ಸಾರಾಂಶ
ಸಚಿವ ಮಹದೇವಪ್ಪ ಮುಂದೆ ದಂಡು । ಜನರನ್ನು ಕರೆತಂದು ಶಕ್ತಿ ಪ್ರದರ್ಶನ ಮಾಡಿದ ಆಕಾಂಕ್ಷಿಗಳುಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಇಚ್ಚಿಸಿರುವ ಆಕಾಂಕ್ಷಿಗಳನ್ನು ಖುದ್ದು ಭೇಟಿಯಾಗಿ ಸಮಾಲೋಚನೆ ನಡೆಸಲು ಶನಿವಾರ ಚಿತ್ರದುರ್ಗಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಪೈಪೋಟಿ , ಹುಮ್ಮಸ್ಸು ಕಂಡು ಬೆರಗಾದರು. ಕೆಲವು ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಕರೆತಂದು ಶಕ್ತಿ ಪ್ರದರ್ಶನ ಮಾಡಿದರೆ, ಮತ್ತೊಂದಿಷ್ಟು ಮಂದಿ ಪ್ಲೇಕಾರ್ಡ್ ಹಿಡಿದು ಸಚಿವ ಮಹದೇವಪ್ಪ ಅವರ ಮುಂದೆ ಪರೇಡ್ ನಡೆಸಿದರು. ಸಂಜೆ ಐದು ಗಂಟೆಯಾದರೂ ಮಹದೇವಪ್ಪ ಆಕಾಂಕ್ಷಿಗಳೊಂದಿಗಿನ ಸಮಾಲೋಚನೆ ನಡೆದೇ ಇತ್ತು. ಇದರಿಂದಾಗಿ ಜಿಲ್ಲಾಧಿಕಾರಿ ಕಚೇರಿ ವೃತ್ತ ಕಿಕ್ಕಿರಿದು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.ಡಿಸೆಂಬರ್ 9ರಂದು ಮಹದೇವಪ್ಪ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಅಹವಾಲು ಆಲಿಸಬೇಕಿತ್ತು. ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಗಿ ಡಿಸೆಂಬರ್ 16ಕ್ಕೆ ನಿಗದಿಯಾಗಿತ್ತು. ಹಾಗಾಗಿ ಹಳೇ ಬ್ಯಾನರ್ , ಫ್ಲೆಕ್ಸ್ ಗಳ ಕಟ್ಟಿ ಕಾಂಗ್ರೆಸ್ ಕಚೇರಿಯ ಮುಳುಗಿಸಲಾಗಿತ್ತು. ಒನಕೆ ಓಬವ್ವ ವೃತ್ತದಲ್ಲಿ ಹಳೇ ಬ್ಯಾನರ್‌ಗಳೇ ರಾರಾಜಿಸಿದವು. ಅಭ್ಯರ್ಥಿ ಆಕಾಕ್ಷಿಗಳಿಂದ ಬಲಾಬಲ ಪ್ರದರ್ಶನ ಹಿನ್ನೆಲೆ ಕಾಂಗ್ರೆಸ್ ಕಚೇರಿ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಉದ್ದೇಶಿತ ಕಾರ್ಯಕ್ರಮದ ಪ್ರಕಾರ ಬೆಳಗ್ಗೆ 11 ಗಂಟೆಗೆ ಮಹದೇವಪ್ಪ ಚಿತ್ರದುರ್ಗಕ್ಕೆ ಆಗಮಿಸಿ ಆಕಾಂಕ್ಷಿಗಳ ಜೊತೆ ಚರ್ಚಿಸಬೇಕಿತ್ತು. ಆದರೆ ಅವರು ಕಾಂಗ್ರೆಸ್ ಕಚೇರಿಗೆ ಬಂದಾಗ ವೇಳೆ ಮಧ್ಯಾಹ್ನ ಒಂದು ಗಂಟೆ ದಾಟಿತ್ತು. ಸಾವಿರಾರು ಜನ ಜಮಾಯಿಸಿ ತಮ್ಮ ಅಭ್ಯರ್ಥಿಗಳ ಪರ ಘೋಷಣೆ ಕೂಗಿದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹಾಗೂ ಡಾ.