ಸಾರಾಂಶ
ನಗರಸಭೆ ಬಿಲ್ ಕಲೆಕ್ಟರ್ ಮಂಜುನಾಥ ಹಂಪಿಯ ಕಡ್ಡಿರಾಂಪುರ ಬಳಿಯ ಹೋಂ ಸ್ಟೇಯೊಂದರಲ್ಲಿ ಇತ್ತೀಚೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.
ಹೊಸಪೇಟೆ: ನಗರಸಭೆ ದ್ವಿತೀಯ ದರ್ಜೆ ಸಹಾಯಕ ಹಾಗೂ ಬಿಲ್ ಕಲೆಕ್ಟರ್ ಮಂಜುನಾಥ (30) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಪಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸೋಮವಾರ ನಗರಸಭೆ ಕಚೇರಿಗೆ ಭೇಟಿ ಕೆಲ ಕಡತಗಳು ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದರು.
ನಗರಸಭೆ ಬಿಲ್ ಕಲೆಕ್ಟರ್ ಮಂಜುನಾಥ ಹಂಪಿಯ ಕಡ್ಡಿರಾಂಪುರ ಬಳಿಯ ಹೋಂ ಸ್ಟೇಯೊಂದರಲ್ಲಿ ಇತ್ತೀಚೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಇದಕ್ಕೂ ಮುನ್ನ ಜನವರಿ ಒಂದರಂದು ವಾಟ್ಸ್ ಆ್ಯಪ್‌ನಲ್ಲಿ ಸಂದೇಶ ರವಾನಿಸಿ, ತನಗೆ ಒತ್ತಡ ಹೆಚ್ಚಾಗುತ್ತಿದ್ದು, ಬಿಲ್ ಕಲೆಕ್ಟರ್ ಕೆಲಸದಿಂದ ತೆಗೆಯಬೇಕು ಎಂದು ಕೇಳಿಕೊಂಡರೂ ಪೌರಾಯುಕ್ತ ಚಂದ್ರಪ್ಪ ಹಾಗೂ ಕಂದಾಯ ಅಧಿಕಾರಿ ನಾಗರಾಜ ತೆಗೆಯುತ್ತಿಲ್ಲ ಎಂದು ಸಂದೇಶ ಕಳುಹಿಸಿ ವಿಷ ಸೇವನೆ ಮಾಡಿದ್ದ. ಬಳಿಕ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ನಗರಸಭೆ ಪೌರಾಯುಕ್ತ ಚಂದ್ರಪ್ಪ ಹಾಗೂ ಕಂದಾಯ ಅಧಿಕಾರಿ ನಾಗರಾಜ ವಿರುದ್ಧ ಹಂಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರಸಭೆಗೆ ಭೇಟಿ ನೀಡಿದ ಹಂಪಿ ಠಾಣೆ ಸಿಪಿಐ ರಾಜೇಶ್ ಭಟಗುರ್ಕಿ, ಪಿಎಸ್ ಐ ಶಿವಕುಮಾರ್ ನಾಯ್ಕ ದಾಖಲಾತಿ ಹಾಗೂ ಕೆಲ ಕಡತಗಳನ್ನು ಪರಿಶೀಲನೆ ನಡೆಸಿದರು. ನಗರಸಭೆ ಪ್ರಭಾರ ಪೌರಾಯುಕ್ತೆ ಭಾರತಿ ಅವರಿಂದ ಕೆಲ ಮಾಹಿತಿಗಳನ್ನುಕೂಡ ಪಡೆದರು. ಈ ನಡುವೆ ಕೆಲ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕೂಡ ವಿಚಾರಣೆ ನಡೆಸಿದರು.
ಒತ್ತಡದ ಹಿನ್ನೆಲೆಯಲ್ಲೇ ಮಂಜುನಾಥ ಮೃತಪಟ್ಟಿದ್ದಾನೆ ಈ ಬಗ್ಗೆ ಕ್ರಮವಹಿಸಬೇಕು ಎಂದು ಮಂಜುನಾಥ ಕುಟುಂಬ ಸದಸ್ಯರು ಕೂಡ ಪೊಲೀಸರ ಬಳಿ ಹೇಳಿದ್ದಾರೆ. ಈ ಬಗ್ಗೆ ಲಿಖಿತ ದೂರು ಕೂಡ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.ಹೊಸಪೇಟೆ ನಗರಸಭೆ ಕಾರ್ಯಾಲಯದಲ್ಲಿ ಸೋಮವಾರ ಕಡತಗಳನ್ನು ಪರಿಶೀಲಿಸಿದ ಹಂಪಿ ಠಾಣೆ ಪೊಲೀಸರು.