ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ತಾಲೂಕಿನ ಈಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ, ಅಪಾರ ಹಣ ದುರ್ಬಳಕೆ ಮಾಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು, ಕ್ಷೇತ್ರದ ಶಾಸಕರು, ಸಂಸದರ ಸಹಿತ ಲೋಕಾಯುಕ್ತರಿಗೆ ದೂರು ನೀಡಿದ್ದೇವೆ. ಆದರೆ, ಪ್ರಯೋಜನ ಆಗಿಲ್ಲ ಎಂದು ಗ್ರಾಪಂ ಸದಸ್ಯೆ ನೀಲಾವತಿ ಆರೋಪಿಸಿದರು.ಶನಿವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಸೂರು ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿ ವರ್ಷಕ್ಕಿಂತ ಅಧಿಕ ಸಮಯವಾಗಿದೆ. ಆರಂಭದಿಂದಲೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಅವರು ಅಧ್ಯಕ್ಷರು, ಸದಸ್ಯರಿಗೆ ಕನಿಷ್ಠ ಗೌರವವನ್ನೂ ನೀಡದೇ, ಉಡಾಫೆ ವರ್ತನೆ ತೋರುತ್ತಿದ್ದಾರೆ ಎಂದು ದೂರಿದರು.
14 ಮತ್ತು 15ನೇ ಹಣಕಾಸು ಯೋಜನೆಯಡಿ ಯಾವುದೇ ಸಮರ್ಪಕ ಕ್ರಿಯಾ ಯೋಜನೆ ರೂಪಿಸದೇ ಸದಸ್ಯರ ಸಾಮಾನ್ಯ ಸಭೆಯಲ್ಲಿ ಚರ್ಚಿಸದೇ ಸದಸ್ಯರ ಗಮನಕ್ಕೂ ತಾರದೇ ಪ್ರತಿ ತಿಂಗಳ ಸಾಮಾನ್ಯ ಸಭೆ ನಡಾವಳಿಯನ್ನು ಕೂಡಲೇ ದಾಖಲಿಸದೇ, 6 ತಿಂಗಳ ನಡಾವಳಿ ಒಟ್ಟಿಗೆ ಬರೆಯುತ್ತಿದ್ದಾರೆ. 14-15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನ ಹಾಗೂ ಖರ್ಚಿನ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಇದು ಅವ್ಯವಹಾರ ನಡೆದಿರುವ ಶಂಕೆಗೆ ಆಸ್ಪದವಾಗಿದೆ ಎಂದರು.2021-22ನೇ ಸಾಲಿನಲ್ಲಿ ಗ್ರಾಪಂಗೆ ₹52.61 ಲಕ್ಷ ಬಿಡುಗಡೆಯಾಗಿದೆ. ₹38 ಲಕ್ಷ ಖರ್ಚು, 15ನೇ ಹಣಕಾಸು ಯೋಜನೆಯಲ್ಲಿ ₹23 ಲಕ್ಷ ಬಿಡುಗಡೆಯಾಗಿದ್ದು, ₹17 ಲಕ್ಷ ಖರ್ಚು ತೋರಿಸಿದ್ದು, ಈ ಬಗ್ಗೆ ಯಾವುದೇ ಸಮರ್ಪಕ ಮಾಹಿತಿ ನೀಡುತ್ತಿಲ್ಲ. 2ನೇ ಅವಧಿಯಲ್ಲಿ ₹41.63 ಲಕ್ಷ ಬಿಡುಗಡೆಯಾಗಿದೆ. ₹31.61 ಲಕ್ಷ ಖರ್ಚು ತೋರಿಸಿದ್ದಾರೆ. ಈ ಬಗ್ಗೆ ಅಧ್ಯಕ್ಷೆ ರೇಣುಕಮ್ಮ ಪ್ರಶ್ನಿಸಿದಾಗ, ತಪ್ಪು ಮಾಹಿತಿ ನೀಡಿ ಹೆಬ್ಬೆಟ್ಟು ನೀಡುವಾಗ ನರೇಗಾ ಯೋಜನೆ ಅನುದಾನ ಎಂದು ಅಪಾರ ಹಣ ದುರುಪಯೋಗ ಮಾಡಿಕೊಂಡಿರುವ ಅನುಮಾನ ದಟ್ಟವಾಗಿದೆ ಎಂದರು.
