ಗವಿಮಠದ ಜಾತ್ರೆಗೆ 210 ಕ್ವಿಂಟಲ್‌ ಅಕ್ಕಿ ದೇಣಿಗೆ

| Published : Jan 14 2025, 01:00 AM IST

ಸಾರಾಂಶ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಭತ್ತದ ಕಣಜ ಕಾರಟಗಿಯಿಂದ ೨೧೦ ಕ್ವಿಂಟಲ್ ಅಕ್ಕಿಯನ್ನು ಸೋಮವಾರ ಕಳುಹಿಸಿಕೊಡಲಾಯಿತು.

ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಹರಿದು ಬರುತ್ತಿರುವ ಆಹಾರ ಸಾಮಗ್ರಿ

ಕನ್ನಡಪ್ರಭ ವಾರ್ತೆ ಕಾರಟಗಿ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಭತ್ತದ ಕಣಜ ಕಾರಟಗಿಯಿಂದ ೨೧೦ ಕ್ವಿಂಟಲ್ ಅಕ್ಕಿಯನ್ನು ಸೋಮವಾರ ಕಳುಹಿಸಿಕೊಡಲಾಯಿತು.

ಈ ವರ್ಷವೂ ಪಟ್ಟಣದ ಅಕ್ಕಿ ಗಿರಣಿ ಮಾಲೀಕರು, ದಲಾಲಿ ವರ್ತಕರು, ವಿವಿಧ ದಾನಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು, ಭಕ್ತರಿಂದ ಸಂಗ್ರಹಿಸಿದ ೨೧೦ ಕ್ವಿಂಟಲ್ ಅಕ್ಕಿ ಚೀಲಗಳನ್ನು ತುಂಬಿದ ಲಾರಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ಇಲ್ಲಿನ ವಿಶೇಷ ಎಪಿಎಂಸಿ ಆವರಣದಿಂದ ಲಾರಿಗೆ ಪೂಜೆ ಸಲ್ಲಿಸಿ ಅಕ್ಕಿ ಚೀಲಗಳನ್ನು ತುಂಬಿ ವಿದ್ಯುಕ್ತವಾಗಿ ಕಳುಹಿಸಿಕೊಡಲಾಯಿತು.

ಈ ವೇಳೆ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ್ ಮಾತನಾಡಿ, ಅಭಿನವ ಗವಿಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯುವ ಗವಿಮಠದ ಜಾತ್ರಾ ಮಹೋತ್ಸವ ಜಗತ್ತ್ ಪ್ರಸಿದ್ಧವಾಗಿದೆ. ತಿಂಗಳು ಪರ್ಯಂತ ನಡೆಯುವ ಈ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಏರ್ಪಡಿಸಲಾಗುವ ಮಹಾದಾಸೋಹಕ್ಕೆ ಭತ್ತದ ಕಣಜದ ಕಾರಟಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಂದ ಸಂಗ್ರಹಿಸಲಾದ ೨೧೦ ಕ್ವಿಂಟಲ್ ಅಕ್ಕಿಯನ್ನು ಕಳುಹಿಸಿಕೊಡಲಾಗುತ್ತಿದೆ ಎಂದರು.ನಮ್ಮ ನಾಡಿನ ಆರಾಧ್ಯ ದೈವಗಳಲ್ಲಿ ಒಂದಾಗಿರುವ ಶ್ರೀ ಗವಿಸಿದ್ದೇಶ್ವರ ಮಹಾಮಹಿಮರು ಈ ನಾಡಿನಲ್ಲಿ ಸಮೃದ್ಧ ಮಳೆ-ಬೆಳೆಯಾಗುವಂತೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಉದ್ಯಮಿ ಕೆ. ಯಂಕಾರೆಡ್ಡೆಪ್ಪ ಚನ್ನಳ್ಳಿ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ ಮಾತನಾಡಿ ಲಕ್ಷಾಂತರ ಜನತೆ ಸೇರುವ ಗವಿಮಠದ ಜಾತ್ರೆ ಈ ಬಾರಿ ಅತ್ಯಂತ ವೈಭವದಿಂದ ನಡೆಯುತ್ತಿದೆ. ಅಜ್ಜನ ಸನ್ನಿಧಿಯಲ್ಲಿ ನಡೆಯುವ ಮಹಾದಾಸೋಹಕ್ಕೆ ನೆರವಾಗಲಿ ಎಂದು ಈ ವರ್ಷವೂ ಅಕ್ಕಿ ರವಾನಿಸುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಾಣಿಜ್ಯೋದ್ಯಮಿಗಳಾದ ಸಣ್ಣ ವೀರೇಶಪ್ಪ ಚಿನಿವಾಲ, ಬಾಲಾಜಿ ಶ್ರೇಷ್ಠಿ, ಸತ್ಯನಾರಾಯಣ ಶ್ರೇಷ್ಠಿ, ದಲಾಲಿ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಪಗಡದಿನ್ನಿ, ಶಿವಶರಣೇಗೌಡ ಯರಡೋಣಾ, ದೇವರಾಜ್ ರಾಮತ್ನಾಳ, ಯಂಕಪ್ಪ ಹತ್ತಿಕಾಳ, ಕಲ್ಯಾಣಪ್ಪ ಹಿರೇಗೌಡರ್, ರಮೇಶ ಮಾವಿನಮಡಗು, ಶರಣಪ್ಪ ಕಟಾಂಬ್ಲಿ, ಮಲ್ಲಪ್ಪ ಮೇಟಿ, ಪ್ರಭು ಉಪನಾಳ, ಶರಣಪ್ಪ ಗುಂಜಳ್ಳಿ, ಬಸವರಾಜ ಚಿನಿವಾಲ, ಪ್ರವೀಣ ಗದ್ದಿ, ಮಲ್ಲಪ್ಪ ಬೆಣಕಲ್, ಮಾರ್ಕಂಡೇಯ, ಮಹಾಬಳೇಶ್ವರ ಹುರಕಡ್ಲಿ, ಬಸವರಾಜ ಜುಟ್ಲದ್, ಮಲ್ಲಪ್ಪ ಬೆನಕನಾಳ ಇದ್ದರು.