ಬಿಎಂಟಿಸಿಗೆ 2000 ಹೊಸ ಬಸ್‌ ಸೇರ್ಪಡೆ: ರೆಡ್ಡಿ

| Published : Dec 08 2024, 01:19 AM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಬಿಎಂಟಿಸಿಗೆ 2,019 ಹೊಸ ಬಸ್‌ಗಳನ್ನು ಸೇರ್ಪಡೆಗೆ ಮುಂದಾಗಿದ್ದು, ಅದರಲ್ಲಿ 1,400ಕ್ಕೂ ಹೆಚ್ಚಿನ ಬಸ್‌ಗಳು ಈಗಾಗಲೇ ನಿಗಮಕ್ಕೆ ಸೇರ್ಪಡೆ ಮಾಡಲಾಗಿದೆ. ಹೊಸ ವರ್ಷದಲ್ಲಿ ಉಳಿದ ಬಸ್‌ಗಳು ಬಿಎಂಟಿಸಿಗೆ ಬರಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೋರಮಂಗಲದಲ್ಲಿ ಶನಿವಾರ ಬಿಎಂಟಿಸಿ ನಿರ್ವಾಹಕ ಹುದ್ದೆಗೆ ನೇಮಕವಾಗಿರುವ 2,500 ಅಭ್ಯರ್ಥಿಗಳ ಪೈಕಿ 371 ಜೆ (ಕಲ್ಯಾಣ ಕರ್ನಾಟಕ) ಮೀಸಲಾತಿ ಅಡಿ ಆಯ್ಕೆಯಾಗಿರುವ 212 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿಗೆ 320 ಬಸ್‌ಗಳನ್ನು ಮಾತ್ರ ಖರೀದಿ ಮಾಡಲಾಗಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2,019 ಬಸ್‌ಗಳನ್ನು ಖರೀದಿಸಿದ್ದು, ಅದರಲ್ಲಿ 840 ಡೀಸೆಲ್‌ ಬಸ್‌ ಮತ್ತು 1,779 ಬಸ್‌ಗಳು ಎಲೆಕ್ಟ್ರಿಕ್‌ ಬಸ್‌ಗಳಾಗಿವೆ. ಅದರಲ್ಲಿ ಈಗಾಗಲೇ 1,400 ಬಸ್‌ಗಳು ಸೇವೆ ನೀಡಲಾಗಿದ್ದು, ಜನವರಿಯಲ್ಲಿ ಮತ್ತೆ 619 ಬಸ್‌ಗಳು ನಿಗಮಗಕ್ಕೆ ಸೇರ್ಪಡೆಯಾಗಲಿವೆ ಎಂದರು.

ನಿಗಮದಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು 1 ಸಾವಿರಕ್ಕೂ ಹೆಚ್ಚಿನ ಜನರಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಲಾಗಿದೆ. ಅದರ ಜತೆಗೆ ಇದೀಗ ಹೊಸದಾಗಿ 2,500 ನಿರ್ವಾಹಕರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದ 212 ಅಭ್ಯರ್ಥಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಒಟ್ಟಾರೆ ನಾಲ್ಕೂ ನಿಗಮಗಳಲ್ಲಿ 9 ಸಾವಿರ ಚಾಲಕ ಕಂ ನಿರ್ವಾಹಕರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್‌, ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್‌ ರೆಡ್ಡಿ ಇದ್ದರು.