ಎರಡನೇ ಬಾರಿಗೆ ಬಳ್ಳಾರಿಯಲ್ಲಿ ಗದ್ದಿಕೆರೆಯ ಚರಂತಪ್ಪಜ್ಜ ಶ್ರೀಗಳ ಪುಣ್ಯಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ

ಬಳ್ಳಾರಿ: ಮಹಾಮಹಿಮಗುರು, ಕಲಿಯುಗದ ಕಾಮಧೇನು ಎಂದೇ ಪ್ರಸಿದ್ಧರಾಗಿದ್ದ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆಯ ಚರಂತಪ್ಪಜ್ಜ ಶ್ರೀಳ 22ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಜೂ.11, 12ರಂದು ಸಂಜೆ 6.30ರಿಂದ 9 ಗಂಟೆವರೆಗೆ ಹಾಗೂ ಜೂ.13ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆವರೆಗೆ ನಗರದ ಪಾರ್ವತಿನಗರದಲ್ಲಿರುವ ಬಸವಭವನದಲ್ಲಿ ಜರುಗಲಿದೆ ಎಂದು ನಂದಿಪುರ ಪುಣ್ಯಕ್ಷೇತ್ರದ ಪ.ಪೂ.ಡಾ.ಮಹೇಶ್ವರ ಸ್ವಾಮಿಗಳು ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಭಾಗದ ಭಕ್ತರ ಒತ್ತಾಸೆಯಂತೆ ಎರಡನೇ ಬಾರಿಗೆ ಬಳ್ಳಾರಿಯಲ್ಲಿ ಗದ್ದಿಕೆರೆಯ ಚರಂತಪ್ಪಜ್ಜ ಶ್ರೀಗಳ ಪುಣ್ಯಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಪುಣ್ಯೋತ್ಸವ ಸ್ಮರಣೆ ಕಾರ್ಯಕ್ರಮದಲ್ಲಿ ಗುರುಚರಂತಾರ್ಯ ಶ್ರೀ ಪ್ರಶಸ್ತಿ ಪ್ರದಾನ, ಗ್ರಂಥಗಳ ಲೋಕಾರ್ಪಣೆ, ಗ್ರಂಥಗಳ ಪ್ರದರ್ಶನ, ಉಚಿತ ಕಣ್ಣಿನ ತಪಾಸಣೆ ಚಿಕಿತ್ಸೆ, ರಕ್ತದಾನಶಿಬಿರ, ಹೃದಯ ತಪಾಸಣೆ ಶಿಬಿರ, ಎಲುಬು ಕೀಲು ಮೂಳೆಗಳ ತಪಾಸಣೆ ಶಿಬಿರ, ಭರತನಾಟ್ಯ, ಯೋಗ ಥೆರಪಿ, ಸಂಗೀತ ಹಾಗೂ ಹಾಸ್ಯೋತ್ಸವ ಕಾರ್ಯಕ್ರಮಗಳು ಜರುಗಲಿವೆ.

ಜೂ.11ರಂದು ಸಂಜೆ 6.30ಕ್ಕೆ ಅಕ್ಕನ ಬಳಗದಿಂದ ಸಿದ್ಧಾಂತ ಶಿಖಾಮಣಿ ಲಲಿತಾ ಸಹಸ್ರನಾಮ ಪಾರಾಯಣವಿದೆ. ಬಳಿಕ 579 ಕೃತಿಗಳ ಕರ್ತೃ ಎಸ್‌.ವಿ. ಪಾಟೀಲ್ ಗುಂಡೂರವರ ಪ್ರಕಟಿತ ಪುಸ್ತಕಗಳ ಪ್ರದರ್ಶನ, ಕೂಡ್ಲಿಗಿಯ ಯೋಗ ಥೆರಪಿಸ್ಟ್ ಎನ್‌.ಎಲ್‌.ಸುಮಲತಾ ಯೋಗ ಥೆರಪಿ ನಡೆಸಿಕೊಡವರು. ಬಳಿಕ ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿಯ ಶತನಾಮಾವಳಿ ಗ್ರಂಥ ಬಿಡುಗಡೆಯಾಗಲಿದೆ. ಬೆಂಗಳೂರಿನ ಜನಸಂಖ್ಯಾತಜ್ಞ ಡಾ.ಎಂ.ಶಿವಮೂರ್ತಿ ಗ್ರಂಥ ಲೋಕಾರ್ಪಣೆ ಮಾಡುವರು. ನಂತರ ಜರುಗುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಕುರಿತು ಡಾ.ರಾಜಶ್ರೀ ಪಾಟೀಲ್ ಅವರು ಉಪನ್ಯಾಸ ನೀಡುವರು. ಮಹಾದೇವಯ್ಯಸ್ವಾಮಿಗಳಿಂದ ಪ್ರವಚನ, ಶರಣಯ್ಯಗವಾಯಿಗಳಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

ಜೂ.12ರಂದು ಸಂಜೆ 6.30ಕ್ಕೆ ವಚನಾನು ಸಂಧಾನ ಗ್ರಂಥ ಲೋಕಾರ್ಪಣೆ ಸಮಾರಂಭ ಜರುಗಲಿದೆ. ಸಂಡೂರು ವಿರಕ್ತಮಠ ಪ್ರಭುಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ವೀವಿ ಸಂಘದ ಅಧ್ಯಕ್ಷ ಉದ್ಘಾಟಿಸುವರು. ಸಂಶೋಧಕ ಡಾ.ಸಿ.ಶಿವಕುಮಾರ ಸ್ವಾಮಿ ಗ್ರಂಥ ಲೋಕಾರ್ಪಣೆ ಮಾಡುವರು. ಸಕ್ಕರೆ ಕರೆಡೀಶನವರ ಮರಿಕಲ್ಯಾಣ ಕಲ್ಪನೆ ಕುರಿತು ಅಮಾತಿ ಬಸವರಾಜ್ ಉಪನ್ಯಾಸ ನೀಡುವರು.

ಜೂ.13ರಂದು ಬೆಳಿಗ್ಗೆ 10.30ಕ್ಕೆ ದಿವ್ಯಪ್ರಕಾಶ ಗ್ರಂಥ ಲೋಕಾರ್ಪಣೆಯಾಗಲಿದೆ. ಎಸ್‌.ವಿ. ಪಾಟೀಲ್ ಗ್ರಂಥ ಕುರಿತು ಉಪನ್ಯಾಸ ನೀಡುವರು. ಇದೇ ವೇಳೆ ಗುರುಚರಂತಾರ್ಯ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಬಳ್ಳಾರಿಯ ವೈದ್ಯ ಡಾ.ನಾಗರಾಜ್ ಕೊಂಡ್ಲಹಳ್ಳಿ, ಡಾ.ಚಂದ್ರಮೌಳಿ ಗಡಗಿ, ಕೂಡ್ಲಿಗಿಯ ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್, ಹಿಂದೂಸ್ತಾನಿ ಗಾಯಕ ದೊಡ್ಡಬಸವ ಗವಾಯಿ ಡಿ.ಕಗ್ಗಲ್, ಸಮಾಜಸೇವಕ ಮಹಾನಂದಿ ಬಸವಲಿಂಗಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ, ಉದ್ಯಮಿ ನಾರಾ ಸೂರ್ಯನಾರಾಯಣ ರೆಡ್ಡಿ, ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ಪಿ.ಗಾದೆಪ್ಪ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ವೀವಿ ಸಂಘದ ಅಧ್ಯಕ್ಷ ಡಾ.ಕಣೇಕಲ್ ಮಹಾಂತೇಶ್ ಸೇರಿದಂತೆ ನಗರದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ನಂದಿಪುರ ಶ್ರೀಗಳು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ, ಸಮಾಜದ ಪ್ರಮುಖರಾದ ದಂಡಿನ ಶಿವಾನಂದ, ಸಿದ್ಧರಾಮಕಲ್ಮಠ, ವಾಲ್ಮೀಕಿ ಸಮಾಜದ ರಾಜ್ಯಮುಖಂಡ ಜೋಳದರಾಶಿ ತಿಮ್ಮಪ್ಪ, ಕಲ್ಗುಡಿ ಬಸವರಾಜ್, ಬೂದಿಹಾಳುಮಠದ ಎರ್ರಿಸ್ವಾಮಿ, ಬದ್ರಿನಾಥ, ಚನ್ನಬಸಯ್ಯಸ್ವಾಮಿ, ವೀರೇಶ ಗಂಗಾವತಿ, ವಾಮಣ್ಣ, ಡಾ.ರೇಣುಕಮ್ಮ, ಭದ್ರಿನಾಥ, ಡಾ.ರೇಣುಕಾ, ಹನುಮೇಶ್ ಉಪ್ಪಾರ್ ಸುದ್ದಿಗೋಷ್ಠಿಯಲ್ಲಿದ್ದರು.