ಕನ್ನಡಪ್ರಭ ವಾರ್ತೆ ಬೆಳಗಾವಿ ಈಗ ನಾವು 2025ರ ವರ್ಷದ ತುದಿಯಲ್ಲಿ ನಿಂತಿದ್ದೇವೆ. ಈ ವರ್ಷದ ಹಿನ್ನೋಟದದತ್ತ ದೃಷ್ಟಿ ಹಾಯಿಸಿದರೆ ಗಡಿ ಜಿಲ್ಲೆ ಬೆಳಗಾವಿಯ ಜನರಿಗೆ ಸಿಹಿಗಿಂತ ಕಹಿಯನ್ನೇ ಉಣಿಸಿದ ಘಟನೆಗಳ ಹೂರಣವೇ ಇದೆ. ಬೆಳಗಾವಿ ಜಿಲ್ಲೆ ಪಾಲಿಗೆ 2025 ಸಿಹಿಕ್ಕಿಂತ ಕಹಿಯೇ ಜಾಸ್ತಿ ಎನ್ನುವಂತಾಗಿದೆ. ಬೆಂಬಿಡದೆ ಕಾಡಿದ ಮಳೆ, ಫೈನಾನ್ಸ್ ಹಾವಳಿ, ಕುಂಭಮೇಳದಲ್ಲಿ 13 ಜನರ ಸಾವು, ಸರಣಿ ಅಪಘಾತ, ಕೃಷ್ಣಮೃಗಗಳ ಸರಣಿ ಸಾವು, ಪೋಕ್ಸೋ ಪ್ರಕರಣ ಹೀಗೆ ಮೊದಲಾದ ಅಪರಾಧ ಪ್ರಕರಣಗಳು ನೋವಿನ ಬರೆಯನ್ನೇ ಎಳೆದಿವೆ. ಇದೆಲ್ಲದರ ನಡುವೆ ರೈತರ ಹೋರಾಟ ಸದ್ದು ಮಾಡಿದೆ.
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಈಗ ನಾವು 2025ರ ವರ್ಷದ ತುದಿಯಲ್ಲಿ ನಿಂತಿದ್ದೇವೆ. ಈ ವರ್ಷದ ಹಿನ್ನೋಟದದತ್ತ ದೃಷ್ಟಿ ಹಾಯಿಸಿದರೆ ಗಡಿ ಜಿಲ್ಲೆ ಬೆಳಗಾವಿಯ ಜನರಿಗೆ ಸಿಹಿಗಿಂತ ಕಹಿಯನ್ನೇ ಉಣಿಸಿದ ಘಟನೆಗಳ ಹೂರಣವೇ ಇದೆ. ಬೆಳಗಾವಿ ಜಿಲ್ಲೆ ಪಾಲಿಗೆ 2025 ಸಿಹಿಕ್ಕಿಂತ ಕಹಿಯೇ ಜಾಸ್ತಿ ಎನ್ನುವಂತಾಗಿದೆ. ಬೆಂಬಿಡದೆ ಕಾಡಿದ ಮಳೆ, ಫೈನಾನ್ಸ್ ಹಾವಳಿ, ಕುಂಭಮೇಳದಲ್ಲಿ 13 ಜನರ ಸಾವು, ಸರಣಿ ಅಪಘಾತ, ಕೃಷ್ಣಮೃಗಗಳ ಸರಣಿ ಸಾವು, ಪೋಕ್ಸೋ ಪ್ರಕರಣ ಹೀಗೆ ಮೊದಲಾದ ಅಪರಾಧ ಪ್ರಕರಣಗಳು ನೋವಿನ ಬರೆಯನ್ನೇ ಎಳೆದಿವೆ. ಇದೆಲ್ಲದರ ನಡುವೆ ರೈತರ ಹೋರಾಟ ಸದ್ದು ಮಾಡಿದೆ.ಹೋರಾಟದ್ದೇ ಸದ್ದು
ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವಂತೆ ಆಗ್ರಹಿಸಿ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ 10 ದಿನಗಳ ಕಾಲ ನಡೆದ ರೈತರ ಹೋರಾಟ ಆಂದೋಲನ ಸ್ವರೂಪ ಪಡೆದಿದ್ದಲ್ಲದೇ, ಹೋರಾಟದ ಕಿಚ್ಚು ರಾಜ್ಯಾದ್ಯಂತ ಪಸರಿಸಿತ್ತು. ಲಕ್ಷಾಂತರ ರೈತರು ಹೋರಾಟದಲ್ಲಿ ಅಹೋರಾತ್ರಿ ಪಾಲ್ಗೊಂಡಿದ್ದರು. ಈ ಹೋರಾಟ ಸರ್ಕಾರವನ್ನು ನಡುಗಿಸುವಂತೆ ಮಾಡಿತು. ಕೊನೆಗೂ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಪ್ರತಿಟನ್ ಕಬ್ಬಿಗೆ ₹ 3300 ದರ ನಿಗದಿಪಡಿಸಿತು. ಕಬ್ಬಿನ ಬಾಕಿ ಬಿಲ್ ನೀಡುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸುವಂತೆ ರೈತ ಪರ ಸಂಘಟನೆಗಳು ಸೇರಿದಂತೆ ನಾನಾ ಸಂಘಟನೆಗಳು ವರ್ಷವೀಡಿ ಹೋರಾಟ ಮಾಡಿವೆ. ಅಧಿವೇಶನದ ವೇಳೆ ಸುವರ್ಣವಿಧಾನಸೌದಧ ಬಳಿ ನಾನಾ ಸಂಘಟನೆಗಳು ಹೋರಾಟ ನಡೆಸಿ, ಸರ್ಕಾರದ ಚಳಿ ಬಿಡಿಸಿದವು. ಅಲ್ಲದೇ, ಜಿಲ್ಲಾಧಿಕಾರಿ ಕಚೇರಿ ಎದುರು ನಿತ್ಯ ಹೋರಾಟ ನಡೆದು ಗಮನ ಸೆಳೆದಿವೆ. ಹೀಗೆ ವರ್ಷವಿಡಿ ಹೋರಾಟಗಳೇ ಸದ್ದುಮಾಡಿವೆ.ಕಾಂಗ್ರೆಸ್ ಅಧಿವೇಶನಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿದ ಕಾರಣ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದಿಂದ ಗಾಂಧಿ ಭಾರತ ಸಮಾವೇಶ ನಡೆಯಿತು. ಈ ಸಮಾವೇಶದ ಮೂಲಕ ರಾಷ್ಟ್ರದ ಗಮನವನ್ನು ಸೆಳೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೆ ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವರು ಪಾಲ್ಗೊಂಡಿದ್ದರು. ಅದೇ ದಿನ ಸುವರ್ಣ ವಿಧಾನಸೌಧ ಮುಂದೆ ಮಹಾತ್ಮ ಗಾಂಧೀಜಿ ಅವರ ಬೃಹತ್ ಪುತ್ಥಳಿ ಲೋಕಾರ್ಪಣೆಗೊಳಿಸಲಾಯಿತು.ಆಪರೇಷನ್ ಸಿಂದೂರ
ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಅದರ ವಿವರವನ್ನು ಇಡೀ ಜಗತ್ತಿಗೆ ಎಳೆ-ಎಳೆಯಾಗಿ ತಿಳಿಸಿದ ಕರ್ನಲ್ ಸೋಫಿಯಾ ಖುರೇಷಿ ಅವರು ಗೋಕಾಕ್ ತಾಲೂಕಿನ ಕೊಣ್ಣೂರ ಪಟ್ಟಣದ ಸೊಸೆ ಎಂಬ ವಿಚಾರ ತಿಳಿದು ಜಿಲ್ಲೆಯ ಜನರು ಅಭಿಮಾನಪಟ್ಟರು. ಇದು ಇಡೀ ದೇಶದ ಗಮನವನ್ನೂ ಸೆಳೆಯಿತು. ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದವರು. ಕೊಣ್ಣೂರಿನಲ್ಲಿ ಸೋಫಿಯಾ ಮಾವ ಗೌಸಸಾಬ್ ಬಾಗೇವಾಡಿ ಸೇರಿ ಕುಟುಂಬಸ್ಥರು ವಾಸವಿದ್ದಾರೆ.ಪೋಕ್ಸೋ ಪ್ರಕರಣಜಿಲ್ಲೆಯ ವಿವಿಧೆಡೆ ಪೋಕ್ಸೋ ಪ್ರಕರಣ ವ್ಯಾಪಕವಾಗಿ ನಡೆದಿದ್ದು, ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗುವಂತೆ ಆಗಿತ್ತು. ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆಯನ್ನೂ ವಿಧಿಸಿದೆ. ಬೆಳಗಾವಿ ತಾಲೂಕಿನ ಸರ್ಕಾರಿ ಶಾಲೆವೊಂದರ ವಿದ್ಯಾರ್ಥಿನಿಯ ಮೇಲೆ ಮುಖ್ಯ ಶಿಕ್ಷಕನೇ ಅತ್ಯಾಚಾರ ವೆಸಗಿದ ಆರೋಪವೂ ಕೇಳಿಬಂದಿತ್ತು. ಪ್ರಭಾವಿ ರಾಜಕೀಯ ನಾಯಕರ ಒತ್ತಡದಿಂದ ಪೊಲೀಸರು ಆರೋಪಿ ಮೇಲೆ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದರು. ಈ ಪ್ರಕರಣ ವ್ಯಾಪಾಕ ಚರ್ಚೆಗೆ ಕಾರಣವಾಗಿತ್ತು. ಕೊನೆಗೂ ಅತ್ಯಾಚಾರಿ ಮುಖ್ಯ ಶಿಕ್ಷಕನನ್ನು ಬಂಧಿಸಿ, ಜೈಲಿಗಟ್ಟಲಾಯಿತು.ಕುಂಭಮೇಳದಲ್ಲಿ 13 ಜನ ಸಾವು
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ತರಳಿದ್ದ ಬೆಳಗಾವಿಯ ನಾಲ್ವರು ಜ.29ರಂದು ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ಬಳಿಕ ಮೂವರು ಹೃದಯಾಘಾತದಿಂದ ಮೃತಪಟ್ಟರು. ಹೀಗೆ ಒಟ್ಟು ಏಳು ಜನ ಭಕ್ತರು ಕೊನೆಯುಸಿರೆಳೆದರು. ಮಹಾಕುಂಭ ಮೇಳಕ್ಕೆ ಪ್ರಯಾಗ್‌ರಾಜ್ ತೆರಳಿದ್ದ ಜೀಪ್ ಫೆ.24ರಂದು ಅಪಘಾತ ಕ್ಕೀಡಾಗಿ ಜಿಲ್ಲೆಯ 6 ಜನರು ಸ್ಥಳದಲ್ಲೇ ಮೃತಪಟ್ಟರು. ಇದರೊಂದಿಗೆ ಒಟ್ಟು 13 ಮಂದಿ ಮಹಾಕುಂಭ ಮೇಳದ ನೆಪದಲ್ಲಿ ಪ್ರಾಣ ಕಳೆದುಕೊಂಡರು.ಆರ್‌ಸಿಯು ವಿವಾದಭೂತರಾಮನಹಟ್ಟಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಈ ಬಾರಿ ವಿವಾದದ ಕೇಂದ್ರ ಬಿಂದುವಾಗಿತ್ತು. ಆರ್‌ಸಿಯು ಘಟಿಕೋತ್ಸವದಲ್ಲಿ ತನಗೆ ಪಿಎಚ್‌ಡಿ ಪ್ರಮಾಣ ಪತ್ರವನ್ನು ರಾಜ್ಯಪಾಲರಿಂದ ಕೊಡಿಸದೇ ಅನ್ಯಾಯಮಾಡಲಾಗಿದೆ ಎಂದು ಆರೋಪಿಸಿ ಪಿಎಚ್‌ಡಿ ವಿದ್ಯಾರ್ಥಿನಿ ಸುಜಾತಾ ಪೋಳ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನನಗೆ ಪಿಎಡ್‌ಡಿ ಪದವಿ ಸ್ವೀಕರಿಸಲು ಕುಲಪತಿ, ಕುಲಸಚಿವರೇ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಇದರಿಂದಾಗಿ, ಎಚ್ಚೆತ್ತುಕೊಂಡ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ಅವರು ಸಿಂಡಿಕೇಟ್ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ಸುಜಾತಾ ಪೋಳ ಅವರಿಗೆ ಪಿಎಚ್‌ಡಿ ಪದವಿ ನೀಡುವುದಾಗಿ ಘೋಷಿಸಿದರು. ಈ ಘಟನೆಯ ಬಳಿಕ ಆರ್‌ಸಿಯುನಲ್ಲಿ ಅವ್ಯವಹಾರ ನಡೆದಿರುವ ಕುರಿತು ದೂರುಗಳು ಕೇಳಿಬಂದವು. ಹಗರಣಕ್ಕೆ ಸಂಬಂಧಿಸಿದಂತೆ ಕುಲಪತಿ ಸೇರಿದಂತೆ ಹಲವರ ವಿರುದ್ಧ ಲೋಕಾಯುಕ್ತರು