ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಧಾರವಾಡಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಅಕ್ರಮ ಹಣ, ಮದ್ಯ, ಮತದಾರರಿಗೆ ಆಮಿಷವೊಡ್ಡುವ ವಸ್ತುಗಳು ಬೇರೆ ಕಡೆಗಳಿಂದ ಜಿಲ್ಲೆಯನ್ನು ಪ್ರವೇಶಿಸುವ ಸಾಧ್ಯತೆಗಳು ಹೆಚ್ಚು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸುವ ಮೂಲಕ ಈಗಿನಿಂದಲೇ ಕಟ್ಟೆಚ್ಚರ ವಹಿಸಲಾಗಿದೆ.
ರಾಜ್ಯದಲ್ಲಿ ಧಾರವಾಡ ಜಿಲ್ಲೆಯು ಪ್ರಮುಖವಾಗಿದೆ. ಕರಾವಳಿ ಸಂಪರ್ಕಿಸುವ ಜತೆಗೆ ಜಿಲ್ಲೆಯು ಗೋವಾ, ಮಹಾರಾಷ್ಟ್ರ ಸಂಪರ್ಕವನ್ನು ಹೊಂದಿದೆ. ಜತೆಗೆ ಹುಬ್ಬಳ್ಳಿ-ಧಾರವಾಡ ರಾಜ್ಯದ 2ನೇ ಅತಿ ದೊಡ್ಡ ಮಹಾನಗರವೂ ಹೌದು. ಹುಬ್ಬಳ್ಳಿ ವಾಣಿಜ್ಯ ನಗರವಾಗಿದ್ದು ಹೆಚ್ಚು ವ್ಯಾಪಾರ-ವಹಿವಾಟುಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಚುನಾವಣೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಅಕ್ರಮಗಳು ನಡೆಯದಂತೆ ಗಡಿ ಪ್ರದೇಶದಲ್ಲಿ 24 ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದೆ. ತೀವ್ರ ನಿಗಾವಹಿಸಲು ಚೆಕ್‌ಪೋಸ್ಟ್‌ನಲ್ಲಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಪೊಲೀಸ್, ಕಂದಾಯ, ಅರಣ್ಯ, ವಾಣಿಜ್ಯ, ಅಬಕಾರಿ ಮತ್ತು ಇತರ ಇಲಾಖೆಗಳ ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ. ಈ ತಂಡ ಜಿಲ್ಲೆಗೆ ಆಗಮಿಸುವ ಪ್ರತಿಯೊಂದು ವಾಹನಗಳನ್ನು ಪರಿಶೀಲಿಸುತ್ತವೆ.ಎಲ್ಲೆಲ್ಲಿ ಪೋಸ್ಟ್‌ಗಳು?:
ಮುಖ್ಯವಾಗಿ ನವಲಗುಂದ ತಾಲೂಕು ವ್ಯಾಪ್ತಿಯ ರೋಣ ರಸ್ತೆಯ ರೋಣ ಕ್ರಾಸ್, ಅಣ್ಣಿಗೇರಿ - ಗದಗ ರಸ್ತೆಯ ಕೊಂಡಿಕೊಪ್ಪ ಕ್ರಾಸ್ ಹಾಗೂ ಹುಬ್ಬಳ್ಳಿ - ಅಣ್ಣಿಗೇರಿ ರಸ್ತೆಯಲ್ಲಿ ಚೆಕ್‌ಪೋಸ್ಟ್ ಅಳವಡಿಸಲಾಗಿದೆ. ಕುಂದಗೋಳ ತಾಲೂಕು ವ್ಯಾಪ್ತಿಯ ಕುಂದಗೋಳ - ಲಕ್ಷ್ಮೇಶ್ವರ ರಸ್ತೆಯ ಗುಡಗೇರಿ ಕ್ರಾಸ್, ಪುಣೆ - ಬೆಂಗಳೂರು ರಸ್ತೆಯ ತಡಸ ಕ್ರಾಸ್ ಮತ್ತು ಹುಬ್ಬಳ್ಳಿ- ಕುಂದಗೋಳ ರಸ್ತೆಯ ಶೇರೆವಾಡದಲ್ಲಿ ಚೆಕ್‌ಪೋಸ್ಟ್ ಅಳವಡಿಸಲಾಗಿದೆ. ಧಾರವಾಡ ಮತಕ್ಷೇತ್ರ ವ್ಯಾಪ್ತಿಯ ಉಪ್ಪಿನಬೆಟಗೇರಿ ಕ್ರಾಸ್, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಹಾರೋಬೇಳವಡಿ, ಧಾರವಾಡ - ಸವದತ್ತಿ ರಸ್ತೆ, ಹೆಬ್ಬಳ್ಳಿ ಅಗಸಿ , ನವಲಗುಂದ ರಸ್ತೆ, ತೇಗೂರಿನ ಎನ್. ಎಚ್ -4 ,ಬೆಳಗಾವಿ - ಧಾರವಾಡ ರಸ್ತೆಯಲ್ಲಿ ತಪಾಸಣೆ ಕೇಂದ್ರ ತೆರೆಯಲಾಗಿದೆ.ಹುಬ್ಬಳ್ಳಿ - ಧಾರವಾಡ ಪಶ್ಚಿಮ ಮತಕ್ಷೇತ್ರ ವ್ಯಾಪ್ತಿಯ ಗಬ್ಬೂರು ಕ್ರಾಸ್, ಕಾರವಾರ ರಸ್ತೆ, ಸೋನಿಯಾ ಗಾಂಧಿ ನಗರ - ಕುಂದಗೋಳ ರಸ್ತೆಯಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ. ಹುಬ್ಬಳ್ಳಿ - ಧಾರವಾಡ ಕೇಂದ್ರ ಮತಕ್ಷೇತ್ರ ವ್ಯಾಪ್ತಿಯ ಗದಗ ರಸ್ತೆ, ನವಲಗುಂದ ರಸ್ತೆ, ಸುಳ್ಳದ ಕ್ರಾಸ್‌ನಲ್ಲಿ ತೆರೆಯಲಾಗಿದೆ. ಹುಬ್ಬಳ್ಳಿ - ಧಾರವಾಡ ಪೂರ್ವ ಮತಕ್ಷೇತ್ರ ವ್ಯಾಪ್ತಿಯ ಗೋಕುಲ ಗ್ರಾಮದ ಕ್ರಾಸ್, ಕಲಘಟಗಿ ರಸ್ತೆ, ಗೋವಾ ರಸ್ತೆ ಹಾಗೂ ಹಳಿಯಾಳ ರಸ್ತೆಯಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಕಲಘಟಗಿ ತಾಲೂಕು ಮತಕ್ಷೇತ್ರ ವ್ಯಾಪ್ತಿಯ ಕಲಘಟಗಿ - ಕಾರವಾರ ರಸ್ತೆಯ ಸಂಗಟಿಕೊಪ್ಪ ರಸ್ತೆ, ಅಳ್ನಾವರ-ಧಾರವಾಡ - ಗೋವಾ ರಸ್ತೆಯ ಕಡಬಗಟ್ಟಿ ಕ್ರಾಸ್ ಹಾಗೂ ತೊಬಕದಹೊನ್ನಳ್ಳಿ, ಕಲಘಟಗಿ - ತಡಸ ರಸ್ತೆಯಲ್ಲಿ ಚೆಕ್‌ಪೋಸ್ಟ್ ಆರಂಭಿಸಲಾಗಿದೆ.ವಾಹನ ಸವಾರರು ಸಹಕರಿಸಿ
ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 24 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಗಸ್ತು, ನಿರಂತರ ನಿಗಾವಹಿಸಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೇಮಿಸಿ ಅವರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಚುನಾವಣೆ ಮುಕ್ತಾಯ ಆಗುವ ವರೆಗೂ ಜಿಲ್ಲಾಗಡಿಯಲ್ಲಿ ಚೆಕ್‌ಪೊಸ್ಟ್‌ಗಳು ಕಾರ್ಯ ನಿರ್ವಹಿಸಲಿದ್ದು, ವಾಹನ ತಪಾಸಣೆ ವೇಳೆ ವಾಹನ ಸವಾರರು ಸಿಬ್ಬಂದಿಗೆ ಸಹಕರಿಸಬೇಕು.ದಿವ್ಯಪ್ರಭು, ಜಿಲ್ಲಾಧಿಕಾರಿ