ಬಯಲು ಸೀಮೆಯ ನಾಡು, ಬಿಸಿಲು ನಾಡು ಎಂದೆಲ್ಲ ಕರೆಯಿಸಿಕೊಳ್ಳುವ ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿಗೂ ವಿಪುಲ ಅವಕಾಶ

ಸೋಮರಡ್ಡಿ ಅಳವಂಡಿ ಕೊಪ್ಪಳ

ಮೇಲ್ನೋಟಕ್ಕೆ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಅಭಿವೃದ್ಧಿ ಕಾರ್ಯ ಆಗುತ್ತಿವೆ. ಈಗ ಕೃಷಿ, ತೋಟಗಾರಿಕಾ ಉತ್ಪಾದನೆಯ ಮೂಲಕ ಹೆಸರು ಮಾಡುತ್ತಿದೆ. ಪ್ರವಾಸೋದ್ಯಮದಲ್ಲಿಯೂ ಭಾರಿ ಮುನ್ನೆಲೆಗೆ ಬಂದಿದ್ದು, ಪ್ರತಿ ವರ್ಷ 54 ಲಕ್ಷ ಪ್ರವಾಸಿಗರು ಕೊಪ್ಪಳ ಜಿಲ್ಲೆಗೆ ಆಗಮಿಸುತ್ತಾರೆ. ಹೀಗಾಗಿ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಕಾಯಕಲ್ಪದ ನಿರೀಕ್ಷೆ ಇದ್ದು, 2026ರಲ್ಲಿಯಾದರೂ ಆಗಬೇಕಿದೆ.

ಕೊಪ್ಪಳ ಜಿಲ್ಲೆಯಾಗಿ 28 ವರ್ಷ ಪೂರ್ಣಗೊಳಿಸಿದ್ದು, ನಿರೀಕ್ಷೆಯ ಮಟ್ಟದಲ್ಲಿ ಆಗಬೇಕಾಗಿರುವ ಅಭಿವೃದ್ಧಿಯಾಗಿಲ್ಲ. ಹೀಗಾಗಿ 2026ರಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಕಾಯಕಲ್ಪ ನೀಡಬೇಕಾಗಿದೆ.

ನೀರಾವರಿ ಯೋಜನೆಗಳು: ಬಯಲು ಸೀಮೆಯ ನಾಡು, ಬಿಸಿಲು ನಾಡು ಎಂದೆಲ್ಲ ಕರೆಯಿಸಿಕೊಳ್ಳುವ ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿಗೂ ವಿಪುಲ ಅವಕಾಶ ಇದ್ದು, ಅವುಗಳನ್ನು ಜಾರಿ ಮಾಡುವುದಕ್ಕೆ ಇಚ್ಛಾಶಕ್ತಿಯ ಕೊರತೆಯಿಂದ ತುಂಗಭದ್ರಾ ನದಿಯಿಂದ ಪ್ರತಿ ವರ್ಷ ಸರಾಸರಿ 150 ಟಿಎಂಸಿ ನೀರು ಪೋಲಾಗುತ್ತಿದೆ.

ಸಿಂಗಟಾಲೂರ ಏತ ನೀರಾವರಿ ಯೋಜನೆ 2011ರಲ್ಲಿಯೇ ಲೋಕಾರ್ಪಣೆಗೊಂಡರೂ ಕಳೆದ ಹದಿನೈದು ವರ್ಷಗಳಿಂದ ಎಡಭಾಗದ ಕೊಪ್ಪಳ, ಗದಗ ಜಿಲ್ಲೆಗೆ ನೀರುಣಿಸಲು ಆಗದೆ ಇರುವುದು ನೋವಿನ ಸಂಗತಿ. ಏತ ನೀರಾವರಿ ಪೂರ್ಣಗೊಂಡ ಬಳಿಕವೂ ಒಂದು ಭಾಗಕ್ಕೆ ನೀರು ಪೂರೈಕೆಯಾಗದೆ ಇರುವ ದೇಶದ ಏಕೈಕ ಏತ ನೀರಾವರಿ ಯೋಜನೆ ಇದಾಗಿದೆ. ಪ್ರತಿ ವರ್ಷ 12 ಟಿಎಂಸಿ ನೀರು ಸಂಗ್ರಹಿಸಿದರೂ ಬಳಕೆ ಮಾಡಿಕೊಳ್ಳಲು ಕಾಲುವೆ ಇಲ್ಲ ಎನ್ನುವುದು ಮಾತ್ರ ನಾಚಿಕೆಗೇಡಿನ ಸಂಗತಿಯಾಗಿದೆ. 2026ರಲ್ಲಿ ಆದರೂ ಈ ಯೋಜನೆಯಿಂದ ರೈತರ ಭೂಮಿಗೆ ನೀರುಣಿಸುವಂತಾಗಬೇಕು.