ಪ್ರಕರಣ ದಾಖಲಿಸಿದ್ದಾರೆ.31 ಕೃಷ್ಣಮೃಗಗಳ ಸರಣಿ ಸಾವುಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯ ಕಿತ್ತೂರುರಾಣಿ ಚನ್ನಮ್ಮ ಕಿರು ಮೃಗಾಲಯಲ್ಲಿ ಒಟ್ಟು 31 ಕೃಷ್ಣಮೃಗಗಳು ಗಳಲೆ ರೋಗದಿಂದ ಸರಣಿಯಾಗಿ ಸಾವನ್ನಪ್ಪಿದವು. ನ.13ರಂದು 8, ನ.15ರಂದು 20 ಕೃಷ್ಣಮೃಗಗಳು ಮೃತಪಟ್ಟಿದ್ದರೆ, ನ.18ರವರೆಗೆ ಸರಣಿಯಂತೆ 31 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಉಳಿದ 7 ಕೃಷ್ಣಮೃಗಗಳಿಗೆ ಕ್ವಾರಂಟೈನ್ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಅವುಗಳನ್ನು ಬದುಕಿಸಿಕೊಳ್ಳಲಾಯಿತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೃಷ್ಣಮೃಗಗಳು ಮೃತಪಟ್ಟಿದ್ದು, ದೇಶದಲ್ಲಿ ಇದೇ ಮೊದಲ ಕರಾಳ ಘಟನೆಯಾಗಿ ದಾಖಲಾಯಿತು. ಕೃಷ್ಣಮೃಗಗಳ ಸರಣಿ ಸಾವಿನ ದುರಂತಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.ಗಮನ ಸೆಳೆದ ಹುಕ್ಕೇರಿ ಕೆಇಬಿ ಚುನಾವಣೆ
ದೇಶದಲ್ಲಿ ಸಹಕಾರಿ ರಂಗದಿಂದ ಆರಂಭವಾದ ಮೊದಲ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಈ ಬಾರಿ ಹೆಚ್ಚು ಸದ್ದು ಮಾಡಿತು. ಕತ್ತಿ ಸಹೋದರರು ಮತ್ತು ಜಾರಕಿಹೊಳಿ ಸಹೋದರರ ನಡುವೆ ಜಿದ್ದಾಜಿದ್ದಿ ಕದನಕ್ಕೆ ವೇದಿಕೆಯಾಗಿ ಮಾರ್ಪಟ್ಟಿತು. ಒಂದು ತಿಂಗಳು ಹುಕ್ಕೇರಿಯಲ್ಲೆ ಬೀಡು ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ರಣತಂತ್ರ ರೂಪಿಸಿದ್ದರು. ಅವರಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಾಥ್ ಕೊಟ್ಟಿದ್ದರು. ಇತ್ತ ರಮೇಶ ಕತ್ತಿ ಅವರ ಬೆನ್ನಿಗೆ ಮಾಜಿ ಸಚಿವ ಎ.ಬಿ.ಪಾಟೀಲ್ ನಿಂತಿದ್ದರು. ಅಂತಿಮವಾಗಿ ಎಲ್ಲ 15 ನಿರ್ದೇಶಕ ಸ್ಥಾನಗಳನ್ನು ಕತ್ತಿ ಮತ್ತು ಎ.ಬಿ.ಪಾಟೀಲ ಅವರ ಬೆಂಬಲಿಗರೇ ಗೆಲ್ಲುವ ಮೂಲಕ ಜಾರಕಿಹೊಳಿ ಸಹೋದರರಿಗೆ ತೀವ್ರ ಹಿನ್ನೆಡೆ ಉಂಟಾಯಿತು.ಡಿಸಿಸಿ ಬ್ಯಾಂಕ್ ಮೇಲೆ ಜಾರಕಿಹೊಳಿ ಬಣದ ಹಿಡಿತಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 30 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಾರಕಿಹೊಳಿ ಸಹೋದರರು ಪೂರ್ಣ ಪ್ರಮಾಣದಲ್ಲಿ ಗೆದ್ದು ಬೀಗಿದರು. 