ಬಿ.ತಿಪ್ಪೇಸ್ವಾಮಿ, ಅಬಕಾರಿ ಸಚಿವ ತಿಮ್ಮಾಪೂರ ಪುತ್ರ ವಿನಯ್ ತಿಮ್ಮಾಪೂರ ಪರವಾಗಿ ಬೆಂಬಲಿಗರು ಆಗಮಿಸಿ ಘೋಷಣೆ ಕೂಗಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಒಂದು ಹಂತದಲ್ಲಿ ಸಚಿವ ಮಹದೇವಪ್ಪ ಕಚೇರಿಯಿಂದ ಹೊರ ಬಂದು ಶಾಂತ ರೀತಿಯಿಂದ ಇರುವಂತೆ ಪರಿಪರಿಯಾಗಿ ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಿತ್ತು.ಸಚಿವ ಡಿ.ಸುಧಾಕರ್, ಶಾಸಕರಾದ ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ ಅವರೊಂದಿಗೆ ಆರಂಭದಲ್ಲಿ ಚರ್ಚೆ ನಡೆಸಿದ ಸಚಿವ ಮಹದೇವಪ್ಪ ನಂತರ ಒಬ್ಬೊಬ್ಬರಾಗಿ ಆಕಾಂಕ್ಷಿಗಳ ಕರೆದು ಮಾತುಕತೆ ನಡೆಸಿದರು. ನಿಮಿಷಗಳು ಉರುಳಿದಂತೆ ಆಕಾಂಕ್ಷಿಗಳ ಪಟ್ಟಿ ಉದ್ದವಾಗುತ್ತಾ ಹೋಯಿತು. ಬರೋಬ್ಬರಿ 24 ಮಂದಿ ಟಿಕೆಟ್ ಬಯಸಿ ಸಚಿವ ಮಹದೇವಪ್ಪ ಅವರ ಮುಂದೆ ಪರೇಡ್ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ ನಡೆಯುವಾಗ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಅವರಿಗೆ ಮತ್ತೋರ್ವ ಅಭ್ಯರ್ಥಿ ಡಾ.ಬಿ.ತಿಪ್ಪೇಸ್ವಾಮಿ ಬೆಂಬಲಿಗರು ಅಡ್ಡಿಪಡಿಸಿದರು. ಹೊರಗಿನಿಂದ ಬಂದವರು ಅಭ್ಯರ್ಥಿ ಆಗುವುದು ಬೇಡ ಎಂದು ಘೋಷಣೆ ಕೂಗಿದರು.
ಪರಿಸ್ಥಿತಿಯ ಖುದ್ದು ವೀಕ್ಷಿಸಿದ ಸಚಿವ ಡಾ.ಮಹದೇವಪ್ಪ, ಡಾ.ತಿಪ್ಪೇಸ್ವಾಮಿ ಬೆಂಬಲಿಗರ ತೀವ್ರ ತರಾಟೆಗೆ ತೆಗೆದುಕೊಂಡರು. ಟಿಕೆಟ್ ಕೇಳಲು ಎಲ್ಲಿರಿಗೂ ಹಕ್ಕಿದೆ. ಅಡ್ಡಿಪಡಿಸುವುದು ಸರಿಯಲ್ಲ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳ ತಿಳಿಸಿ. ಅಂತಿಮವಾಗಿ ಹೈಕಮಾಂಡ್ ಪರಿಶೀಲಿಸುತ್ತದೆ ಎಂದು ಎಚ್ಚರಿಸಿದರು.ಚಿತ್ರದುರ್ಗ ಕ್ಷೇತ್ರದ ಕೈ ಟಿಕೇಟ್ ಗೆ ಸ್ಥಳಿಯ, ವಲಸಿಗ ಅಂತ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ, ಪ್ರಜಾಪ್ರಭುತ್ವ ದಲ್ಲಿ ಎಲ್ಲರಿಗೂ ಅವಕಾಶ ಕೇಳುವ ಸ್ವತಂತ್ರವಿದೆ. ಸಂವಿಧಾನದ ಪ್ರಕಾರ ಸ್ಥಳಿಯರು, ವಲಸಿಗರು ಎಂಬ ಪ್ರಶ್ನೆ ಇಲ್ಲವೆಂದರು.
