ಸಾರಾಂಶ
ಜಂಬಿಟ್ಟಿಗೆ ಕಲ್ಲಿನ ಮೇಲೆ ಚಿತ್ರಿಸಲಾಗಿದ್ದು, ೧೩ ಮೀ. ಉದ್ದ, ೨೦ ಮೀ. ಅಗಲವಾಗಿದೆ. ೪ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.
ಕಾರವಾರ: ಭಟ್ಕಳ ತಾಲೂಕಿನ ಕರೂರು ಗ್ರಾಮದ ಬಾರಕೋಲಬೋಳೆ ಎನ್ನುವಲ್ಲಿ ೩-೪ ಸಾವಿರ ವರ್ಷಗಳ ಹಿಂದಿನ ೨೦ ರೇಖಾಚಿತ್ರ ಸಿಕ್ಕಿದ್ದು, ಕ್ರಿಸ್ತಪೂರ್ವದ ಸಾಂಸ್ಕೃತಿಕ ಚರಿತ್ರೆ ತೆರೆಯಲು, ಅರಿಯಲು ಮಹತ್ವದ ಆಕರವಾಗಿದೆ ಎಂದು ಧಾರವಾಡದ ಕವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಆರ್. ಷಡಕ್ಷರಿ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಂಬಿಟ್ಟಿಗೆ ಕಲ್ಲಿನ ಮೇಲೆ ಚಿತ್ರಿಸಲಾಗಿದ್ದು, ೧೩ ಮೀ. ಉದ್ದ, ೨೦ ಮೀ. ಅಗಲವಾಗಿದೆ. ೪ ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಮೊದಲ ಗುಂಪಿನಲ್ಲಿ ಜಿಂಕೆ, ಎತ್ತು, ಮನುಷ್ಯರ ರೇಖಾಚಿತ್ರಗಳು ಪ್ರಮುಖವಾಗಿದೆ. ಎರಡನೇ ಗುಂಪಿನಲ್ಲಿ ಎತ್ತು, ಜಿಂಕೆ, ಜಿಂಕೆ ಮರಿ, ಮೂರನೇ ಗುಂಪಿನಲ್ಲಿ ೫ ಚಿಕ್ಕ ಜಿಂಕೆಗಳು, ೪ನೇ ಗುಂಪಿನಲ್ಲಿ ದೊಡ್ಡ ಮನುಷ್ಯನ ಆಕೃತಿಯ ತಲೆಮೇಲೆ ಬಲಭಾಗದಲ್ಲಿ ಒಂದು ಎತ್ತಿನ ರೇಖಾಚಿತ್ರವಿದೆ. ನೂತನ ತಾಮ್ರಶಿಲಾ ಸಂಸ್ಕೃತಿಯ ಕಾಲಘಟ್ಟದಲ್ಲಿ ಚಿತ್ರಿಸಿದ್ದು, ದಕ್ಷಿಣ ಕನ್ನಡ, ಬಳ್ಳಾರಿ, ಕೊಪ್ಪಳ ಭಾಗದಲ್ಲಿಯೂ ಇಂತಹ ರೇಖಾಚಿತ್ರ ಸಿಕ್ಕಿವೆ ಎಂದು ವಿವರಿಸಿದರು.ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕ್ರಿಪೂ ೧೮೦೦ರಿಂದ ೮೦೦ ಅವಧಿಯಲ್ಲಿ ಕೆತ್ತಲಾದ ಚಿತ್ರಗಳಾಗಿದ್ದು, ಸಾಂಸ್ಕೃತಿಕ ಚರಿತ್ರೆ ತೆರೆಯಲು ಮಹತ್ವದ ಆಕರವಾಗಿದೆ. ಇತಿಹಾಸ ಪೂರ್ವಕಾಲ ಆಗಿರುವುದರಿಂದ ಯಾರ ಆಳ್ವಿಕೆ ಎಂದು ಹೇಳಲು ಕಷ್ಟವಾಗುತ್ತದೆ. ಮನುಷ್ಯ ಎಲ್ಲಿ ವಾಸ ಮಾಡುತ್ತಿದ್ದ ಅಲ್ಲಿ ಸೂಕ್ತ ಬಂಡೆ, ಗವಿ (ಗುಹೆ) ಸಿಕ್ಕರೆ ಸಂತೋಷಕ್ಕೆ, ಮನರಂಜನೆಗೆ, ಸಮಾಜಕ್ಕೆ ತಿಳಿಸಲು ಈ ರೀತಿಯ ಚಿತ್ರಗಳನ್ನು ಬರೆಯುತ್ತಿದ್ದರು ಎಂದರು.
ಡಾ. ವಾಸುದೇವ ಎಎಸ್‌ಕೆ., ಕವಿವಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕರಾದ ಡಾ. ಜಗದೀಶ ಆಸೂರೆ, ಡಾ. ಮಾಧುರಿ ಚೌಗಳೆ, ಡಾ. ಆದಿತ್ಯ ಹೆಗಡೆ ಇದ್ದರು.