ಈ ವರ್ಷ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಧಾರವಾಡ ಜಿಲ್ಲೆಯ ಮಟ್ಟಿಗೆ ಹೊಸ ಯೋಜನೆಗಳು ಬರಲಿ ಎನ್ನುವ ಜತೆಗೆ ಈಗಾಗಲೇ ಚಾಲ್ತಿ ಇರುವ ಮಹತ್ವದ ಯೋಜನೆಗಳು ಪೂರ್ಣಗೊಳ್ಳಲಿ. ಬಹುದಿನಗಳ ಬೇಡಿಕೆಗಳು ಈ ವರ್ಷದಲ್ಲಿಯೇ ಈಡೇರಲಿ. ಒಟ್ಟಾರೆ, ಈ ವರ್ಷವು ಭರವಸೆಯ ಬೆಳಕಾಗಲಿ ಎಂಬುದೇ ಜನತೆಯ ಆಶಯ.

ಬಸವರಾಜ ಹಿರೇಮಠ

ಧಾರವಾಡ:

ಹತ್ತು ಹಲವು ಆಶಯ ಹಾಗೂ ನಿರೀಕ್ಷೆ ಕಟ್ಟಿಕೊಂಡು ಬಂದಿದ್ದ 2025ನೇ ವರ್ಷ ಇತಿಹಾಸದ ಪುಟ ಸೇರಿತು. ಈಗೇನಿದ್ದರೂ 2026ನೇ ವರ್ಷದ ನಿರೀಕ್ಷೆ. ಪ್ರತಿ ಕ್ಯಾಲೆಂಡರ್‌ ವರ್ಷದ ಆರಂಭದಲ್ಲಿ ಹೊಸ ಹರುಷ, ಖುಷಿ ಜತೆಗೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹೊಸ ಹೊಸ ನಿರೀಕ್ಷೆಗಳ ಮಹಾಪೂರ ಇದ್ದೇ ಇರುತ್ತದೆ.

ಈ ವರ್ಷ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಧಾರವಾಡ ಜಿಲ್ಲೆಯ ಮಟ್ಟಿಗೆ ಹೊಸ ಯೋಜನೆಗಳು ಬರಲಿ ಎನ್ನುವ ಜತೆಗೆ ಈಗಾಗಲೇ ಚಾಲ್ತಿ ಇರುವ ಮಹತ್ವದ ಯೋಜನೆಗಳು ಪೂರ್ಣಗೊಳ್ಳಲಿ. ಬಹುದಿನಗಳ ಬೇಡಿಕೆಗಳು ಈ ವರ್ಷದಲ್ಲಿಯೇ ಈಡೇರಲಿ. ಒಟ್ಟಾರೆ, ಈ ವರ್ಷವು ಭರವಸೆಯ ಬೆಳಕಾಗಲಿ ಎಂಬುದೇ ಜನತೆಯ ಆಶಯ.

ಇಆರ್‌ಟಿ?

ಅವಳಿ ನಗರ ಮಧ್ಯೆ ಸಂಚರಿಸುತ್ತಿರುವ ಬಿಆರ್‌ಟಿಎಸ್‌ ಬದಲು ಇಆರ್‌ಟಿ ಸಾರಿಗೆ ವ್ಯವಸ್ಥೆ ತರುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಉತ್ಸುಕರಾಗಿದ್ದು, ಈ ವರ್ಷದಲ್ಲಿ ಈ ಕುರಿತಾಗಿ ಮಹತ್ವದ ತೀರ್ಮಾನ ಸಾಧ್ಯತೆಗಳಿವೆ. ಹುಬ್ಬಳ್ಳಿ ಹೊರ ವಲಯದಲ್ಲಿ ಆಗಿರುವ ರಿಂಗ್‌ ರಸ್ತೆ ಮಾದರಿಯಲ್ಲಿ ಧಾರವಾಡ ಹೊರ ವಲಯಕ್ಕೂ ರಿಂಗ್‌ ರಸ್ತೆ ಅಗತ್ಯವಿದ್ದು, ಹೊಸ ವರ್ಷದಲ್ಲಿ ಘೋಷಣೆ ಆಗಲಿ ಎಂಬ ನಿರೀಕ್ಷೆಗಳಿವೆ.

