ಎಂಪಿ ಚುನಾವಣೆಯಲ್ಲಿ ಬಿಜೆಪಿಗೆ 22 ಸೀಟು: ಶಾಸಕ ಬಿ. ಸುರೇಶಗೌಡ

| Published : Mar 04 2024, 01:23 AM IST

ಎಂಪಿ ಚುನಾವಣೆಯಲ್ಲಿ ಬಿಜೆಪಿಗೆ 22 ಸೀಟು: ಶಾಸಕ ಬಿ. ಸುರೇಶಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಅಕ್ಕಿ ಕೊಟ್ರೆ ಸರ್ಕಾರ ದಿವಾಳಿಯಾಗ್ತದಂತೆ, ರಾಜ್ಯ ಸರ್ಕಾರ ಕೊಟ್ರೆ ರಾಜ್ಯ ಸಂಪತ್ಭರಿತವಾಗುತ್ತಂತೆ ಎಂದು ಸರ್ಕಾರವನ್ನು ಶಾಸಕ ಬಿ. ಸುರೇಶಗೌಡ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಅಕ್ಕಿ ಕೊಟ್ರೆ ಸರ್ಕಾರ ದಿವಾಳಿಯಾಗ್ತದಂತೆ, ರಾಜ್ಯ ಸರ್ಕಾರ ಕೊಟ್ರೆ ರಾಜ್ಯ ಸಂಪತ್ಭರಿತವಾಗುತ್ತಂತೆ ಎಂದು ಸರ್ಕಾರವನ್ನು ಶಾಸಕ ಬಿ. ಸುರೇಶಗೌಡ ವ್ಯಂಗ್ಯವಾಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 22 ಸ್ಥಾನಗಳು ಲಭಿಸಲಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ತಿಳಿಸಿದರು.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿಗೆ ಕನಿಷ್ಠ 22 ಸೀಟುಗಳು ಸಿಗಲಿವೆ ಎಂದು ಈಗಾಗಲೇ ಅನೇಕ ಸಮೀಕ್ಷೆಗಳು ಹೇಳಿವೆ. ಇದು ಮುಖ್ಯಮಂತ್ರಿಯವರನ್ನು ಹತಾಶಗೊಳಿಸಿರಬೇಕು ಎಂದು ಮೇಲುನೋಟಕ್ಕೇ ಅನಿಸುತ್ತದೆ. ಅದಕ್ಕಾಗಿಯೇ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ನಾವೂ ಗ್ಯಾರಂಟಿ ಯೋಜನೆಗಳ ವಿರೋಧಿಗಳು ಅಲ್ಲ. ಅವು ಸಮರ್ಪಕವಾಗಿ ಜಾರಿಯಾಗಬೇಕು ಎನ್ನುವವರು ನಾವು ಎಂದರು.

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಪ್ರಶಂಸೆ ಮಾಡಿಕೊಳ್ಳುತ್ತದೆ. ಅದಕ್ಕಾಗಿ ಸಮಾವೇಶವನ್ನೂ ಮಾಡುತ್ತದೆ. ಮಾಡಲಿ. ಆದರೆ, ಕೇಂದ್ರ ಸರ್ಕಾರ 29 ರುಪಾಯಿಗೆ ಹತ್ತು ಕೆ.ಜಿ ಅಕ್ಕಿ ಕೊಟ್ಟರೆ ಸರ್ಕಾರ ದಿವಾಳಿಯಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಹೇಳುತ್ತಾರೆ. ಅವರು ಅಕ್ಕಿ ಕೊಟ್ಟರೆ ರಾಜ್ಯ ಸಂಪತ್ಭರಿತವಾಗುತ್ತದೆ. ಜನರಿಗೆ ಅನುಕೂಲವಾಗುತ್ತದೆ. ನಾವು ಅಕ್ಕಿ ಕೊಟ್ಟರೆ ಸರ್ಕಾರ ದಿವಾಳಿಯಾಗುತ್ತದೆಯಂತೆ. ಇದು ಯಾವ ಲೆಕ್ಕ? ಯಾವ ನ್ಯಾಯ? ನಮಗೆ ಒಂದು ಮಾನದಂಡ, ನಿಮಗೆ ಒಂದು ಮಾನದಂಡವೇ ಎಂದು ಪ್ರಶ್ನಿಸಿದರು.

ಸರ್ಕಾರ ಕೇವಲ ಕಲ್ಯಾಣ ಯೋಜನೆ ಮೇಲೆ ಮಾತ್ರ ಖರ್ಚು ವೆಚ್ಚ ಮಾಡಲು ಆಗುವುದಿಲ್ಲ. ಅದರ ಜತೆಗೆ ನೀರಾವರಿ, ಲೋಕೋಪಯೋಗಿ, ಸಾರಿಗೆ, ಆರೋಗ್ಯ, ಶಿಕ್ಷಣ ಇತ್ಯಾದಿ ಕರ್ಯ ಕ್ರಮಗಳ ಮೇಲೂ ಹಣ ವ್ಯಯ ಮಾಡಬೇಕಾಗುತ್ತದೆ. ಈ ಬಜೆಟ್‌ನಲ್ಲಿ ಅದಕ್ಕಾಗಿ ಹಣ ಇರಿಸಿಲ್ಲ ಎಂದಲ್ಲ. ಆದರೆ, ಅದರ ಪ್ರಮಾಣ ಕಡಿಮೆಯಾಗುತ್ತಿರುವುದು ಎದ್ದು ಕಾಣುತ್ತದೆ ಎಂದರು.

ಎರಡು ಉದಾಹರಣೆ ಕೊಡಬಹುದಾದರೆ, ಕಳೆದ ವರ್ಷದ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿಯೇ ನೀರಾವರಿಗಾಗಿ ಇಟ್ಟ ಹಣ ಶೇ. 17 ರಷ್ಟು ಕಡಿಮೆಯಾಗಿತ್ತು. ಗ್ರಾಮೀಣಾಭಿವೃದ್ಧಿ ಯೋಜನೆಗಳಿಗಾಗಿ ಇಟ್ಟ ಹಣದಲ್ಲಿಯೂ ಶೇ. 13 ರಷ್ಟು ಕೊರತೆಯಾಗಿತ್ತು. ಕಳೆದ ಸಾರಿಗಿಂತ ಈ ಸಾರಿ ನೀರಾವರಿಗೆ ಒಂದಿಷ್ಟು ಹಣ ಹೆಚ್ಚುವರಿಯಾಗಿ ನಿಗದಿ ಮಾಡಿದ್ದರೂ ಶೇಕಡವಾರು ಪ್ರಮಾಣ ಕಡಿಮೆ ಎನ್ನುವಂತೆಯೇ ಇದೆ ಎಂದರು.

ಈ ಸರ್ಕಾರದಲ್ಲಿ ಎರಡೂವರೆ ವರ್ಷದ ನಂತರ ಅಧಿಕಾರ ಹಂಚಿಕೆಯಾಗುತ್ತದೆ ಎಂಬ ವದಂತಿ ಇವೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗುವುದನ್ನು ನಮಗೂ ನೋಡುವ ಆಸೆಯಿದೆ. ಆಗಲಾದರೂ ಅವರು ಮೇಕೆದಾಟು, ಎತ್ತಿನಹೊಳೆ ಯೋಜನೆಗಳೂ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಿ ಆ ಯೋಜನೆಗಳು ಸಾಕಾರಗೊಳ್ಳುವಂತೆ ಮಾಡಲಿ ಎಂದು ನಾನು ಆಶಿಸುತ್ತೇನೆ ಎಂದರು.

ಮುಖ್ಯಮಂತ್ರಿಗಳು ತಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಬೇಕು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಕರೆಯನ್ನೂ ಕೊಡುತ್ತಾರೆ. ಇದು ವಿಪರ್ಯಾಸ. ಗ್ಯಾರಂಟಿ ಯೋಜನೆಗಳು ಅಷ್ಟು ಪ್ರಸಿದ್ಧವಾಗಿದ್ದರೆ ಮುಖ್ಯಮಂತ್ರಿಗಳನ್ನು ಬಿಟ್ಟು ಬೇರೆ ಯಾವ ಮಂತ್ರಿಗಳಾಗಲೀ, ಶಾಸಕರಾಗಲೀ ಏಕೆ ಮುಖ್ಯಮಂತ್ರಿಗಳ ಹಾಗೆಯೇ ಮಾತನಾಡುತ್ತಿಲ್ಲ ಎಂದು ತಿಳಿಸಿದರು.