ಭದ್ರಾ ಹಿನ್ನೀರಿಗೆ 21ಲಕ್ಷ ಮೀನು ಮರಿ: ಶಾಸಕ ಟಿ.ಡಿ.ರಾಜೇಗೌಡ

| Published : Dec 07 2024, 12:31 AM IST

ಭದ್ರಾ ಹಿನ್ನೀರಿಗೆ 21ಲಕ್ಷ ಮೀನು ಮರಿ: ಶಾಸಕ ಟಿ.ಡಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಮೀನುಗಾರರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಲಿಂಗಾಪುರ, ರಾವೂರು ಮೀನು ಕ್ಯಾಂಪು, ಮೆಣಸೂರು, ಮಾರಿದಿಬ್ಬ ಭದ್ರಾ ಹಿನ್ನೀರು ಹಾಗೂ ಹೊನ್ನೇಕೊಡಿಗೆ ಹೊಸ ಸೇತುವೆ ಸಮೀಪ ಭದ್ರಾ ಹಿನ್ನೀರಿಗೆ ಮೊದಲನೇ ಕಂತು 21 ಲಕ್ಷ ಮೀನು ಮರಿಗಳನ್ನು ಬಿಟ್ಟಿದ್ದೇವೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ರಾವೂರು ಮೀನುಕ್ಯಾಂಪ್‌,ಲಿಂಗಾಪುರ, ಹೊನ್ನೇಕೊಡಿಗೆ, ಮಾರಿದಿಬ್ಬದ ಭದ್ರಾ ಹಿನ್ನೀರಿಗೆ ಮೀನುಮರಿ ಬಿಡುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮೀನುಗಾರರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಲಿಂಗಾಪುರ, ರಾವೂರು ಮೀನು ಕ್ಯಾಂಪು, ಮೆಣಸೂರು, ಮಾರಿದಿಬ್ಬ ಭದ್ರಾ ಹಿನ್ನೀರು ಹಾಗೂ ಹೊನ್ನೇಕೊಡಿಗೆ ಹೊಸ ಸೇತುವೆ ಸಮೀಪ ಭದ್ರಾ ಹಿನ್ನೀರಿಗೆ ಮೊದಲನೇ ಕಂತು 21 ಲಕ್ಷ ಮೀನು ಮರಿಗಳನ್ನು ಬಿಟ್ಟಿದ್ದೇವೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಶುಕ್ರವಾರ ತಾಲೂಕಿನ ರಾವೂರು ಮೀನುಕ್ಯಾಂಪ್‌, ಲಿಂಗಾಪುರ, ಮೆಣಸೂರು, ಮಾರಿದಿಬ್ಬ, ಹೊನ್ನೇಕೊಡಿಗೆ ಹೊಸ ಸೇತುವೆ ಸಮೀಪದ ಭದ್ರಾ ಹಿನ್ನೀರಿಗೆ ಮೀನುಗಳನ್ನು ಬಿಟ್ಟ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಾರಿ ಮೀನುಗಾರಿಕೆ ಸಚಿವ ಮಂಕಾಳ ಎಸ್‌. ವೈದ್ಯರಿಗೆ ನಾನು ಮನವಿ ಮಾಡಿದ್ದರಿಂದ ಅತಿ ಹೆಚ್ಚು 21 ಲಕ್ಷ ಮೀನುಮರಿಗಳನ್ನು ನೀಡಿದ್ದಾರೆ. ಇದರಲ್ಲಿ ಕಾಡ್ಲಾ, ಗೌರಿ, ರವು ಜಾತಿಗೆ ಸೇರಿದ ಮೀನು ಮರಿಗಳನ್ನು ತಂದಿದ್ದು ಈ ಮೀನುಗಳು ಆರೋಗ್ಯ ದೃಷ್ಠಿಯಿಂದಲೂ ಒಳ್ಳೆಯದು. ಮೀನುಗಾರರು ಈ ಸೌಲಭ್ಯ ಉಪಯೋಗಿಸಿಕೊಂಡು ಆರ್ಥಿಕವಾಗಿ ಮೇಲೆ ಬರಬೇಕು ಎಂದು ಕರೆ ನೀಡಿದರು.

