ಸಾರಾಂಶ
ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಹಾನಗಲ್ಲ ರಸ್ತೆಯಲ್ಲಿರುವ ಹತ್ತಿ ಜಿನ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯದ 206 ಅಕ್ಕಿ ಚೀಲಗಳನ್ನು ಬಂಕಾಪುರ ಪೊಲೀಸ್ ಹಾಗೂ ತಹಸೀಲ್ದಾರ್ ಕಚೇರಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಬಂಕಾಪುರ: ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಹಾನಗಲ್ಲ ರಸ್ತೆಯಲ್ಲಿರುವ ಹತ್ತಿ ಜಿನ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯದ 206 ಅಕ್ಕಿ ಚೀಲಗಳನ್ನು ಬಂಕಾಪುರ ಪೊಲೀಸ್ ಹಾಗೂ ತಹಸೀಲ್ದಾರ್ ಕಚೇರಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಭಾರಿ ಸುದ್ದಿ ಮಾಡಿರುವ ಪಡಿತರ ಅಕ್ಕಿಯ ಅಕ್ರಮ ದಂಧೆಗೆ ಮತ್ತೊಂದು ನಿದರ್ಶನ ಸಿಕ್ಕಿದಂತಾಗಿದೆ. ಆರೋಪಿಗಳಾದ ಮೈನುದ್ದೀನ್ ಅಬ್ದುಲವಹೀದ ಖತೀಬ ಹಾಗೂ ಸೈಯದಸಾಬಿರ ಅಹ್ಮದ ಸೈಯದ ಶಬ್ಬಿರ ಅಹ್ಮದ ದೊಡ್ಡಮನಿ ಎಂಬವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಪಡಿತರ ಅಕ್ಕಿಯನ್ನು ಬಡವರಿಂದ ಕಿಲೋಗೆ 10, 15, 20ರಂತೆ ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿ ಅವುಗಳನ್ನು ಆರೋಪಿಗಳು ಕಾಳಸಂತೆಯಲ್ಲಿ ಕಿಲೋಗೆ ₹ 30, 40, 50ಕ್ಕೆ ಮಾರುತ್ತಿದ್ದರು ಎಂದು ತಿಳಿದು ಬಂದಿದೆ. ಈ ಅಕ್ರಮ ಕೆಲಸದಲ್ಲಿ ಏಜೆಂಟರು ಭಾಗಿಯಾಗಿರುವುದನ್ನು ಸಾರ್ವಜನಿಕರು ಖಚಿತಪಡಿಸಿದ್ದಾರೆ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿಯ ಗೋದಾಮು ಅಬ್ದುಲವಹೀದ ಅಬ್ದುಲ್ ರೆಹಮಾನಸಾಬ ಖತೀಬ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.ಪಡಿತರ ಅಕ್ಕಿಯ ಒಟ್ಟು 206 ಚೀಲಗಳ ಬೆಲೆ ₹ 2.20 ಲಕ್ಷ ಎಂದು ಅಂದಾಜಿಸಲಾಗಿದೆ. ಅಕ್ರಮ ಪ್ರಕರಣದ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆಹಚ್ಚಲು ತನಿಖೆ ನಡೆಸುವುದಾಗಿ ಪಿಎಸ್‌ಐ ಮಂಜುನಾಥ ಕುರಿ ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಪಿಎಸ್‌ಐ ಮಂಜುನಾಥ ಕುರಿ, ಕಂದಾಯ ನಿರೀಕ್ಷಕ ಶಶಿಕಾಂತ ಖೋತ, ಆಹಾರ ನಿರೀಕ್ಷಕ ರಾಜು ತಳವಾರ ಭಾಗವಹಿಸಿದ್ದರು.