20 ಕೆರೆಗೆ ನೀರು ತುಂಬಿಸಲು ಕ್ಯಾಬಿನೆಟ್‌ನಲ್ಲಿ ಅನುಮೋದಿಸಿ

| Published : Feb 06 2025, 11:47 PM IST

ಸಾರಾಂಶ

ಹನೂರು ಗುಂಡಾಲ್ ಜಲಾಶಯ ವ್ಯಾಪ್ತಿಯ ರೈತರು ಹಮ್ಮಿಕೊಂಡಿದ್ದ ಬಾಗಿನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನರೇಂದ್ರ ಭಾಗವಹಿಸಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ಗ್ರಾಮದಿಂದ ಕೀರೆಪಾತಿ ಗ್ರಾಮದವರೆಗೆ ಇರುವ 20 ಕೆರೆಗಳಿಗೆ ನೀರು ತುಂಬಿಸಲು ಕ್ಯಾಬಿನೆಟ್‌ನಲ್ಲಿ ಅನುಮೋದನೆ ನೀಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ರೈತರು ಹಮ್ಮಿಕೊಂಡಿದ್ದ ಬಾಗಿನ ಕಾರ್ಯಕ್ರಮದಲ್ಲಿ ಅಭಿಮತ ವ್ಯಕ್ತಪಡಿಸಿದರು. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರು ಆರ್ಥಿಕವಾಗಿ ಸದೃಢರಾದರೆ ಮಾತ್ರ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಎಂಬ ದೂರದೃಷ್ಟಿಯ ಫಲವಾಗಿ ಗುಂಡಾಲ್ ಜಲಾಶಯ, ಹುಬ್ಬೆ ಹುಣಸೆ, ರಾಮನಗುಡ್ಡ, ಉಡುತೊರೆ ಜಲಾಶಯ, ಕೌಳಿಹಳ್ಳ ಡ್ಯಾಮ್, ಹೂಗ್ಯಂ ಜಲಾಶಯ, ಕಿರೇಪಾತಿ ಜಲಾಶಯ ಸೇರಿದಂತೆ ಗೋಪಿನಾಥಂ ಜಲಾಶಯವನ್ನು ನಮ್ಮ ತಂದೆ ದಿ.ಜಿ ರಾಜುಗೌಡ ಹಾಗೂ ದೊಡ್ಡಪ್ಪ ದಿ.ಜಿ.ವೆಂಕಟೇಗೌಡ ಶಾಸಕರಾಗಿದ್ದಾಗ ನಿರ್ಮಾಣ ಮಾಡಲಾಗಿದೆ. ಹುಬ್ಬೆ ಹುಣಸೆ ಜಲಾಶಯ ಮಾತ್ರ ನನ್ನ ಅವಧಿಯಲ್ಲಿ 5.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೇನೆ ಎಂದರು.

ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ಜಲಾಶಯಗಳಿಗೆ ನೀರು ತುಂಬಿದರೆ 40 ಸಾವಿರ ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಗುಂಡಾಲ್ ಜಲಾಶಯ ನಿರ್ಮಾಣ ಮಾಡಿ 45 ವರ್ಷಗಳಾಗಿದೆ. ಆದರೆ ಒಂದೇ ಒಂದು ಬಾರಿ ಜಲಾಶಯ ಭರ್ತಿಯಾಗಿತ್ತು. ಉಳಿದ ವರ್ಷಗಳಲ್ಲಿ ಬರಗಾಲ ತತ್ತರಿಸಿದ್ದ ವೇಳೆ ರೈತರಿಗೆ ತೊಂದರೆಯಾಗಿತ್ತು. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ₹127 ಕೋಟಿ ವೆಚ್ಚದಲ್ಲಿ ಗುಂಡಾಲ್, ರಾಮನಗುಡ್ಡ, ಹುಬ್ಬೆ ಹುಣಸೆ ಜಲಾಶಯಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಗೆ ಅನುಮೋದನೆ ಪಡೆದು ಕಾಮಗಾರಿ ಅಂತಿಮ ಹಂತದಲ್ಲಿದೆ. ಅನುದಾನದ ಕೊರತೆಯಿಂದ ರಾಮನ ಗುಡ್ಡ ಹಾಗೂ ಹುಬ್ಬೆ ಹುಣಸೆ ಜಲಾಶಯಕ್ಕೆ ನೀರು ತುಂಬಿಸುವ ಕಾಮಗಾರಿ ಸ್ಥಗಿತವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್‌ ಅವರಿಗೆ 9 ಕೋಟಿ ಅನುದಾನ ನೀಡುವಂತೆ ಮನವಿ ನೀಡಲಾಗಿದ್ದು, ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅನುದಾನ ನೀಡಿದ ತಕ್ಷಣ ಕಾಮಗಾರಿ ಪೂರ್ಣಗೊಂಡರೆ ಸುಮಾರು 20,000 ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು.

