ಯರಗೋಳ್‌ ನೀರು ಪೂರೈಕೆಗೆ ₹22 ಕೋಟಿ ಅನುದಾನ

| Published : Jan 04 2025, 12:30 AM IST

ಸಾರಾಂಶ

ಬಂಗಾರಪೇಟೆಯಲ್ಲಿ ಈಗ ಆರಂಭವಾಗಿರುವ ಕಾಮಗಾರಿಗಳನ್ನು ಮುಂದಿನ ಚುನಾವಣೆವರೆಗೆ ಪೂರ್ಣಗೊಳಿಸದಿದ್ದರೆ ಮತ್ತೆ ಮತ ಕೇಳಲು ಬರುವುದಿಲ್ಲ. ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕಿಸುವ ಪ್ರತಿಪಕ್ಷಗಳು ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಬಂದು ನೋಡಲಿ. ಹಿಂದಿನ ಸರ್ಕಾರ ಮಾಡಿದ ಸಾಲವನ್ನು ಕಾಂಗ್ರೆಸ್‌ ಸರ್ಕಾರ ತೀರಿಸಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕ್ಷೇತ್ರ ಅಭಿವೃದ್ಧಿಗೆ ತಾವು ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸದಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ ಕೇಳಲು ನಿಮ್ಮ ಮುಂದೆ ಬರಲ್ಲ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದಲ್ಲಿ ಕನ್ನಡ ಭವನ, ಪತ್ರಕರ್ತರ ಭವನ, ಲಯನ್ಸ್ ಭವನ ಸೇರಿದಂತೆ ಇತರೇ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೬೦ ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿ, ಈಗ ಆರಂಭವಾಗಿರುವ ಕಾಮಗಾರಿಗಳನ್ನು ಮುಂದಿನ ಚುನಾವಣೆವರೆಗೆ ಪೂರ್ಣಗೊಳಿಸದಿದ್ದರೆ ಮತ್ತೆ ಮತ ಕೇಳಲು ಬರುವುದಿಲ್ಲ ಎಂದರು.

ರಸ್ತೆಗಳಿಗೆ ಸಿಸಿ ಕ್ಯಾಮೆರಾ

ಪಟ್ಟಣದಲ್ಲಿ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ಭೇದಿಸಲು ಪೊಲೀಸರಿಗೆ ನೆರವಾಗಲೆಂದು ಪ್ರಮುಖ ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಹಾಗೂ ಪಟ್ಟಣದಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.ಇಷ್ಟೆಲ್ಲಾ ಕೋಟ್ಯಂತರ ರು.ಗಳ ಅಭಿವೃದ್ದಿ ಕಾಮಗಾರಿಗಳು ಪಟ್ಟಣದಲ್ಲೆ ನಡೆಯುತ್ತಿವೆ. ಆದರೆ ವಿರೋಧಪಕ್ಷಗಳ ನಾಯಕರು ಗ್ಯಾರಂಟಿ ಯೋಜನೆಗಳು ಜಾರಿ ಬಳಿಕ ಅಭಿವೃದ್ದಿಗೆ ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕೆ ಮಾಡುತ್ತಿವೆ. ಅವುಗಳು ಒಮ್ಮೆ ಪಟ್ಟಣಕ್ಕೆ ಬಂದು ನೋಡಲಿ. ಈ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಸಾಲವನ್ನು ತೀರಿಸಲು ಒಂದು ವರ್ಷಬೇಕಾಯಿತು ಅದರಿಂದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ವಿಳಂಬವಾಯಿತು ಎಂದರು.

ಯರಗೋಳ್‌ಗೆ ₹22 ಕೋಟಿ

ಈ ಹಿಂದೆ ಯರಗೋಳ್ ಯೋಜನೆ ಆರಂಭಿಸಿದಾಗಲೂ ಅದು ಕನಸಿನ ಮಾತು ಎಂದು ಲೇವಡಿ ಮಾಡಿದರು. ಈಗ ಅದನ್ನೂ ಪುರ್ಣಗೊಳಿಸಿ ಕೋಲಾರ, ಮಾಲೂರು ಹಾಗೂ ಪಟ್ಟಣಕ್ಕೆ ಕುಡಿಯುವ ನೀರಿನ ಅಭಾವ ನೀಗಿಸಲಾಗಿದೆ ಎಂದರಲ್ಲದೆ ಇನ್ನೂ ಪಟ್ಟಣದಲ್ಲಿ ಪೂರ್ಣಪ್ರಮಾಣದಲ್ಲಿ ಯರಗೋಳ್ ನೀರು ಹರಿಯುತ್ತಿಲ್ಲ ಅದಕ್ಕಾಗಿ ೨೨ ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಯೋಜನೆಗೆ ಅನುದಾನ ತರಲಾಗಿದೆ ಎಂದರು.ಜಿಲ್ಲಾಧಿಕಾರಿ ಎಂ.ಆರ್.ರವಿ, ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ, ಸದಸ್ಯರಾದ ಕೆ.ಚಂದ್ರಾರೆಡ್ಡಿ, ಶಂಷುದ್ದಿನ್ ಬಾಬು, ಕೆಡಿಎ ಅಧ್ಯಕ್ಷ ಗೋಪಾಲರೆಡ್ಡಿ, ತಹಸೀಲ್ದಾರ್,ಸುಜಾತ, ತಾಪಂ ಇಒ ರವಿ, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರುಕುಮಾರ್, ಗೋಪಾಲಗೌಡ,ರಂಗರಾಮಯ್ಯ ಇದ್ದರು.