ಕಬ್ಬು ನುರಿಯುವುದೇ?

ಧಾರವಾಡ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆಯಾಗಿ ತಾಲೂಕಿನ ಪುಡಕಲಕಟ್ಟಿ-ಯಾದವಾಡ ಮಧ್ಯೆ ಸ್ಥಾಪನೆಯಾಗುತ್ತಿದ್ದು, ಹೊಸ ವರ್ಷದಲ್ಲಿಯೇ ಕಬ್ಬು ನುರಿಯುವ ಸಾಧ್ಯತೆಗಳು ಹೆಚ್ಚಿವೆ. ಇದು ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರಿಗೆ ವರದಾನವೇ ಹೌದು.

ಬೈಪಾಸ್‌ ಪೂರ್ಣಗೊಳ್ಳಲಿ:

ಸೇವಾ ರಸ್ತೆ ಸೇರಿ ಹತ್ತು ಪಥಗಳಾಗಿ ಅಗಲೀಕರಣವಾಗುತ್ತಿರುವ ಹು-ಧಾ ಮಧ್ಯೆದ ಬೈಪಾಸ್‌ ರಸ್ತೆಯ ಕಾಮಗಾರಿ ಶೇ. 80ರಷ್ಟಾಗಿದ್ದು, ಹೊಸ ವರ್ಷದ ಅಂತ್ಯದೊಳಗೆ ಪೂರ್ಣ ಕಾಮಗಾರಿಯಾಗಿ ಸಂಚಾರಕ್ಕೆ ಮುಕ್ತವಾಗಬೇಕು ಎನ್ನುವ ದೊಡ್ಡ ನಿರೀಕ್ಷೆ ಇದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಹಾಗೂ ಸುತ್ತಲೂ ಮೇಲ್ಸೇತುವೆ ಕಾಮಗಾರಿ ಸಹ ಮುಕ್ತಾಯದ ಹಂತದಲ್ಲಿದ್ದು, ಇದೇ ವರ್ಷವೇ ಸಂಚಾರಕ್ಕೆ ಅನುವಾದರೆ ಹುಬ್ಬಳ್ಳಿ ನಗರದ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ದೊರೆಯಲಿದೆ. 2016ರಿಂದಲೇ ಶುರುವಾಗಿರುವ ಧಾರವಾಡದ ಹೈಟೆಕ್‌ ಇಂಡೋರ್‌ ಸ್ಟೇಡಿಯಂ (₹ 34 ಕೋಟಿ ವೆಚ್ಚದ) 2025ರಲ್ಲಿಯೇ ಶುರುವಾಗಬೇಕಿತ್ತು. ಮತ್ತದೇ ವಿಳಂಬ. ಈಗ ಕೊನೆ ಹಂತದಲ್ಲಿದ್ದು ಮಾರ್ಚ ತಿಂಗಳೊಳಗೆ ಆರಂಭದ ನಿರೀಕ್ಷೆ ಹೊತ್ತುಕೊಳ್ಳಲಾಗಿದೆ.

ಹಳೇ ಯೋಜನೆಗಳಿಗೆ ವೇಗ:

ಇನ್ನು, ಹತ್ತಾರು ವರ್ಷಗಳಿಂದ ಬಾಕಿ ಇರುವ ಕಳಸಾ-ಬಂಡೂರಿ ಯೋಜನೆ ಜಾರಿ, ಬೆಣ್ಣೆ ಹಳ್ಳದ ಅಗಲೀಕರಣ ಕಾಮಗಾರಿ ಬಾಕಿ ಇವೆ. ರಾಜಕೀಯ ಮುಖಂಡರು ಈ ಎರಡೂ ಯೋಜನೆಗಳ ಬಗ್ಗೆ ಬರೀ ಭರವಸೆ ನೀಡಿದ್ದೇ ಬಂತು, ಕ್ರಿಯೆ ಮಾತ್ರ ಎಳ್ಳಷ್ಟು ಇಲ್ಲ. ಬೆಣ್ಣಿಹಳ್ಳ ಪ್ರವಾಹ ತಡೆಗೆ ₹ 1600 ಯೋಜನೆ ವೆಚ್ಚದ ಯೋಜನೆ ಜಾರಿಯಾಗಿದ್ದು ₹ 200 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು 2025ರ ಆಗಸ್ಟ್‌ನಲ್ಲಿ ಹೇಳಿದ್ದರು. ಆದರೆ, ಈ ವರೆಗೂ ಟೆಂಡರ್‌ ಪ್ರಕ್ರಿಯೆಯೇ ಮುಗಿಲ್ಲ. ಈ ವರ್ಷ ಚಾಲನೆ ದೊರೆಯುವ ನಿರೀಕ್ಷೆ ಇದ್ದು ತುಪ್ಪರಿಹಳ್ಳದ 2ನೇ ಹಂತದ ಕಾಮಗಾರಿಗೆ ಅನುದಾನ ನೀಡುವುದು ವರ್ಷದ ನಿರೀಕ್ಷೆ ಇದೆ.