ಕೊಪ್ಪಳ ಏತನೀರಾವರಿ ಯೋಜನೆ ಕುಂಟುತ್ತಾ ಸಾಗಿದ್ದು, ಕೆರೆಗೆ ನೀರು ಬಂದರೂ ರೈತರ ಭೂಮಿಗೆ ನೀರು ಬಂದಿಲ್ಲ. ಯೋಜನೆ ಜಾರಿಯಾದರೆ 2 ಲಕ್ಷ ಎಕರೆ ಪ್ರದೇಶ ನೀರಾವರಿ ಪ್ರದೇಶ ವ್ಯಾಪ್ತಿಗೆ ಒಳಪಡುತ್ತದೆ. ಇದರ ಜತೆಗೆ ಕೆರೆ ತುಂಬಿಸುವ ಯೋಜನೆ, ಹಿರೇಹಳ್ಳ ಬ್ಯಾರೇಜ್ ಗಳಿಗೆ ನೀರು ತುಂಬಿಸುವ ಯೋಜನೆ, ವಿವಿಧ ಏತನೀರಾವರಿ ಯೋಜನೆ ಪೂರ್ಣಗೊಂಡರೇ ಕೊಪ್ಪಳ ಜಿಲ್ಲೆಯಲ್ಲಿರುವ 3.25 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ ಶೇ.70 ರಷ್ಟು ನೀರಾವರಿಯಾಗಲಿದೆ.

ಶಿಕ್ಷಣ ಕ್ಷೇತ್ರ: ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ನೂರಾರು ಸಮಸ್ಯೆಗಳು ಇವೆ. ಅವುಗಳನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ. ಕೊಪ್ಪಳ ವಿಶ್ವವಿದ್ಯಾಲಯ ಪ್ರಾರಂಭವಾಗಿದ್ದರೂ ಅದಕ್ಕಿನ್ನು ಸ್ವಂತ ಕಟ್ಟಡ ಇಲ್ಲ. ಅದಕ್ಕೆ ಬೇಕಾದ ಜಾಗ ನೋಡುವ ಪ್ರಯತ್ನವೂ ನಡೆಯುತ್ತಿಲ್ಲ.

ಉನ್ನತ ಶಿಕ್ಷಣದಲ್ಲಿ ಕೊಪ್ಪಳ ಹಿಂದೆ ಇದ್ದು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಹಾಗೂ ಪದವಿ ನಂತರ ಶೇ. 50 ರಿಂದ 70 ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗುತ್ತಿದ್ದಾರೆ. ಹೀಗಾಗಿ, ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಳವಾಗಿದೆಯಾದರೂ ಅದು ಸಾಕಾಗುತ್ತಿಲ್ಲ.

ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಲ್ಕುವರೆ ಸಾವಿರ ವಿದ್ಯಾರ್ಥಿಗಳು ಇದ್ದರೂ ಸೂಕ್ತ ಮೂಲಭೂತ ಸೌಕರ್ಯ ಇಲ್ಲ. ನೂತನ ಕಟ್ಟಡವಾಗಿದೆಯಾದರೂ ಅದನ್ನು ಬಳಕೆ ಮಾಡಿಕೊಳ್ಳುವ ದಿಸೆಯಲ್ಲಿ ಮೂಲಭೂತ ಸೌಕರ್ಯ ಇಲ್ಲದಾಗಿದೆ.

ವೈದ್ಯಕೀಯ ಕಾಲೇಜು ಆಗಿದ್ದು, ಈಗ ಬಜೆಟ್ ನಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಘೋಷಣೆ ಮಾಡಲಾಗಿದೆ. ಅದು 2026 ರಲ್ಲಿಯಾದರೂ ಪ್ರಾರಂಭವಾಗುವ ದಿಸೆಯಲ್ಲಿ ರಾಜ್ಯ ಸರ್ಕಾರ ಕ್ರಮ ವಹಿಸಬೇಕಾಗಿದೆ.