ನಾನು ಮೂರನೇ ಬಾರಿ ಶಾಸಕನಾಗಿದ್ದಾಗ ಉಡುತೊರೆ ಜಲಾಶಯಕ್ಕೆ ಕೆರೆ ನೀರು ತುಂಬಿಸಲು 200 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ಮಾಡಿ ಕಳುಹಿಸಲಾಗಿತ್ತು. ಅನುಮೋದನೆ ಹಂತಕ್ಕೆ ತಲುಪಿದ ನಂತರ ಅದು ಸ್ಥಗಿತವಾಗಿದೆ. ಈ ಬಾರಿ ಈ ಯೋಜನೆಗೂ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಇದಲ್ಲದೆ ಮುಖ್ಯ ಕಾಲುವೆ, ತೋಬು ಕಾಲುವೆ, ಹಾಗೂ ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಯಲು ಅನುದಾನ ಕೇಳಿದ್ದು ಸರ್ಕಾರ ಅನುದಾನ ನೀಡಿದರೆ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.

12 ಹಾಡಿಗಳಿಗೆ ವಿದ್ಯುತ್ ಸಂಪರ್ಕ:

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 32 ಹಾಡಿಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ತೊಂದರೆ ಅನುಭವಿಸುತ್ತಿದ್ದರು. ನಾನು ಶಾಸಕನಾಗಿ ಆಯ್ಕೆಯಾದ ನಂತರ 20 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಿದ್ದೇನೆ. ಉಳಿದ 12 ಹಾಡುಗಳಿಗೂ ವಿದ್ಯುತ್ ಸಂಪರ್ಕ ನೀಡಲು ಕ್ರಿಯೆ ಯೋಜನೆ ಮಾಡಿ ಅನುಮೋದನೆಗಾಗಿ ಕಳುಹಿಸಲಾಗಿತ್ತು .ಈಗ ಅನುಮೋದನೆ ಸಿಕ್ಕಿದ್ದು ಅತಿ ಶೀಘ್ರದಲ್ಲಿಯೇ ಈ ಹಾಡಿಗಳಿಗೂ ವಿದ್ಯುತ್ ಸಂಪರ್ಕ ಸಿಗಲಿದೆ ಎಂದು ತಿಳಿಸಿದರು.

ಭೂಮಿ ಪೂಜೆಗೆ ಆಗಮಿಸಲಿಲ್ಲ:

ಮೂರು ಕೆರೆಗಳಿಗೆ ನೀರು ತುಂಬಿಸುವ ₹127 ಕೋಟಿ ಯೋಜನೆ ಹಾಗೂ ಮೊದಲ ಹಂತದಲ್ಲಿ ನೂರು ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಶಂಕುಸ್ಥಾಪನೆಗೆ ಶಾಮಿಯಾನ ಹಾಕಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಯೋಜನೆಗೆ ಸಚಿವರು ಬಂದು ಶಂಕುಸ್ಥಾಪನೆ ಮಾಡಿದರೆ ಆರ್‌.ನರೇಂದ್ರ ಅವರಿಗೆ ಹೆಸರು ಬರುತ್ತದೆ ಎಂದು ವಿರೋಧ ಪಕ್ಷದವರು ಪಿತೂರಿ ನಡೆಸಿ ಈ ಕಾರ್ಯಕ್ರಮವನ್ನು ರದ್ದು ಮಾಡಿಸಿದರು. ಆದರೆ ನಾನು ಅಧಿಕಾರಿಗಳ ಜೊತೆಗೂಡಿ ಪೂಜೆ ಸಲ್ಲಿಸಿದ್ದೆ. ಇದೀಗ ಕಾಮಗಾರಿ ಅಂತಿಮ ಹಂತದಲ್ಲಿದೆ. ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಪ್ರತಿಯೊಬ್ಬರು ಸಹಕರಿಸಬೇಕಿತ್ತು ಎಂದು ಹಿಂದಿನ ಕಹಿ ಘಟನೆಯನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಶಾಸಕ ಎಂ.ಆರ್.ಮಂಜುನಾಥ್ ಬಗ್ಗೆ ಮಾತನಾಡುತ್ತಿದ್ದಂತೆ ನಾವು ನಮ್ಮ ಸಾಧನೆಗಳನ್ನು ಅಷ್ಟೇ ಜನರಿಗೆ ತಿಳಿಸಬೇಕು. ಬೇರೆಯವರ ವಿಚಾರ ನಮಗೆ ಬೇಡ ಎಂದು ತಿಳಿಸಿದರು. ಇದು ನೆರೆದಿದ್ದ ಕಾರ್ಯಕರ್ತರಿಗೆ ಆಶ್ಚರ್ಯವನ್ನುಂಟು ಮಾಡಿತು.

ಕಾರ್ಯಕ್ರಮದಲ್ಲಿ ರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಕೊಳ್ಳೇಗಾಲ ಯಳಂದೂರು ಹನೂರು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ ಸಿ ಮಾದೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಗೋವಿಂದ, ಪಟ್ಟಣ ಪಂಚಾಯಿತಿ ಸದಸ್ಯರಾದ ಗಿರೀಶ್ ಹರೀಶ್ ನವೀನ್, ಮುಖಂಡರಾದ , ಕಾಮಗೆರೆ ಕುಮಾರ್ ಗೌಡ, ನವನೀತ್ ಗೌಡ, ಕಾಮಗೆರೆ ರವಿ, ಪ್ರದೀಪ್, ಉದ್ದನೂರು ಸಿದ್ದರಾಜು, ಚೇತನ್ ದೊರೆರಾಜು, ಚಿಕ್ಕ ಮಾಲಾಪುರ ಅಂಕರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.