ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಬುಧವಾರದಿಂದ ಆರಂಭಿಕವಾಗಿ 2250 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಮಧ್ಯಾಹ್ನ ೧೨ ಗಂಟೆಯ ವೇಳೆಗೆ ಅಣೆಕಟ್ಟೆಯ ಗೇಟ್ ಮೂಲಕ ನಾಲೆಗಳಿಗೆ ನೀರನ್ನು ಹರಿಸಲಾಗಿದ್ದು, ನೀರಿಗೆ ಬೇಡಿಕೆ ಇಡುತ್ತಿದ್ದ ರೈತರಿಗೆ ಸಮಾಧಾನ ತಂದಿದೆ.ಈ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜು.೮ರಿಂದಲೇ ನಾಲೆಗಳಿಗೆ ನೀರು ಹರಿಸುವುದಾಗಿ ತಿಳಿಸಿದ್ದರಾದರೂ, ಆಧುನೀಕರಣ ಕಾಮಗಾರಿ ಕೆಲಸ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಎರಡು ದಿನ ತಡವಾಗಿ ನೀರನ್ನು ಹರಿಸಲಾಗಿದೆ.
ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ ೧೨೪.೮೦ ಅಡಿ ಇದ್ದು, ಹಾಲಿ ಅಣೆಕಟ್ಟೆಯ ನೀರಿನ ಮಟ್ಟ 104.2 ಅಡಿ ಇದೆ. ಅಣೆಕಟ್ಟೆಗೆ 7267 ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, ಅಣೆಕಟ್ಟೆಯಿಂದ 2250 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 26.284 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.ಕೆರೆ-ಕಟ್ಟೆಗಳನ್ನು ತುಂಬಿಸಲು ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಇನ್ನೂ ಮುಂಗಾರು ಹಂಗಾಮಿಗೆ ಕಟ್ಟು ನೀರಿನ ಆಧಾರದ ಮೇಲೆ ನೀರು ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಹೇಮಾವತಿ ವ್ಯಾಪ್ತಿ ನಾಲೆಗಳಿಗೆ ನೀರು ಬಿಡಲು ರಾಜೇಗೌಡ ಆಗ್ರಹಕೆ.ಆರ್.ಪೇಟೆ:
ಕೆಆರ್‌ಎಸ್ ಅಣೆಕಟ್ಟೆಯಿಂದ ವಿಸಿ ನಾಲೆಗಳಿಗೆ ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ನೀರು ಬಿಟ್ಟಿದೆ. ಆದರೆ, ಹೇಮಾವತಿ ಜಲಾನಯನ ಪ್ರದೇಶದ ಕಾಲುವೆಗಳಿಗೆ ನೀರು ಹರಿಸದೆ ಸರ್ಕಾರ ತಾರತಮ್ಯ ನೀತಿ ಪ್ರದರ್ಶಿಸುತ್ತಿದೆ ಎಂದು ರೈತ ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ಜಲಾನಯನ ಪ್ರದೇಶದ ಜನ ನೀರು ಕುಡಿಯಬಾರದೆ ಎಂದು ಪ್ರಶ್ನಿಸಿದ ಅವರು, ಸರ್ಕಾರ ತಕ್ಷಣವೇ ಹೇಮಾವತಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿ ಸಂಪೂರ್ಣ ಒಣ ಪ್ರದೇಶದಲ್ಲಿರುವ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ತಾಲೂಕಿನ ಕೆರೆ-ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸುವಂತೆ ಒತ್ತಾಯಿಸಿದರು.
ನದಿ ಅಣೆಕಟ್ಟೆ ನಾಲೆಗಳಿಗೂ ನೀರು ಹರಿಸಿ:ತಾಲೂಕು ವ್ಯಾಪ್ತಿಯಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಂದಗೆರೆ ಹಾಗೂ ಹೇಮಗಿರಿ ಅಣೆಕಟ್ಟೆಗಳಿಗೂ ಕಾವೇರಿ ಜಲ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ಮಂದಗೆರೆ ಮತ್ತು ಹೇಮಗಿರಿ ಅಣೆಕಟ್ಟೆಗಳು ಮೆಟ್ಟೂರು ಹಾಗೂ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣಕ್ಕೂ ಮುಂಚಿನ ಅಣೆಕಟ್ಟೆಗಳಾಗಿವೆ ಎಂದರು.
ಮಳೆಗಾಲ ಆರಂಭದ ಜೂನ್ ತಿಂಗಳ ಆರಂಭದಲ್ಲಿಯೂ ಈ ಅಣೆಕಟ್ಟೆ ನಾಲೆಗಳಿಗೆ ನೀರು ಹರಿಸಬೇಕು. ಆದರೆ, ನೀರಾವರಿ ಇಲಾಖೆ ಇದುವರೆಗೂ ನದಿ ಅಣೆಕಟ್ಟೆ ನಾಲೆಗಳಿಗೆ ನೀರು ಹರಿಸಿಲ್ಲ. ಈ ನಾಲಾ ವ್ಯಾಪ್ತಿಯ ರೈತರು ಭೂಮಿ ಹದ ಮಾಡಿಕೊಂಡಿದ್ದು ಭತ್ತದ ಒಟ್ಟಲು ಹಾಕಲು ಕಾಯುತ್ತಿದ್ದಾರೆ ಎಂದರು.ಸಕಾಲದಲ್ಲಿ ನಾಲೆಗಳಲ್ಲಿ ನೀರು ಹರಿಸದಿದ್ದರೆ ಭತ್ತದ ಇಳುವರಿ ಕುಸಿದು ರೈತರು ನಷ್ಠಕ್ಕೆ ಒಳಗಾಗುತ್ತಾರೆ. ನೀರಾವರಿ ಇಲಾಖೆ ತಕ್ಷಣವೇ ನದಿ ಅಣೆಕಟ್ಟೆಗೆ ಸೇರಿದ ಮಂದಗೆರೆ ಹಾಗೂ ಹೇಮಗಿರಿ ನಾಲೆಗಳಿಗೆ ನೀರು ಹರಿಸಬೇಕು. ನಾಲೆಗಳಿಗೆ ನೀರು ಬಿಡದಿದ್ದರೆ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ ಚಳವಳಿಯ ದಾರಿ ಹಿಡಿಯಲಿದೆ ಎಂದು ಎಚ್ಚರಿಸಿದರು.
ಕೆಆರ್‌ಎಸ್ ಜಲಾಶಯ ನೀರಿನ ಮಟ್ಟಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 104.20 ಅಡಿಒಳ ಹರಿವು – 7267 ಕ್ಯುಸೆಕ್
ಹೊರ ಹರಿವು – 2250 ಕ್ಯುಸೆಕ್ನೀರಿನ ಸಂಗ್ರಹ – 26.284 ಟಿಎಂಸಿ