ಡ್ಯಾಂ, ವಿದ್ಯುತ್‌ ಸ್ಥಾವರಗಳಿಗೆ 24/7 ಭದ್ರತೆ

| N/A | Published : May 10 2025, 01:06 AM IST / Updated: May 10 2025, 09:20 AM IST

KRS Dam Full

ಸಾರಾಂಶ

ದೇಶದಲ್ಲಿನ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಪಿಸಿಎಲ್ ವ್ಯಾಪ್ತಿಗೆ ಬರುವ ಜಲಾಶಯಗಳು ಮತ್ತು ವಿದ್ಯುತ್ ಸ್ಥಾವರಗಳಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದು, ಪೊಲೀಸ್‌ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ 24/7 ಭದ್ರತೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

 ಬೆಂಗಳೂರು : ದೇಶದಲ್ಲಿನ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಪಿಸಿಎಲ್ ವ್ಯಾಪ್ತಿಗೆ ಬರುವ ಜಲಾಶಯಗಳು ಮತ್ತು ವಿದ್ಯುತ್ ಸ್ಥಾವರಗಳಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದು, ಪೊಲೀಸ್‌ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ 24/7 ಭದ್ರತೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಒಂದು ವೇಳೆ ಭದ್ರತೆಯಲ್ಲಿ ಯಾವುದೇ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಕೆಪಿಸಿಎಲ್‌ ದೇಶದಲ್ಲಿನ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ವ್ಯಾಪ್ತಿಗೆ ಬರುವ ಜಲಾಶಯಗಳು ಮತ್ತು ವಿದ್ಯುತ್ ಸ್ಥಾವರಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಈ ಕುರಿತು ಕೆಪಿಸಿಎಲ್ ಆದೇಶ ಹೊರಡಿಸಿದ್ದು, ನಿಗಮ ವ್ಯಾಪ್ತಿಯ ಸೂಕ್ಷ್ಮ ಸ್ಥಾವರಗಳ ಭದ್ರತೆಯೂ ಅತಿ ಮುಖ್ಯವಾಗಿದೆ. ಎಲ್ಲಾ ಜಲಾಶಗಳು ಮತ್ತು ವಿದ್ಯುತ್ ಸ್ಥಾವರಗಳಿಗೆ ರಾಜ್ಯ ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಿ ಸಂಪೂರ್ಣ ಭದ್ರತೆ ಒದಗಿಸಬೇಕು. ಒಂದು ವೇಳೆ ಭದ್ರತೆಯಲ್ಲಿ ಯಾವುದೇ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ತಿಳಿಸಿದೆ.

ಕೆಪಿಸಿಎಲ್‌ನಿಂದ ಜಲ, ಉಷ್ಣ, ಪವನ, ಸೌರ, ಅನಿಲ ಮತ್ತು ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ನಿರ್ಮಿಸಲಾಗಿದೆ. ಜಲ ವಿದ್ಯುತ್ ಉತ್ಪಾದನೆಗಾಗಿ ಹಲವು ಜಲಾಶಯಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ವಿದ್ಯುತ್ ಸ್ಥಾವರಗಳು ಮತ್ತು ಜಲಾಶಯಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಇದರ ಬೆನ್ನಲ್ಲೇ, ಪ್ರಮುಖ ಜಲಾಶಯಗಳು ಮತ್ತು ಸ್ಥಾವರಗಳ ವ್ಯಾಪ್ತಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿ ಭದ್ರತಾ ವ್ಯವಸ್ಥೆ ಕುರಿತು ಸಮಾಲೋಚನೆ ನಡೆಸಿದ್ದಾರೆ. ಜತೆಗೆ ಹೆಚ್ಚಿನ ಸಹಕಾರ ನೀಡುವಂತೆ ಕೆಪಿಸಿಎಲ್ ಅಧಿಕಾರಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮತ್ತೊಂದೆಡೆ, ಕೆಪಿಸಿಎಲ್ ವ್ಯಾಪ್ತಿಯ ಜಲಾಶಯಗಳು ಮತ್ತು ಪವರ್ ಹೌಸ್ ಗಳಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಗಣ್ಯರು ಸೇರಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.  

ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಧ್ಯಯನ ದೃಷ್ಟಿಯಿಂದ ಜಲಾಶಯಗಳು ಮತ್ತು ಪವರ್ ಹೌಸ್ ಗಳಿಗೆ ಭೇಟಿ ನೀಡುತ್ತಾರೆ. ಪ್ರಸ್ತುತ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು ಮತ್ತು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆಯಂತೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. 

ಡ್ಯಾಂ, ರಕ್ಷಣಾ ಸ್ಥಾವರ, ಜನಸಂದಣಿ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿ: ಗುಪ್ತದಳದೇಶದ ಗಡಿ ಪ್ರದೇಶದ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಅಣೆಕಟ್ಟು, ರಕ್ಷಣಾ ಸ್ಥಾವರಗಳು ಹಾಗೂ ಆಡಳಿತ ಕಟ್ಟಡಗಳು ಸೇರಿ ಪ್ರಮುಖ ಜನ ಸಂದಣಿ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿ ಕಟ್ಟೆಚ್ಚರ ವಹಿಸುವಂತೆ ಗುಪ್ತದಳ ಸೂಚಿಸಿದೆ.ಈ ಸಂಬಂಧ ರಾಜ್ಯದ ಎಲ್ಲ ನಗರಗಳ ಪೊಲೀಸ್ ಆಯುಕ್ತರು, ವಲಯ ಐಜಿಪಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಜ್ಯ ಗುಪ್ತದಳ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್ ಸುತ್ತೋಲೆ ಹೊರಡಿಸಿದ್ದು, ಭದ್ರತಾ ವ್ಯವಸ್ಥೆ ಕುರಿತು ವರದಿ ಸಲ್ಲಿಸುವಂತೆಯೂ ನಿರ್ದೇಶಿಸಿದ್ದಾರೆ.ಭಾರತದ ಪಶ್ಚಿಮೋತ್ತರ ಗಡಿ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚರ ಹಾಗೂ ಬಂದೋಸ್ತ್ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಗುಪ್ತದಳ ಮುಖ್ಯಸ್ಥರು ತಿಳಿಸಿದ್ದಾರೆ.

ಎಲ್ಲೆಲ್ಲಿ ಭದ್ರತೆ?: ಆಡಳಿತ ಕಟ್ಟಡಗಳು, ರಕ್ಷಣಾ ಸ್ಥಾವರಗಳು, ವಿಜ್ಞಾನ ಸಂಶೋಧನಾ ಕೇಂದ್ರಗಳು, ವಿಮಾನ ನಿಲ್ದಾಣಗಳು, ಉಪಗ್ರಹ ಕೇಂದ್ರಗಳು, ಅಣೆಕಟ್ಟು, ಜಲವಿದ್ಯುತ್‌ ಸ್ಥಾವರಗಳು, ಅಟಾಮಿಕ್ ಸ್ಥಾವರಗಳು, ಥರ್ಮಲ್‌ ಸ್ಥಾವರಗಳು, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ, ಬಸ್‌ ನಿಲ್ದಾಣಗಳು, ಬಂದರು, ಹಡಗು ತಯಾರಿಕಾ ಸಂಸ್ಥೆಗಳು, ಸಾಫ್ಟ್‌ವೇರ್ ಕಂಪನಿಗಳು, ಬಹುಮಹಡಿ ಕಟ್ಟಡಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರಗಳು, ಪೈಪ್‌ ಲೈನ್‌ಗಳು ಮತ್ತು ಸಂಗ್ರಹಗಾರಗಳು, ಶಾಂಪಿಂಗ್ ಮಾಲ್‌, ಸ್ಟಾರ್ ಹೋಟೆಲ್‌, ವಿದೇಶಿ ರಾಜತಾಂತ್ರಿಕ ಕಚೇರಿಗಳು, ವಸತಿ ಕಟ್ಟಡಗಳು, ಆಸ್ಪತ್ರೆಗಳು, ಭಾರಿ ಕೈಗಾರಿಕೆಗಳು, ದೇವಾಲಯ ಹಾಗೂ ಮಸೀದಿ ಸೇರಿ ಜನಸಂದಣಿ ಪ್ರದೇಶಗಳಲ್ಲಿ ಭದ್ರತೆ.

ಕಣ್ಗಾವಲು ಹೀಗಿರಲಿ ಎಂದಿರುವ ಗುಪ್ತದಳ

1.ಎಲ್‌ಇಟಿ, ಜೆಇಎಂ ಹಾಗೂ ಐಎಂ ಸೇರಿ ಭಯೋತ್ಪಾದಕ ಸಂಘಟನೆಗಳ ಪ್ರಕರಣಗಳಲ್ಲಿ ಭಾಗಿಯಾದವರು ಹಾಗೂ ಶಿಕ್ಷೆಗೊಳಗಾದವರು.

2.ಬಾಂಬ್ ತಯಾರಿಕೆ ಮತ್ತು ಬಾಂಬ್ ಬಳಸಿ ಭಯೋತ್ಪಾದನೆ ಕೃತ್ಯಗಳಲ್ಲಿ ನಿರತರಾದವರು3.ಸ್ಫೋಟಕ ವಸ್ತುಗಳು ಹಾಗೂ ಉಪಕರಣಗಳ ತಯಾರು ಮಾಡುವ ಸ್ಥಳಗಳು

4.ಮೂಲಭೂತವಾದದ ಮೂಲಕ ಸಮಾಜವನ್ನು ಭಯಭೀತರನ್ನಾಗಿಸುವ ಕೃತ್ಯಗಳಲ್ಲಿ ಭಾಗಿಯಾದವರು5.ಭಾರತದ ವಿರುದ್ಧ ಭಾಷಣಗಳ ಮತ್ತು ಘೋಷಣೆಗಳ ಮೂಲಕ ಸಾರ್ವಜನಿಕ ಶಾಂತಿ ಭಂಗ ಉಂಟು ಮಾಡುವವರು

6.ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದಕ ಚಟುವಟಿಕೆ ಹಂಚಿಕೊಳ್ಳುವವರು7.ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರು

8.ಅಪರಿಚಿತರು, ಶಂಕಾಸ್ಪದ ವ್ಯಕ್ತಿಗಳುಸಾರ್ವಜನಿಕರಲ್ಲಿ ಅರಿವು ಕಾರ್ಯಕ್ರಮಗಳು

1.ಸಾರ್ವಜನಿಕ ರಕ್ಷಣೆ ಬಗ್ಗೆ ