- ಜಗಳೂರು ಶಾಸಕ ದೇವೇಂದ್ರಪ್ಪ ಹೇಳಿಕೆ । ವಿವಿಧೆಡೆ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನಲ್ಲಿ ದಶಕಗಳ ಕಾಲದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಗೌರಿಪುರ ಬಳಿ ₹೨೦೦ ಕೋಟಿ ವೆಚ್ಚದಲ್ಲಿ ೨೨೦ ಕೆವಿ ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ತಾಲೂಕಿನ ಬಿದರಕೆರೆ, ಜಗಳೂರು ಪಟ್ಟಣ ಹಾಗೂ ಚಿಕ್ಕುಜ್ಜಿನಿ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ ₹೧೭.೫೦ ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.


ವಿದ್ಯುತ್ ಸಮಸ್ಯೆಗೆ ಮುಕ್ತಿ:

ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಅನುಮೋದನೆ ದೊರೆತಿದೆ. ಹೊಸ ವಿದ್ಯುತ್ ಕೇಂದ್ರ ಸ್ಥಾಪನೆಯಿಂದ ತಾಲೂಕಿನ ಲೋಡ್ ಶೆಡ್ಡಿಂಗ್ ಹಾಗೂ ಕಡಿಮೆ ವೋಲ್ಟೇಜ್ ಸಮಸ್ಯೆ ನೀಗಲಿದೆ. ರೈತರ ಬೆಳೆಗಳ ಸಂರಕ್ಷಣೆಗಾಗಿ ₹೮ ಕೋಟಿ ವೆಚ್ಚದಲ್ಲಿ ಶೀಥಲೀಕರಣ ಘಟಕ **(Cold Storage)** ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೊಣಚಗಲ್ ರಂಗಸ್ವಾಮಿ ಗುಡ್ಡದ ಭಾಗದಲ್ಲಿ ''''''''ಶ್ರಮಿಕ ಶಾಲೆ'''''''' ಆರಂಭಿಸಲು ಸರ್ಕಾರದಿಂದ ಮಂಜೂರಾತಿ ನೀಡಿದೆ ಎಂದರು.

ಗುಣಮಟ್ಟದ ಕಾಮಗಾರಿ:

ಯಾವುದೇ ಅಭಿವೃದ್ಧಿ ಕೆಲಸಗಳಲ್ಲಿ ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ರಾಜಕೀಯವನ್ನು ಚುನಾವಣೆಗೆ ಸೀಮಿತಗೊಳಿಸಬೇಕು, ಅಧಿಕಾರಕ್ಕೆ ಬಂದ ಮೇಲೆ ರಾಜಧರ್ಮ ಪಾಲಿಸುವುದು ಮುಖ್ಯ. ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರ ಗ್ರಾಮಕ್ಕೂ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜ್, ರೇವಣ್ಣ ಮಂಜುನಾಥ್, ವಕೀಲರಾದ ನಾಗರಾಜ್, ಬಿ.ಮಹೇಶ್ವರಪ್ಪ, ಗುತ್ತಿಗೆದಾರ ದೀಪಕ್ ಪಾಟೀಲ್, ಎಂಜಿನಿಯರ್ ಪುರುಷೋತ್ತಮ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

- - -

-15ಜೆ.ಜಿ.ಎಲ್.1:

ಜಗಳೂರು ತಾಲೂಕಿನ ಗೌರಿಪುರ ಬಳಿ ₹೨೦೦ ಕೋಟಿ ವೆಚ್ಚದಲ್ಲಿ ೨೨೦ ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.