ಪ್ರವಾಸೋದ್ಯಮ: ಜಿಲ್ಲೆಯಲ್ಲಿ ಅಂಜನಾದ್ರಿ ಪ್ರಸಿದ್ಧಿಗೆ ಬಂದ ಮೇಲೆ ಮತ್ತು ಶ್ರೀ ಹುಲಿಗೆಮ್ಮ ದೇವಸ್ಥಾನ, ಶ್ರೀ ಗವಿಮಠಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದು ಸೇರಿದಂತೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಬರೋಬ್ಬರಿ 54 ಲಕ್ಷ ಪ್ರವಾಸಿಗರು ಬಂದಿದ್ದಾರೆ. ಇದರಲ್ಲೂ ವಿದೇಶಿ ಪ್ರವಾಸಿಗರು ಸೇರಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರವಾಸಿಗರು ಆಗಮಿಸುವ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶ ಇದ್ದು, ಕೂಡಲೇ ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ.

ಅಂಜನಾದ್ರಿಯಲ್ಲಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದ ₹125 ಕೋಟಿ ಅನುದಾನ ಬಳಕೆ ಮಾಡುವಲ್ಲಿಯೂ ನಿಧಾನಗತಿ ಎದ್ದು ಕಾಣುತ್ತಿದ್ದು, ಇದು ಕಾರ್ಯಗತವಾಗಬೇಕಾಗಿದೆ.

ಶ್ರೀಹುಲಿಗೆಮ್ಮ ದೇವಸ್ಥಾನದ ಖಾತೆಯಲ್ಲಿ ₹70 ಕೋಟಿಗೂ ಅಧಿಕ ಹಣ ಕೊಳೆಯುತ್ತಿದ್ದರು ಕಳೆದ ಹತ್ತು ವರ್ಷಗಳಿಂದ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಹೀಗಾಗಿ, ಲಕ್ಷ ಲಕ್ಷ ಭಕ್ತರು ಸೇರಿದಾಗ ಇಲ್ಲಿ ಬಯಲೇ ಶೌಚಾಲಯವಾಗಿ ಮಾರ್ಪಟ್ಟಿರುತ್ತದೆ. ಮಾಸ್ಟರ್ ಪ್ಲಾನ್ ಕಾಲಮಿತಿಯಲ್ಲಿ ಜಾರಿಯಾಗಬೇಕು.

ಕರ್ನಾಟಕ ಏಳು ಅದ್ಭುತಗಳಲ್ಲೊಂದಾಗಿರುವ ಹಿರೇಬೆಣಕಲ್ ಶಿಲಾಶಾಸನಗಳು ಈಗ ವಿಶ್ವಪ್ರಸಿದ್ಧಿಯಾಗುತ್ತಿವೆ. ಇಲ್ಲಿಗೂ ಪ್ರವಾಸಿಗರು ಮತ್ತು ಇತಿಹಾಸ ಅಧ್ಯಯನಕಾರರು ಆಗಮಿಸುತ್ತಿದ್ದು, ಕನಿಷ್ಠ ಸೌಕರ್ಯ ಇಲ್ಲದಂತೆ ಇದೆ. ರಾಜ್ಯ ಸರ್ಕಾರ ಈಗ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ₹80 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇದು ಅನುಷ್ಠಾನವಾಗಬೇಕಾಗಿದೆ.

ದೇವಾಲಯಗಳ ಚಕ್ರವರ್ತಿ ಎಂದೇ ಪ್ರಸಿದ್ಧಿಯಾಗಿರುವ ಇಟಗಿ ಮಹದೇವದೇವಾಲಯ, ಕನಕಗಿರಿಯ ಕನಕಾಚಲಪತಿ ದೇವಸ್ಥಾನ, ನವವೃಂದಾವನ, ಆನೆಗೊಂದಿಗೆ ವ್ಯಾಪ್ತಿಯಲ್ಲಿರುವ ರಾಮಾಯಣ ಕಾಲದ ಐತಿಹ್ಯಗಳ ಸಂರಕ್ಷಣೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿದ್ದೇ ಆದರೆ ಕೊಪ್ಪಳ ಪ್ರವಾಸೋದ್ಯಮದಲ್ಲಿ ಕ್ರಾಂತಿ ಮಾಡಬಹುದು. 2026 ನೇ ವರ್ಷದಲ್ಲಿಯಾದರೂ ಜಾರಿಯಾಗಿರುವ ಯೋಜನೆಗಳು ಪೂರ್ಣಗೊಳ್ಳಬೇಕಾಗಿದೆ.