16 ನಿರ್ದೇಶಕ ಸ್ಥಾನಗಳ ಪೈಕಿ 13ರಲ್ಲಿ ಗೆಲುವು ಸಾಧಿಸಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಡಿಸಿಸಿ ಬ್ಯಾಂಕಿನ ಆಡಳಿತ ಚುಕ್ಕಾಣಿ ಜಾರಕಿಹೊಳಿ ಬಣದ ತೆಕ್ಕೆಗಿ ಬಂದಿತು. ಇದರಿಂದ ರಮೇಶ ಕತ್ತಿ, ಲಕ್ಷ್ಮಣ ಸವದಿ ಅವರಿಗೆ ತೀವ್ರ ಹಿನ್ನಡೆ ಉಂಟಾಯಿತು. ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷರಾದರು. ಈ ಮೂಲಕ 20 ವರ್ಷಕ್ಕೂ ಅಧಿಕ ಕಾಲ ಬ್ಯಾಂಕಿನಲ್ಲಿ ಅಧ್ಯಕ್ಷರಾಗಿದ್ದ ರಮೇಶ ಕತ್ತಿ ಹಿಡಿತ ತಪ್ಪಿತು. ಆದರೆ, 9ನೇ ಬಾರಿ ನಿರ್ದೇಶಕರಾಗಿ ರಮೇಶ ಕತ್ತಿ ದಾಖಲೆ ಬರೆದರು. ಅಚ್ಚರಿ ಎಂಬಂತೆ ಕಾಗವಾಡ ಶಾಸಕ ರಾಜು ಕಾಗೆ ಉಪಾಧ್ಯಕ್ಷರಾದರು. ಇನ್ನು, ಜಾರಕಿಹೊಳಿ ಕುಟುಂಬದ ಯುವ ಕುಡಿಗಳಾದ ರಾಹುಲ್ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ ಅವಿರೋಧವಾಗಿ ನಿರ್ದೇಶಕರಾಗಿ ಡಿಸಿಸಿ ಬ್ಯಾಂಕಿಗೆ ಎಂಟ್ರಿ ಕೊಟ್ಟಿದ್ದಾರೆ. ಬದಲಾದ ರಾಜಕೀಯದಲ್ಲಿ ಜಾರಕಿಹೊಳಿ ಬಣದಿಂದಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಕೂಡ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು.ಪತ್ರಕರ್ತರ ಭವನಕ್ಕೆ ₹ 9.90 ಕೋಟಿ ಮಂಜೂರು
ಬೆಳಗಾವಿ ಪತ್ರಕರ್ತರ ಭವನದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ₹ 9.90 ಕೋಟಿ ಅನುದಾನ ಮಂಜೂರು ಮಾಡಿಸಿದರು. ಈ ಮೂಲಕ ಬೆಳಗಾವಿ ಪತ್ರಕರ್ತರ ಬಹುದಿನಗಳ ಬೇಡಿಕೆಯಾದ ಪತ್ರಿಕಾ ಭವನ ನಿರ್ಮಾಣದ ಕನಸು ನನಸಾಗುತ್ತಿದೆ. ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿದ್ದರೂ ಬೆಳಗಾವಿಯಲ್ಲಿ ಪತ್ರಕರ್ತರ ಭವನದ ಕೊರತೆ ಕಾಡುತ್ತಿತ್ತು. ಪತ್ರಿಕಾ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಜಾಧವ ನಗರದ ತಮ್ಮ ನಿವಾಸದ ಹಿಂಭಾಗದಲ್ಲಿ 15 ಗುಂಟೆ ಜಾಗೆಯನ್ನು ಮಂಜೂರು ಮಾಡಿಸಿದ್ದಾರೆ. ಈಗಾಗಲೇ ಪತ್ರಿಕಾ ಭವನ ಕಟ್ಟಡದ ಶಂಕುಸ್ಥಾಪನೆಯೂ ಆಗಿದೆ.