ರಾವೂರಿನಲ್ಲಿ ಗುಳ್ಳ ಮಾರಿಯಮ್ಮ ದೇವಸ್ಥಾನದ ಕಾಮಗಾರಿ ನಡೆಯುತ್ತಿದೆ. ಪ್ರಸ್ತುತ ದೇವಸ್ಥಾನದ ಸಮಿತಿಯವರಿಗೆ ಹಣಕಾಸಿನ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಆ ದೇವಸ್ಥಾನಕ್ಕೆ ಹಣಕಾಸಿನ ನೆರವು ನೀಡಲಾಗುವುದು. ಪಟ್ಟಣದ ಹೌಸಿಂಗ್‌ ಬೋರ್ಡ್ ಕಾಲನಿಯಲ್ಲಿ ರಾಮ ದೇವಸ್ಥಾನಕ್ಕೆ ಅನುದಾನ ನೀಡಿದ್ದೇನೆ. ದೇವಸ್ಥಾನ ಪೂರ್ಣವಾದ ನಂತರ ಲೋಕಾರ್ಪಣೆ ಮಾಡಲಾಗುವುದು ಎಂದರು.

ಅಕಾಲಿಕ ಮಳೆ ಶುರುವಾಗಿರುವುದರಿಂದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮಳೆ ಸಂಪೂರ್ಣ ನಿಂತು ರಸ್ತೆ ಒಣಗಿದ ನಂತರ ಮತ್ತೆ ರಸ್ತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭಿಸಲಾಗುತ್ತದೆ. ರಸ್ತೆ ಬದಿಯ ಜಂಗಲ್‌ ಕ್ಲಿಯರ್‌ ಮುಂದುವರಿಸುತ್ತೇವೆ ಎಂದರು.

ನರಸಿಂಹರಾಜಪುರ ಪಟ್ಟಣದಲ್ಲೂ ಮಳೆಯಿಂದ ರಸ್ತೆ ಹಾಳಾಗಿದೆ. ಪಟ್ಟಣ ಪಂಚಾಯಿತಿ ಸದಸ್ಯರ ಬೇಡಿಕೆಯಂತೆ ಮಳೆ ನಿಂತ ಕೂಡಲೇ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಹಣ ಬಿಡುಗಡೆ ಮಾಡುತ್ತೇನೆ. ಅಗತ್ಯವಿದ್ದ ಕಡೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ರಸ್ತೆಗೆ ಮರು ಡಾಂಬರೀಕರಣ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸಹನದಾಸ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್. ಸದಾಶಿವ, ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷೆ ಬಿಳಾಲುಮನೆ ಉಪೇಂದ್ರ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಗ್ರಾಪಂ ಸದಸ್ಯರಾದ ಸುನೀಲ್ ಕುಮಾರ್‌, ಬಿನು, ಮಂಜು, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಬಿ.ಎಸ್‌.ಸುಬ್ರಮಣ್ಯ, ಶಿವಣ್ಣ, ಎಂ.ಆರ್‌.ರವಿಶಂಕರ್ ಮತ್ತಿತರರು ಇದ್ದರು.

-- ಬಾಕ್ಸ್‌--

3 ಕಿ.ಮೀ. ರೇಲ್ವೆ ಬ್ಯಾರಿಕೇಡ್‌ಗೆ ಹಣ ಮಂಜೂರು

ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಆಲ್ದರ ಭಾಗದಲ್ಲಿ ಕಾಡಿನಿಂದ ನಾಡಿಗೆ ಆನೆಗಳು ಬಾರದಂತೆ 3 ಕಿ.ಮೀ.ವರೆಗೆ ರೇಲ್ವೆ ಹಳಿಗಳ ಬ್ಯಾರಿಕೇಡ್‌ ಹಾಕಲಾಗಿದೆ. ಮತ್ತೆ 3 ಕಿ.ಮೀ. ರೇಲ್ವೆ ಬ್ಯಾರಿಕೇಡ್‌ ಹಾಕಲು ಹಣ ಮಂಜೂರು ಮಾಡುತ್ತೇವೆ. ಹಂತ, ಹಂತವಾಗಿ ರೇಲ್ವೆ ಹಳಿಗಳ ಬ್ಯಾರಿಕೇಡ್ ಹಾಕಲು ಗಮನ ನೀಡಿ ಆನೆಗಳು ನಾಡಿಗೆ ಬಾರದಂತೆ ಶಾಶ್ವತ ಕಾಮಗಾರಿ ಮಾಡುತ್ತೇವೆ. ಈಗಾಗಲೇ ಆನೆಗಳು ಬಾರದಂತೆ ಆನೆ ಕಂದಕ, ಸೋಲಾರ್‌ ಟೆಂಟಕಲ್‌ ಪೆನ್ಸಿನ್ ಹಾಕಿದ್ದರೂ ಅದು ಪ್ರಯೋಜನವಾಗಿಲ್ಲ ಎಂದರು.