2022- 2023ನೇ ಸಾಲಿನಲ್ಲಿ ₹39.40 ಲಕ್ಷ ಅನುದಾನ ಬಿಡುಗಡೆಯಾಗಿದೆ. ₹33.23 ಲಕ್ಷ ವ್ಯಯಿಸಿ ಕೇವಲ ₹17 ಲಕ್ಷಗಳ ಲೆಕ್ಕ ತೋರಿಸಿದ್ದಾರೆ. 2023-2024ನೇ ಸಾಲಿನಲ್ಲಿ ಬಿಡುಗಡೆಯಾದ ₹10.71 ಲಕ್ಷಕ್ಕೆ ಕೇವಲ ₹5.61 ಲಕ್ಷ ಲೆಕ್ಕ ನೀಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಲ್ಲಿ ಸದಸ್ಯರನ್ನು ನಿಂದಿಸುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಗೌರವ ನೀಡದ ಅಧಿಕಾರಿ ವಿರುದ್ಧ ಸರ್ಕಾರ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಈಸೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಉಪಾಧ್ಯಕ್ಷೆ ತ್ರಿವೇಣಿ, ಲತಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
- - -ಬಾಕ್ಸ್ ದಲಿತರ ಬಡಾವಣೆಗಳ ಅಭಿವೃದ್ಧಿ ನಿರ್ಲಕ್ಷ್ಯ15ನೇ ಹಣಕಾಸು ಯೋಜನೆಯಡಿ ಶೇ.25 ಪರಿಶಿಷ್ಟ ಜಾತಿ ಅಭಿವೃದ್ಧಿಗೆ ಮೀಸಲಿಡಬೇಕಾಗಿದೆ. ಖುದ್ದು ದಲಿತ ಮಹಿಳೆಯಾದ ನಮ್ಮ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ ಎಂದು ಗ್ರಾಪಂ ಸದಸ್ಯೆ ನೀಲಾವತಿ ಟೀಕಿಸಿದರು.
ಗ್ರಾಪಂ ನೂತನ ಕಟ್ಟಡದ 3ನೇ ಅಂತಸ್ತು ನಿರ್ಮಿಸಲಾಗಿದೆ ಎಂದು ಪಿಡಿಒ ಸುಳ್ಳುಲೆಕ್ಕ ನೀಡಿದ್ದಾರೆ. ಇಲ್ಲಿ ಕೇವಲ 2 ಅಂತಸ್ತು ಮಾತ್ರ ನಿರ್ಮಿಸಲಾಗಿದೆ. ಪಿಡಿಒ ಈ ಎಲ್ಲ ಅವ್ಯಹಾರಗಳ ಬಗ್ಗೆ ಮಾಹಿತಿ ಹಕ್ಕು ಜತೆಗೆ ಕ್ಷೇತ್ರದ ಶಾಸರು, ಸಂಸದರು, ಜಿ.ಪಂ ಸಿಇಒ, ತಾಪಂ ಇಒ ಸಹಿತ ಲೋಕಾಯುಕ್ತರಿಗೆ ದೂರು ನೀಡಿದ್ದೇವೆ. ಪ್ರಯೋಜನ ಮಾತ್ರ ಶೂನ್ಯ ಎಂದು ವಿಷಾದಿಸಿದರು.- - - -16ಕೆಎಸ್.ಕೆಪಿ1:
ಪತ್ರಿಕಾಗೋಷ್ಠಿಯಲ್ಲಿ ಈಸೂರು ಗ್ರಾಪಂ ಸದಸ್ಯೆ ನೀಲಾವತಿ ಪಿಡಿಒ ವಿರುದ್ಧ ಲೋಕಾಯುಕ್ತರಿಗೆ ನೀಡಿದ ದೂರಿನ ಪ್ರತಿಯನ್ನು ಪ್ರದರ್ಶಿಸಿದರು.