ಸಾರಾಂಶ
ಬೆಂಗಳೂರು : ಲೋಕಸಭಾ ಚುನಾವಣೆಗೆ ಹಣ ಸಂಗ್ರಹಿಸಲು ಬಿಬಿಎಂಪಿಯಲ್ಲಿ ರಸ್ತೆ ಕಾಮಗಾರಿಯ ದೊಡ್ಡ ಹಗರಣ ನಡೆಸಲಾಗಿದೆ ಎಂದು ಮಾಜಿ ಉಪ ಮೇಯರ್ ಹಾಗೂ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ₹2 ಸಾವಿರ ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದರು. ಫೆ.5ರಂದು ಟೆಂಡರ್ ಕರೆದಿದ್ದು, ಹದಿನೈದು ದಿನದೊಳಗೆ ಈ ಟೆಂಡರ್ ಪ್ರಕ್ರಿಯೆ ಮುಗಿಸಲಾಗಿದೆ. ಮಾ.15ರೊಳಗೆ ಎಲ್ಲಾ ಟೆಂಡರ್ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಮಾ.16ರಂದು ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಅಂದರೆ, ಚುನಾವಣೆಗೆ ಹಣ ಸಂಗ್ರಹಿಸಲು ಕಾನೂನುಬಾಹಿರವಾಗಿ ಟೆಂಡರ್ ನಡೆಸಲಾಗಿದೆ ಆರೋಪಿಸಿದರು.
ಉತ್ತಮ ರಸ್ತೆಗಳಿಗೆ ವೈಟ್‌ಟಾಪಿಂಗ್:
ಬಿಬಿಎಂಪಿಯಲ್ಲಿ ಟಿವಿಸಿಸಿ ಸೆಲ್ ಇದೆ. ಗುತ್ತಿಗೆದಾರರಿಗೆ ಹಣ ಪಾವತಿಗೆ ಮೊದಲು ಈ ಟಿವಿಸಿಸಿ ಸೆಲ್ ಪರಿಶೀಲಿಸಿ ದೃಢೀಕರಣ ಪತ್ರ ನೀಡಬೇಕು. ಆದರೆ, ಇತ್ತೀಚೆಗೆ ಕಾಮಗಾರಿ ಆದ ರಸ್ತೆಗಳಿಗೆ ವೈಟ್ ಟಾಪಿಂಗ್‌ಗೆ ಮುಂದಾಗಿದ್ದಾರೆ. ಹಿಂದಿನ ಸರ್ಕಾರದಲ್ಲಿ ನಡೆದ ಕಾಮಗಾರಿಗಳ ಹಣವೇ ಪಾವತಿ ಆಗಿಲ್ಲ. ಈಗ ಮತ್ತೆ ಅದೇ ರಸ್ತೆಗಳ ಮೇಲೆ ವೈಟ್ ಟಾಪಿಂಗ್ ಮಾಡಿದರೆ, ಟಿವಿಸಿಸಿಯವರು ಹೇಗೆ ದೃಢೀಕರಣ ಪತ್ರ ನೀಡಲು ಸಾಧ್ಯ? ಹಣ ಪಾವತಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಗುಂಡಿ ರಸ್ತೆಗಳ ಆಯ್ಕೆ ಇಲ್ಲ:
ವೈಟ್ ಟಾಪಿಂಗ್‌ಗೆ ಗುಂಡಿ ಬೀಳದ, ರೋಡ್ ಕಟ್ಟಿಂಗ್ ಆಗದ ಉತ್ತಮ ರಸ್ತೆಗಳನ್ನೇ ಆಯ್ಕೆ ಮಾಡಿದ್ದಾರೆ. ಗುಂಡಿ- ಹಳ್ಳವಿರುವ ರಸ್ತೆಗಳಿದ್ದರೂ ಅದರ ಕಾಮಗಾರಿ ಮಾಡಿಲ್ಲ. ಡಿಎಲ್‍ಪಿ ಅವಧಿ ಮುಗಿಯದ ರಸ್ತೆಗಳನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ಟೆಂಡರ್ ಶೂರ್ ರಸ್ತೆಗಳನ್ನೂ ಪರಿಗಣಿಸಿದ್ದಾರೆ ಎಂದು ದೂರಿದ ಅವರು, 2018-19ರಲ್ಲಿ ಕಾರ್ಯಾದೇಶ ನೀಡಿದ್ದ ರಸ್ತೆಗಳನ್ನೇ ಈಗ ಮತ್ತೆ ಕಾಮಗಾರಿಗೆ ಪರಿಗಣಿಸಿದ್ದಾರೆ. ಗುತ್ತಿಗೆದಾರರು ಹತ್ತಾರು ಕೋಟಿ ರು. ಇಎಂಡಿ ಮೊತ್ತ ಕಟ್ಟಿದ್ದ ರಸ್ತೆಯನ್ನೇ ಆರಿಸಿದ್ದಾರೆ ಎಂದು ಟೀಕಿಸಿದರು.ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮಾಜಿ ಮಹಾಪೌರ ಗೌತಮ್ ಕುಮಾರ್ ಇದ್ದರು.
