ಸಾರಾಂಶ
ಲೋಕಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಹಣ ಹಂಚಿಕೆಯ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಧಾರವಾಡದಲ್ಲಿ ವಕೀಲರೊಬ್ಬರಿಗೆ ಸೇರಿದ ಫ್ಲ್ಯಾಟ್‌ವೊಂದರಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿರುವ ಘಟನೆ ಮಂಗಳವಾರ ನಗರದಲ್ಲಿ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಧಾರವಾಡ
ಲೋಕಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಹಣ ಹಂಚಿಕೆಯ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಧಾರವಾಡದಲ್ಲಿ ವಕೀಲರೊಬ್ಬರಿಗೆ ಸೇರಿದ ಫ್ಲ್ಯಾಟ್‌ವೊಂದರಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿರುವ ಘಟನೆ ಮಂಗಳವಾರ ನಗರದಲ್ಲಿ ರಾತ್ರಿ ನಡೆದಿದೆ. ಸುಮಾರು 20 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಇದು ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರ ವಶಕ್ಕೆ ಪಡೆದ ಅತಿದೊಡ್ಡ ಮೊತ್ತದ ಹಣವಾಗಿದೆ.ಧಾರವಾಡದ ದಾಸನಕೊಪ್ಪ ಸರ್ಕಲ್ ಬಳಿ ಇರುವ ಆರ್ಣಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಫ್ಲ್ಯಾಟ್‌ವೊಂದರಲ್ಲಿ ಮದ್ಯದ ದಾಳಿಗೆ ಹೋದ ಅಬಕಾರಿ ಅಧಿಕಾರಿಗಳಿಗೆ ಈ ಹಣ ಸಿಕ್ಕಿದೆ. ಖ್ಯಾತ ಗುತ್ತಿಗೆದಾರರೊಬ್ಬರ ಖಾತೆ ನಿರ್ವಹಿಸುತ್ತಿದ್ದಾರೆನ್ನಲಾದ ವಕೀಲರೂ ಆಗಿರುವ ಬಸವರಾಜ ದತ್ತೂನವರ್ ಎಂಬುವರಿಗೆ ಸೇರಿದ ಫ್ಲ್ಯಾಟ್ ಇದಾಗಿದೆ.
ಫ್ಲ್ಯಾಟ್‌ನಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ರಾತ್ರಿ ದಾಳಿ ನಡೆಸಿದ್ದಾರೆ. ಆದರೆ ಮನೆಯಿಡೀ ಜಾಲಾಡಿದಾಗ ಎಲ್ಲೂ ಮದ್ಯದ ಬಾಟಲಿಗಳು ಪತ್ತೆಯಾಗಿರಲಿಲ್ಲ. ಕೊನೆಗೆ ಮನೆಯ ಕಪಾಟುಗಳನ್ನು ಪರಿಶೀಲಿಸಿದಾಗ ಕಂತೆ ಕಂತೆ ನೋಟುಗಳು ಕಣ್ಣಿಗೆ ಬಿದ್ದಿವೆ. ಇಷ್ಟೊಂದು ಪ್ರಮಾಣದ ಹಣ ನೋಡುತ್ತಿದ್ದಂತೆ ಅಧಿಕಾರಿಗಳು ತಕ್ಷಣ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅನ್ನು ಸ್ಥಳಕ್ಕೆ ಕರೆಸಿದ್ದಾರೆ. ಅದರಂತೆ ಸುಮಾರು 10 ವಾಹನಗಳಲ್ಲಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಆದಾಯ ತೆರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.ಹಣದ ಮೂಲಕ್ಕೆ ಸಂಬಂಧಿಸಿ ಬಸವರಾಜ ದತ್ತುನವರ ಅವರ ವಿಚಾರಣೆ ನಡೆಯುತ್ತಿದ್ದು, ಪೊಲೀಸ್ ಅಧಿಕಾರಿಗಳು ಸಹ ಸ್ಥಳದಲ್ಲಿ ಮೊಕ್ಕಾಂ ಹೂಡಿ ಬಿಗಿ ಭದ್ರತೆ ಒದಗಿಸಿದ್ದಾರೆ.