-------------------------ಕೈ ಟಿಕೆಟ್ ಕೇಳಿರುವ ಆಕಾಂಕ್ಷಿಗಳು: ಬಿ.ಎನ್.ಚಂದಪ್ಪ, ಡಾ.ಬಿ.ತಿಪ್ಪೇಸ್ವಾಮಿ, ಜಿ.ಎಸ್.ಮಂಜನಾಥ್, ವಿನಯ ತಿಮ್ಮಾಪೂರ,ನೇರಲಗುಂಟೆ ರಾಮಪ್ಪ, ಹೆಚ್.ವಿ.ಕುಮಾರಸ್ವಾಮಿ, ವೈ.ಸಿ.ಸುನಿಲ್ ಕುಮಾರ್, ಖಾದಿ ರಮೇಶ್, ರಘು ಹೊಳಲ್ಕೆರೆ, ಓ.ಶಂಕರ್, ಡಿ.ಬಸವರಾಜ್, ಡಿ.ಎನ್.ಮೈಲಾರಪ್ಪ, ಜಿ.ಹೆಚ್.ಮೋಹನ್, ಜಯಲಕ್ಷ್ಮಿ, ಮಲ್ಲೇಶಪ್ಪ, ಬಾಬಾಸಾಹೇಬ್, ರಾಘವೇಂದ್ರನಾಯ್ಕ, ನಿರಂಜನಮೂರ್ತಿಆಕಾಂಕ್ಷಿಗಳಿಂದ ಮಾಹಿತಿ ಸಂಗ್ರಹಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್.ಸಿ.ಮಹದೇವಪ್ಪ, 28 ಲೋಕಸಭಾ ಕ್ಷೇತ್ರಗಳಿಗೆ ಓರ್ವ ಮಂತ್ರಿಯನ್ನು ವೀಕ್ಷಕರಾಗಿ ಹೈಕಮಾಂಡ್ ನೇಮಿಸಿದೆ. ಬೆಳಗ್ಗೆಯಿಂದ ಚಿತ್ರದುರ್ಗ ಜಿಲ್ಲೆಯ ಶಾಸಕರು, ಮಂತ್ರಿ, ಆಕಾಂಕ್ಷಿಗಳಿಂದ ಮಾಹಿತಿ ಸಂಗ್ರಹ ಮಾಡಿದ್ದೇನೆ. ಲೋಕಸಭಾ ಚುನಾವಣೆ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹವಿದೆ. ಗ್ಯಾರಂಟಿ ಯೋಜನೆಯಿಂದ ಜನರಲ್ಲೂ ಉತ್ಸಾಹ ಇಮ್ಮಡಿಯಾಗಿದೆ ಎಂದರು. ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಒಟ್ಟಾರೆ ಎಲ್ಲರ ಅಭಿಪ್ರಾಯವನ್ನು ಹೈಕಮಾಂಡ್‌ಗೆ ವರದಿ ನೀಡುತ್ತೇನೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 24 ಜನ ಆಕಾಂಕ್ಷಿಗಳಿದ್ದಾರೆ. ಆಕಾಂಕ್ಷಿಗಳಲ್ಲಿ ಎಲ್ಲರಲ್ಲೂ ಒಗ್ಗಟ್ಟು ಇದೆ. ಯಾರಿಗೆ ಟಿಕೆಟ್ ಕೊಟ್ಟರು ಪಕ್ಷದ ಗೆಲುವಿಗೆ ಸ್ಪಂದಿಸುತ್ತಾರೆ ಎಂದರು.