ಗಾಂಜಾ ಪ್ರಕರಣದಲ್ಲಿ ಹೆಸರು ಕೈ ಬಿಡಲು 20 ಸಾವಿರ ರು. ಲಂಚಕ್ಕೆ ಬೇಡಿಕೆ

| Published : Oct 09 2023, 12:45 AM IST

ಸಾರಾಂಶ

ಗಾಂಜಾ ಪ್ರಕರಣದಲ್ಲಿ ಹೆಸರು ಕೈ ಬಿಡಲು 20 ಸಾವಿರ ರು. ಲಂಚಕ್ಕೆ ಬೇಡಿಕೆ
10 ಸಾವಿರ ರು. ಲಂಚ ಪಡೆಯುವ ಅಬಕಾರಿ ಇಲಾಖೆ ಪೇದೆ ಲೋಕಾ ಬಲೆಗೆ ಕನ್ನಡಪ್ರಭ ವಾರ್ತೆ ನಾಗಮಂಗಲ ಗಾಂಜಾ ಪ್ರಕರಣವೊಂದರಲ್ಲಿ ಜಮೀನಿನ ಮಾಲೀಕನ ಹೆಸರನ್ನು ಚಾರ್ಜ್ ಶೀಟ್‌ನಲ್ಲಿ ಕೈಬಿಡಲು 20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು 10 ಸಾವಿರ ಲಂಚದ ಹಣ ಪಡೆಯುವಾಗ ಅಬಕಾರಿ ಇಲಾಖೆ ಪೇದೆ ದೇವರಾಜು ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾರೆ. ತಾಲೂಕಿನ ಮಣ್ಣಹಳ್ಳಿ ದೇವರಾಜು ಅವರ ಜಮೀನಿನಲ್ಲಿ ಇದೇ ಗ್ರಾಮದ ಸುರೇಶ್ ಎಂಬಾತ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಹಿನ್ನೆಲೆಯಲ್ಲಿ 2022ರ ಸೆಪ್ಟಂಬರ್‌ನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುರೇಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ಪ್ರಕರಣದಲ್ಲಿ ಜಮೀನಿನ ಮಾಲೀಕ ದೇವರಾಜು ಅವರ ಹೆಸರನ್ನು ಚಾರ್ಜ್ ಶೀಟ್‌ನಲ್ಲಿ ಕೈಬಿಡಲು ಅಬಕಾರಿ ಇನ್ಸ್‌ಪೆಕ್ಟರ್ ಗೀತಾ 20 ಸಾವಿರಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ನಂತರದಲ್ಲಿ 10 ಸಾವಿರಕ್ಕೆ ಒಪ್ಪಿಗೆಯಾಗಿತ್ತು ಎಂದು ಹೇಳಲಾಗಿದೆ. ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ಗೀತಾ ಲಂಚಕ್ಕೆ ಬೇಡಿಕೆಯಿಟ್ಟ ಸಂಬಂಧ ಸುರೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಬಕಾರಿ ಇನ್ಸ್‌ಪೆಕ್ಟರ್ ಗೀತಾ ಅವರ ಸೂಚನೆ ಮೇರೆಗೆ ಕಚೇರಿಯಲ್ಲಿ ಪೇದೆ ದೇವರಾಜು ಸುರೇಶ್‌ನಿಂದ ಲಂಚದ ಹಣ ಪಡೆಯುವ ಸಮಯಕ್ಕೆ ಸರಿಯಾಗಿ ಲೋಕಾಯುಕ್ತ ಡಿವೈಎಸ್‌ಪಿ ಸುನಿಲ್‌ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಮೋಹನ್‌ರೆಡ್ಡಿ ನೇತೃತ್ವದ 7 ಮಂದಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಪೇದೆ ದೇವರಾಜುನನ್ನು ಬಂಧಿಸಿದ್ದಾರೆ. ಕಚೇರಿಯ ಎಲ್ಲ ಸಿಬ್ಬಂದಿ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು 3ಗಂಟೆಗೂ ಹೆಚ್ಚು ಕಾಲ ಕಚೇರಿಯಲ್ಲಿದ್ದ ಕಡತಗಳ ಪರಿಶೀಲನೆ ನಡೆಸಿದರು. ಈ ವೇಳೆ ಅಬಕಾರಿ ಇನ್ಸ್‌ಪೆಕ್ಟರ್ ಗೀತಾ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ. ಬಂಧಿತ ಪೇದೆ ದೇವರಾಜುನನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿರುವ ಲೋಕಾಯುಕ್ತ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. 8ಕೆಎಂಎನ್ ಡಿ30 ನಾಗಮಂಗಲ ಅಬಕಾರಿ ಇಲಾಖೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಚೇರಿಯಲ್ಲಿನ ಕಡತಗಳನ್ನು ಪರಿಶೀಲಿಸುತ್ತಿರುವುದು.