ನಿರಂತರ ನೀರು ಸಿಗಲಿ:

ಅವಳಿ ನಗರದಲ್ಲಿ 10 ವರ್ಷಗಳಿಂದ ನಡೆಯುತ್ತಿರುವ 24 ಗಂಟೆ ನಿರಂತರ ನೀರು ಯೋಜನೆ ಹಾಗೂ ಒಳಚರಂಡಿ ಯೋಜನೆಗಳು ಮುಗಿಯುತ್ತಲೇ ಇಲ್ಲ. ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಪೈಪ್‌ಲೈನ್‌ ಅಳವಡಿಸಿದ್ದು ನಳದ ಸಂಪರ್ಕಿಸಿ ನೀರು ಬರುವುದೆಯೇ ಎಂದು ಕಾದು ನೋಡಬೇಕಿದೆ.

ರಾಜ್ಯಪಾಲರ ಅಂಕಿತ:

ಹಲವು ವರ್ಷಗಳ ಹೋರಾಟದ ಫಲವಾಗಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅನುಮೋದನೆಯಾಗಿದ್ದರೂ ರಾಜಕೀಯ ಮೇಲಾಟದಿಂದ ರಾಜ್ಯಪಾಲರ ರುಜು ಬಿದ್ದಿಲ್ಲ. ಇದು ವರ್ಷ ಅಂಕಿತ ಬೀಳುವ ನಿರೀಕ್ಷೆಯೂ ಇದೆ.ರೈತ ಕುಲ ನೆಮ್ಮದಿಯಾಗಿರಲಿ

ಕಳೆದ ವರ್ಷ ಅತಿವೃಷ್ಟಿಯಿಂದ ಸಾಕಷ್ಟು ಬೆಳೆ ಹಾನಿ, ಮನೆ ಹಾನಿ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಹೀಗಾಗಿ ಹೊಸ ವರ್ಷದಲ್ಲಿ ಸರಿಯಾದ ಸಮಯಕ್ಕೆ ಮಳೆ, ಉತ್ತಮವಾದ ಬೆಳೆ ಹಾಗೂ ಬೆಳೆದ ಬೆಳೆಗೆ ಉತ್ತಮ ಬೆಲೆ ಬರಲಿ ಎನ್ನುವ ಜತೆಗೆ ರೈತ ಕುಲ ನೆಮ್ಮದಿಯ ಜೀವನ ನಡೆಸುವ ವಾತಾವರಣ ಸೃಷ್ಟಿಯಾಗಬೇಕಿದೆ.ಎರಡು ಪ್ರಮುಖ ಚುನಾವಣೆ

2026ರಲ್ಲಿ ಎರಡು ಪ್ರಮುಖ ಚುನಾವಣೆಗೆ ಚುನಾವಣಾ ಆಯೋಗ ಈಗಾಗಲೇ ಸಿದ್ಧತೆ ನಡೆಸಿದೆ. ಜೂನ್‌ನಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಎಸ್‌.ವಿ. ಸಂಕನೂರ ಅವಧಿ ಮುಕ್ತಾಯವಾಗಲಿದ್ದು ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಚುನಾವಣೆ ಜರುಗಬಹುದು. ಇದರೊಂದಿಗೆ ಮೇ ತಿಂಗಳಲ್ಲಿ ಜಿಪಂ ಹಾಗೂ ಗ್ರಾಪಂ ಚುನಾವಣೆ ನಡೆಯುವ ಸಿದ್ಧತೆಗಳು ಇವೆ.