‘ತುಷಾರ್ ಗಿರಿನಾಥ್ ಕಲೆಕ್ಷನ್ ಏಜೆಂಟ್’
ಲೋಕಸಭಾ ಚುನಾವಣೆಗೆ ದುಡ್ಡಿನ ಅವಶ್ಯಕತೆ ಹಿನ್ನೆಲೆಯಲ್ಲಿ ಕಲೆಕ್ಷನ್ ಏಜೆಂಟ್‌ಗಳಾಗಿ ಚೀಫ್ ಕಮೀಷನರ್ ತುಷಾರ್ ಗಿರಿನಾಥ್, ಎಂಜಿನಿಯರಿಂಗ್ ಚೀಫ್- ಚೀಫ್ ಎಂಜಿನಿಯರ್ ಪ್ರಹ್ಲಾದ್, ಲೋಕೇಶ್ ಅವರ ಮೂಲಕ ಹಗರಣ ನಡೆದಿದೆ. ಹಿಂದಿನ ಕಾರ್ಯಾದೇಶ ರದ್ದು ಮಾಡಿದ್ದರೆ ಸಂಪುಟದ ಅನುಮತಿ ಬೇಕಾಗಿತ್ತು. ಆದರೆ, ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಹರೀಶ್ ಆರೋಪಿಸಿದರು.
ಕಾಯ್ದೆ ಉಲ್ಲಂಘಿಸಿ ಸಿಂಗಲ್ ಟೆಂಡರ್
ಕಾಯ್ದೆ ಉಲ್ಲಂಘಿಸಿ ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಸ್ಪರ್ಧಿಸಿದ್ದ ಮೊಹಿಯುದ್ದೀನ್ ಬಾವ ಅವರ ತಮ್ಮ ಸೈಫುದ್ದೀನ್‍ಗೆ ಸೇರಿದ ಓಶಿಯನ್ ಕಂಪನಿಗೆ ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಚೀಫ್ ಎಂಜಿನಿಯರ್ ಪ್ರಹ್ಲಾದ್ ಅವರೇ ಈ ನೋಟ್ ಹಾಕಿ ಮಂಜೂರಾತಿ ಕೊಟ್ಟಿದ್ದಾರೆ. ಬಳಿಕ ಅವರೇ ಎಂಜಿನಿಯರಿಂಗ್ ಚೀಫ್ ಆಗಿ ಅನುಮೋದಿಸಿದೆ ಎಂದು ಬರೆದಿದ್ದಾರೆ. 2018-19ರ ಟೆಂಡರ್ ರದ್ದು ಮಾಡದೆ, ಯಾರೋ ಒಬ್ಬರ ಓಲೈಕೆಗೆ ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ ಎಂದು ಎಸ್.ಹರೀಶ್ ಟೀಕಿಸಿದರು.
ಲೋಕಾಯುಕ್ತಕ್ಕೆ ದೂರು
ನಿಯಮದ ಪ್ರಕಾರ ₹25 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯು ನಿರ್ದಿಷ್ಟ ತಾಂತ್ರಿಕ ಸಮಿತಿ ಮುಂದೆ ಹೋಗಬೇಕು. ಆದರೆ, ಇಲ್ಲಿ ಆ ಸಮಿತಿಯನ್ನೇ ವಿಸರ್ಜಿಸಿದ್ದಾರೆ. ಇವರೇ ತಾಂತ್ರಿಕ ಸಮಿತಿ ಮಾಡಿಕೊಂಡಿದ್ದಾರೆ. ಸೂತ್ರಧಾರಿ ಪ್ರಹ್ಲಾದ್ ಅವರೇ ಅನುಮೋದಿಸಿದ್ದಾರೆ. ಇತ್ತೀಚೆಗೆ ₹2 ಸಾವಿರ ಕೋಟಿ ಮೊತ್ತದ ವೈಟ್ ಟಾಪಿಂಗ್ ಕಾಮಗಾರಿಗೆ ಡಿಸಿಎಂ ಚಾಲನೆ ಕೊಟ್ಟಿದ್ದಾರೆ. ಇದೊಂದು ದೊಡ್ಡ ಹಗರಣವಾಗಿದ್ದು, ಈ ಸಂಬಂಧ ಲೋಕಾಯುಕ್ತ ದೂರು ನೀಡುತ್ತೇವೆ ಎಂದು ಎಸ್.ಹರೀಶ್ ಹೇಳಿದರು.