ಸಾರಾಂಶ
ಮಂಗಳೂರು: ದೇಶದ ಶಿಪ್ಪಿಂಗ್ ಕ್ಷೇತ್ರದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದರೊಂದಿಗೆ 2047ರ ಹೊತ್ತಿಗೆ ದೇಶದ ಎಲ್ಲ ಬಂದರುಗಳಿಂದ ಒಟ್ಟು 10 ಸಾವಿರ ಮಿಲಿಯನ್ ಮೆಟ್ರಿಕ್ ಟನ್ ಸರಕು ನಿರ್ವಹಣೆಯ ಗುರಿ ಹೊಂದಲಾಗಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ.
ಪಣಂಬೂರಿನ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೆ 90 ಸಾವಿರ ಟನ್ ಸರಕು ನಿರ್ವಹಿಸುತ್ತಿದ್ದ ನವ ಮಂಗಳೂರು ಬಂದರಿನ ಸಾಮರ್ಥ್ಯ ಈಗ 2024-25ರಲ್ಲಿ 46 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ. ಇದು ಕೇಂದ್ರ ಸರ್ಕಾರದ ವಿಕಸಿತ ಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. 2047ರ ಹೊತ್ತಿಗೆ 100 ಮಿಲಿಯನ್ ಮೆಟ್ರಿಕ್ ಟನ್ ಸರಕು ನಿರ್ವಹಣೆಯ ಉದ್ದೇಶ ಹೊಂದಲಾಗಿದೆ ಎಂದರು.ಅಭಿವೃದ್ಧಿಗೆ ಕಾಲಮಿತಿ, ಗುರಿ: ದೇಶದ ಎಲ್ಲ ಬಂದರುಗಳಲ್ಲಿ ಒಟ್ಟಾರೆಯಾಗಿ ಪ್ರಸ್ತುತ 2700 ಮಿಲಿಯನ್ ಮೆಟ್ರಿಕ್ ಟನ್ ಸರಕು ನಿರ್ವಹಿಸಲಾಗುತ್ತಿದೆ. ಬಂದರುಗಳ ತಾಂತ್ರಿಕತೆ ಅಭಿವೃದ್ಧಿ ಸೇರಿದಂತೆ ಸರ್ವ ಪ್ರಯತ್ನಗಳ ಮೂಲಕ 2047ರ ಹೊತ್ತಿಗೆ ಈ ಸಾಮರ್ಥ್ಯವನ್ನು 10 ಸಾವಿರ ಮಿಲಿಯನ್ ಮೆಟ್ರಿಕ್ ಟನ್‌ಗೆ ಏರಿಸಲಾಗುವುದು. ಜತೆಗೆ ಶಿಪ್ ಬಿಲ್ಡಿಂಗ್‌ನಲ್ಲಿ ಭಾರತ 2030ರ ವೇಳೆಗೆ ವಿಶ್ವದ ಟಾಪ್ 10ರಲ್ಲಿ ಸ್ಥಾನ ಪಡೆಯಲಿದ್ದು, 2047ರ ವೇಳೆಗೆ ಟಾಪ್-5ರಲ್ಲಿ ಸ್ಥಾನ ಪಡೆಯಲಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾಲಮಿತಿಯನ್ನು ನಿಗದಿಗೊಳಿಸಿದ್ದು, ಗುರಿಯನ್ನೂ ಈಗಲೇ ನಿರ್ಧಾರ ಮಾಡಿರುವುದು ನರೇಂದ್ರ ಮೋದಿ ಸರ್ಕಾರದ ಹೆಗ್ಗಳಿಕೆ ಎಂದು ಸೋನೋವಾಲ್ ಹೇಳಿದರು.ಎನ್‌ಎಂಪಿಎ ಆದಾಯ 5 ಪಟ್ಟು ಏರಿಕೆ: ಎನ್‌ಎಂಪಿಎ ಆದಾಯ ಕಳೆದ 10 ವರ್ಷಗಳಲ್ಲಿ 5 ಪಟ್ಟು ಏರಿಕೆಯಾಗಿದೆ. ಅದನ್ನು 10 ಪಟ್ಟು ಏರಿಕೆ ಮಾಡಲು ಎಲ್ಲ ಪ್ರಯತ್ನ ನಡೆಸಲಾಗುವುದು ಎಂದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದಾಗಿ ಭಾರತ ಈಗ ಜಗತ್ತಿನ ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ದೇಶವಾಗಿ ಬೆಳೆದಿದೆ ಎಂದರು.ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, 50 ವರ್ಷಗಳ ಇತಿಹಾಸವಿರುವ ನವಮಂಗಳೂರು ಬಂದರು ಪ್ರಾಧಿಕಾರವು ಈಗ ವಿಶ್ವದ ಅತ್ಯಾಧುನಿಕ ಬಂದರುಗಳಲ್ಲಿ ಒಂದಾಗಿ ಬೆಳೆದಿದೆ. ಹಿಂದೆ ಸರಕು ನಿರ್ವಹಣೆಯ ಅವಧಿ ಬರೋಬ್ಬರಿ 93 ಗಂಟೆ ಇತ್ತು. ಈಗ ಅತಿ ಕನಿಷ್ಠ ಅವಧಿಯಲ್ಲೇ ಸರಕು ನಿರ್ವಹಣೆ ಸಾಧ್ಯವಾಗಿದೆ. ಇದು ಕೇಂದ್ರ ಸರ್ಕಾರದ ಹೆಗ್ಗಳಿಕೆ ಎಂದು ಹೇಳಿದರು.ವಿಶ್ವದ ನಾಲ್ಕನೇ ಬಲಿಷ್ಠ ಆರ್ಥಿಕತೆಯಿಂದ 3ನೇ ಸ್ಥಾನಕ್ಕೇರುವ ಪ್ರಯತ್ನ ನಡೆದಿದೆ. ಅದು ಸಾಧ್ಯವಾಗಬೇಕಾದರೆ ದೇಶದ ಉತ್ಪಾದನೆ ಮತ್ತು ರಫ್ತು ಪ್ರಮಾಣ ಹೆಚ್ಚಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಯತ್ನ ಮುಂದುವರಿಸಿದೆ ಎಂದರು.ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ: ಕಾರ್ಯಕ್ರಮದಲ್ಲಿ ಸಚಿವ ಸರ್ಬಾನಂದ ಸೋನೋವಾಲ್ ಅವರು ಮಲ್ಟಿ ಸ್ಪೆಷಾಲಿಟಿ ಪಿಪಿಪಿ ಆಸ್ಪತ್ರೆ (ಶ್ರೀನಿವಾಸ್ ಪೋರ್ಟ್ ಆಸ್ಪತ್ರೆ), ವಾಹನ ಸ್ಕ್ಯಾನರ್ ವ್ಯವಸ್ಥೆ, ಇಂಧನ ಮತ್ತು ಆಹಾರ ಸರಬರಾಜು ಸರಪಳಿ ಯೋಜನೆಗಳು, ನಾಲ್ಕು ಪಥಗಳ ಬಂದರು ಸಂಪರ್ಕ ರಸ್ತೆ, ಟ್ರಕ್ ಟರ್ಮಿನಲ್ ಮತ್ತು ರೈಲು ಕವರ್ ಶೆಡ್‌ಗಳ ಸಮರ್ಪಣೆ ಸೇರಿದಂತೆ 1,500 ಕೋಟಿ ರು.ಗೂ ಅಧಿಕ ಮೌಲ್ಯದ ಹೊಸ ಯೋಜನೆಗಳನ್ನು ಉದ್ಘಾಟಿಸಿದರು.ರಾಣಿ ಅಬ್ಬಕ್ಕ ಗೇಟ್:ಎನ್‌ಎಂಪಿಎ ಸುವರ್ಣ ಮಹೋತ್ಸವ ಮತ್ತು ಉಳ್ಳಾಲದ ರಾಣಿ ಅಬ್ಬಕ್ಕ ಅವರ 500 ವರ್ಷಾಚರಣೆ ಸ್ಮರಣಾರ್ಥ ಎನ್‌ಎಂಪಿಎಯ ನವೀಕರಿಸಿದ ದ್ವಾರಕ್ಕೆ ‘ರಾಣಿ ಅಬ್ಬಕ್ಕ ಗೇಟ್’ ಎಂದು ಮರುನಾಮಕರಣ ಮಾಡಲಾಯಿತು.ಮಂಗಳೂರಿನಲ್ಲಿ ಗೋಡಂಬಿ ರಫ್ತಿನ 100 ವರ್ಷಗಳ ಸ್ಮರಣಾರ್ಥ ಕರ್ನಾಟಕ ಗೋಡಂಬಿ ತಯಾರಕರ ಸಂಘದ ಶತಮಾನೋತ್ಸವದ ಲೋಗೋವನ್ನು ಸಚಿವ ಪ್ರಹ್ಲಾದ್ ಜೋಶಿ ಅನಾವರಣಗೊಳಿಸಿದರು. ಎನ್‌ಎಂಪಿಎ ಸಿಎಸ್‌ಆರ್ ನಿಧಿಯಿಂದ ವಿವಿಧ ಕೊಡುಗೆಗಳನ್ನು ವಿತರಿಸಲಾಯಿತು. ಎನ್‌ಎಂಪಿಎ ಏಳಿಗೆಗೆ ಕೊಡುಗೆ ನೀಡಿದ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ಶ್ಯಾಮ್ ಜಗನ್ನಾಥನ್ ಮತ್ತಿತರರು ಇದ್ದರು.ಎನ್‌ಎಂಪಿಎ ಅಧ್ಯಕ್ಷ ಡಾ.ಎ.ವಿ. ರಮಣ ಸ್ವಾಗತಿಸಿದರು. ಉಪಾಧ್ಯಕ್ಷೆ ಎಸ್. ಶಾಂತಿ ವಂದಿಸಿದರು.
;Resize=(128,128))
;Resize=(128,128))
;Resize=(128,128))