಕಗೆ ಉಮೇದುವಾರಿಕೆ ಸಲ್ಲಿಸಿದರು. ಇಲ್ಲಿವರೆಗೂ ರಾಯಚೂರು ಲೋಕಸಭಾ ಕ್ಷೇತ್ರದಿಂದ ಏಳು ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನು ಎರಡು ದಿನ ಕಾಲಾವಕಾಶವಿದೆ. ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಸಾಂಕೇತಿಕವಾಗಿ ನಾಮಪತ್ರಗಳನ್ನು ಸಲ್ಲಿಸಿದ್ದು, ಗುರುವಾರ ಉಭಯ ಪಕ್ಷಗಳ ಅಭ್ಯರ್ಥಿಗಳು ಬೃಹತ್‌ ರ್‍ಯಾಲಿ ನಡೆಸಿ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ. ಏ.19ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೊನೆಗೊಳ್ಳಲಿದ್ದು, ಏ.20ಕ್ಕೆ ಪರಿಶೀಲನೆ ಕಾರ್ಯ ಜರುಗಲಿದೆ.

ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿ, ಮುಖಂಡರಾದ ಮೊಹಮ್ಮದ ಶಾಲಂ, ಎಂ.ಈರಣ್ಣ, ಶ್ರೀಕಾಂತ ಉಮೇದುದಾರರ ಸೂಚಕರು ಉಪಸ್ಥಿತರಿದ್ದರು.ಜಿ.ಕುಮಾರ ನಾಯಕಗಿಂತ ಪತ್ನಿಯೇ ಶ್ರೀಮಂತೆ

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಉಮೇದುವಾರಿಕೆ ಸಲ್ಲಿಸಿರುವ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ ಅವರಿಗಿಂತ ಅವರ ಪತ್ನಿಯೇ ಶ್ರೀಮಂತರಾಗಿದ್ದಾರೆ.

ಕೈಯಲ್ಲಿ 50,610 ನಗದು ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾ ಖಾತೆ ಹಣ, 207 ಗ್ರಾಂ. ಚಿನ್ನ ಸೇರಿದಂತೆ ಒಟ್ಟು 1.72 ಕೋಟಿ ಮೌಲ್ಯದ ಚರಾಸ್ತಿಯನ್ನು ಅದೇ ರೀತಿ ಜಮೀನು, ನಿವೇಶನಗಳಲ್ಲಿ ಭಾಗ ಹಾಗೂ ಮನೆ ಸೇರಿದಂತೆ ಒಟ್ಟು 4,12,85,429 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಜಿ.ಕುಮಾರ ನಾಯಕ ಹೊಂದಿದ್ದಾರೆ. ಅವರ ಪತ್ನಿ 4,65 ಲಕ್ಷ ನಗದು ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳಲ್ಲಿರುವ ಹಣ, ಚಿನ್ನಾಭರಣ ಸೇರಿದಂತೆ ಒಟ್ಟು 2.57 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅಲ್ಲದೇ ಜಮೀನು, ಬೆಂಗಳೂರಿನಲ್ಲಿ ಮನೆ ಸೇರಿದಂತೆ ಒಟ್ಟು 26.70 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 5.4 ಕೋಟಿ ಸಾಲವನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ ಅವರ 2022-23ನೇ ಸಾಲಿನಲ್ಲಿ 42,45 ಲಕ್ಷ ಆದಾಯ ಘೋಷಿಸಿಕೊಂಡಿದ್ದಾರೆ.