ಕನ್ನಡಪ್ರಭ ವಾರ್ತೆ ಮುಂಡಗೋಡ

ಇಲ್ಲಿಯ ಸಿವಿಲ್ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ೨೨೦ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

ನ್ಯಾಯಾಧೀಶೆ ಅಕ್ಷತಾ ಸಿ.ಆರ್. ನ್ಯಾಯಿಕ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದರೆ, ನ್ಯಾಯಕೇತರ ಸಂಧಾನಕಾರರಾಗಿ ವಕೀಲೆ ಗೀತಾ ಡಿ.ಕೆ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ೨೪ ಎನ್.ಐ ಆ್ಯಕ್ಟ್ ಪ್ರಕರಣಗಳು, ೩೮ ಅಮಲ್ದಾರಿ ಪ್ರಕರಣಗಳು, ೫ ಮೂಲದಾವಾ ಪ್ರಕರಣಗಳು, ೪೫ ಜನನ-ಮರಣ ಪ್ರಕರಣಗಳು, ೧ ಪಿಸಿಆರ್ ಪ್ರಕರಣ, ೨ ಕ್ರಿಮಿನಲ್ ಮಿಸಿಲೆನಿಯಸ್ ಪ್ರಕರಣ, ೫ ಐಪಿಸಿ ಪ್ರಕರಣ ಹಾಗೂ ೧೦೦ ಕೆಪಿ ಆ್ಯಕ್ಟ್ ಪ್ರಕರಣಗಳು ಸೇರಿ ಒಟ್ಟು ೨೨೦ ಪ್ರಕರಣಗಳು ಇತ್ಯರ್ಥಗೊಂಡು ಅವುಗಳ ಪೈಕಿ ₹ ೯೨,೦೦,೭೬೮ ಹಾಗೂ ೩೪,೯೧೧ ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡು ಅವುಗಳ ಪೈಕಿ ₹೭೯,೩೮,೮೮೬ ವಸೂಲಾಗಿ ಸದ್ರಿ ಹಣವನ್ನು ಸರ್ಕಾರಕ್ಕೆ ಹಾಗೂ ಬ್ಯಾಂಕುಗಳಿಗೆ ಭರಣ ಮಾಡಲಾಯಿತು. ಸರಕಾರದ ಪರವಾಗಿ, ಸಹಾಯಕ ಸರಕಾರಿ ಅಭಿಯೋಜಕರಾದ ಪ್ರಸಾದ ರಮೇಶ ಹೆಗಡೆ ೫ ಕ್ರಿಮಿನಲ್ ಪ್ರಕರಣಗಳು ಹಾಗೂ ೧ ಕ್ರಿಮಿನಲ್ ಮಿಸಿಲೆನಿಯಸ್ ಪ್ರಕರಣಗಳನ್ನು ರಾಜಿ ಸಂಧಾನ ಮಾಡುವುದರ ಮೂಲಕ ಇತ್ಯರ್ಥಪಡಿಸಿದರು.

ಮುಂಡಗೋಡ ವಕೀಲರ ಸಂಘದ ಅಧ್ಯಕ್ಷ ಎನ್.ಎ. ನಿಂಬಾಯಿ, ಉಪಾಧ್ಯಕ್ಷ ಎಸ್.ಎಂ. ಮಲವಳ್ಳಿ, ಕಾರ್ಯದರ್ಶಿ ಎಸ್.ಕೆ. ಕೊಳ್ಳಾನವರ, ಖಜಾಂಜಿ ಕೆ.ಎಸ್. ಗುಲ್ಲಾನವರ ಹಾಗೂ ಹಿರಿಯ ವಕೀಲರಾದ ಸಿ.ಎಸ್. ಗಾಣಿಗೇರ, ಕೆ.ಎನ್. ಹೆಗಡೆ, ಬಿ.ಎಫ್. ಪೂಜಾರ, ಗುಡ್ಡಪ್ಪ ಕಾತೂರು ಮುಂತಾದವರು ಉಪಸ್ಥಿತರಿದ್ದರು.