ಕೃಷಿ, ತೋಟಗಾರಿಕಾ ಕ್ಷೇತ್ರ: ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುವುದಕ್ಕೆ ಅವಕಾಶಗಳು ಇದ್ದು, ಅವುಗಳ ಅನುಷ್ಠಾನ ಆಗಬೇಕಾಗಿದೆ.

ಕೇಂದ್ರದ ಹಣಕಾಸು ಸಚಿವ ನಿರ್ಮಲಾ ಸೀತಾರಾಮ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ ವೇಳೆಯಲ್ಲಿ ರಾಜ್ಯದ 100 ಯುನಿಟ್ ಕೃಷಿ, ತೋಟಗಾರಿಕಾ ಉತ್ಪಾದನೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೇ 10 ಯುನಿಟ್ ಉತ್ಪಾದನೆಯಾಗುತ್ತದೆ ಎಂದು ತೋಟಗಾರಿಕಾ ಕ್ಷೇತ್ರದ ಕುರಿತು ಹೇಳಿದ್ದರು. ಈಗಲೇ ಇಷ್ಟು ಉತ್ಪಾದನೆ ಮಾಡುತ್ತಿರುವಾಗ ಇನ್ನಷ್ಟು ಅಭಿವೃದ್ಧಿಪಡಿಸುವುದಕ್ಕೆ ಸಾಕಷ್ಟು ಅವಕಾಶಗಳು ಇವೆ.

ಕನಕಗಿರಿ ತಾಲೂಕಿನ ಸೀರಾವರಿ ಬಳಿ ತೋಟಾಗಾರಿ ಪಾರ್ಕ್ ನಿರ್ಮಾಣ ಪೂರ್ಣವಾಗಬೇಕಾಗಿದೆ. ಕಾರಟಗಿ ತಾಲೂಕಿನ ನವಲಿ ಬಳಿ ಇರುವ ರೈಸ್ ಪಾರ್ಕ್ ಪೂರ್ಣವಾಗಬೇಕಾಗಿದೆ. ಇದಲ್ಲದೆ ಈಗಾಗಲೇ ರೈತರಿಗೆ ರೈತ ಉತ್ಪನ್ನಗಳನ್ನು ಮೌಲ್ಯವರ್ದನೆ ಮಾಡಿ, ಮಾರಾಟ ಮಾಡುವ ತರಬೇತಿ ನಡೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ರೈತರು ಆರ್ಥಿಕವಾಗಿ ಸಬಲರಾಗಬೇಕಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಆಗಬೇಕಾಗಿರುವ ಕಾರ್ಯಗಳು ಸಾಕಷ್ಟು ಇದ್ದು, 2026 ರಲ್ಲಿ ನೂತನ ತಾಲೂಕುಗಳಲ್ಲಿ ತಾಲೂಕು ಕಚೇರಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವುದಕ್ಕೆ ಆದ್ಯತೆ ನೀಡಲಾಗುವುದು. ತುಂಗಭದ್ರಾ ಜಲಾಶಯದ ಎಲ್ಲ ಕ್ರಷ್ಟಗೇಟ್ ಬದಲಾಯಿಸಿ, ಹೊಸ ಕ್ರಸ್ಟ್ ಗೇಟ್ ಅಳವಡಿಸುವುದು, ರೈತರ ಭೂಮಿಗೆ ನೀರು ನೀಡುವುದು, ತೋಟಗಾರಿಕಾ ಪಾರ್ಕ್, ರೈಸ್ ಪಾರ್ಕ್ ಪೂರ್ಣಗೊಳಿಸುವುದು ಸೇರಿದಂತೆ ಆದ್ಯತೆಯ ಮೇಲೆ ಅಭಿವೃದ್ಧಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಎಂದರು.