ಸಾರಾಂಶ
ಡಿಡಿಪಿಐ ರವಿಶಂಕರರೆಡ್ಡಿ ಹೇಳಿಕೆ । ಡಯಟ್‌ನಲ್ಲಿ ರಾಜ್ಯ ಶೈಕ್ಷಣಿಕ ಸಾಧನಾ ಸಮೀಕ್ಷೆ ಕಾರ್ಯಾಗಾರ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಈ ಬಾರಿಯೂ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿತ್ರದುರ್ಗದ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲಿದೆ. ಶಾಲಾ ಕೊಠಡಿ ದುರಸ್ತಿ, ಶೌಚಾಲಯ ನಿರ್ಮಾಣ, ಹೊಸ ಕೊಠಡಿಗಳ ನಿರ್ಮಾಣಕ್ಕೆ 224 ಕೋಟಿ ರೂಪಾಯಿಗಳ ಅನುದಾನ ಜಿಲ್ಲೆಗೆ ಅನುಮೋದನೆಯಾಗಿದೆ. ಉತ್ತಮ ಭೌತಿಕ ಸಂಪನ್ಮೂಲಗಳ ಜತೆಗೆ ಶಿಕ್ಷಕರು ಜ್ಞಾನ ಸಂಪಾದನೆ ಮಾಡಿಕೊಳ್ಳುವುದರ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರವಿಶಂಕರರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಶೈಕ್ಷಣಿಕ ಉನ್ನತಿಗೆ ಗಂಭೀರ ಪ್ರಯತ್ನ ನಡೆಸಿ:ನಗರದ ಡಯಟ್‍ನಲ್ಲಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಮತ್ತು ಡಯಟ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಅಧಿಕಾರಿಗಳಿಗೆ ಗುರುವಾರ ಆಯೋಜಿಸಿದ್ದ ರಾಜ್ಯ ಶೈಕ್ಷಣಿಕ ಸಾಧನಾ ಸಮೀಕ್ಷೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರಥಮ ಸ್ಥಾನ ಪಡೆಯಲು ಶಿಕ್ಷಕರಿಗೆ ವಿಷಯವಾರು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಸಂತಸದಾಯಕ ವಾತಾವರಣದಿಂದ ಸಂತಸದಾಯಕ ಕಲಿಕೆಯಾಗುತ್ತದೆ. ಚಿತ್ರದುರ್ಗ ಜಿಲ್ಲೆ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿನ ಮಕ್ಕಳ ಶೈಕ್ಷಣಿಕ ಉನ್ನತಿಗೆ ಗಂಭೀರ ಪ್ರಯತ್ನ ನಡೆಸಬೇಕು. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ರವಿಶಂಕರರೆಡ್ಡಿ ಹೇಳಿದರು. ಜಿಲ್ಲಾ ನೋಡಲ್ ಅಧಿಕಾರಿ ಎಸ್.ಜ್ಞಾನೇಶ್ವರ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಶೈಕ್ಷಣಿಕ ಸಾಧನಾ ಸಮೀಕ್ಷೆಗೆ ಆಯ್ಕೆಯಾಗಿರುವ 514 ಶಾಲೆಗಳಲ್ಲಿ 3,6 ಮತ್ತು 9ನೇ ತರಗತಿಯ 14,723 ಮಕ್ಕಳಿಗೆ ಭಾಷಾ ವಿಷಯ ಮತ್ತು ಕೋರ್ ವಿಷಯಗಳಿಗೆ ನವೆಂಬರ್ 3 ರಂದು ಶೈಕ್ಷಣಿಕ ಸಾಧನಾ ಸಮೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ನೋಡಲ್ ಅಧಿಕಾರಿ ಎಚ್.ಟಿ. ಚಂದ್ರಣ್ಣ, ಸಹ ನೋಡಲ್ ಅಧಿಕಾರಿಗಳಾದ ವಿ.ಕನಕಮ್ಮ, ಎಚ್. ಗೋವಿಂದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೈಯದ್ ಮೋಸಿನ್, ಶ್ರೀನಿವಾಸ್, ನಾಗಭೂಷಣ್, ಉಪನ್ಯಾಸಕರಾದ ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ಸಿ.ಎಸ್.ಲೀಲಾವತಿ, ಎನ್.ರಾಘವೇಂದ್ರ, ತಾಂತ್ರಿಕ ಸಹಾಯಕ ಆರ್.ಲಿಂಗರಾಜು, ಎಲ್ಲಾ ತಾಲೂಕಿನ ಬಿಆರ್ ಸಿಗಳು, ಇಸಿಓ ಗಳು, ಬಿಆರ್‌ಪಿಗಳು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ------------------------------ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶೈಕ್ಷಣಿಕ ಭಾಗಿದಾರರ ಪಾತ್ರ ಮುಖ್ಯ. ಬದ್ಧತೆ, ಸಮರ್ಪಣಾಭಾವದಿಂದ ಶಿಕ್ಷಕರು ಕೆಲಸ ನಿರ್ವಹಿಸುವುದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತದೆ. ಜಿಲ್ಲಾ ಹಂತದಲ್ಲಿ ಶೈಕ್ಷಣಿಕ ಸಾಧನಾ ಸಮೀಕ್ಷೆಗೆ ಚಿತ್ತದುರ್ಗ ಜಿಲ್ಲೆಯಿಂದ 514 ಶಾಲೆಗಳು ಆಯ್ಕೆಯಾಗಿದ್ದು ತಾಲೂಕಿನ ಬಿಇಓಗಳು ಪೂರ್ಣ ಜವಾಬ್ದಾರಿಯೊಂದಿಗೆ ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕು..
- ಎಂ.ನಾಸಿರುದ್ದೀನ್ ಡಯಟ್ ಪ್ರಾಚಾರ್ಯ----------------------------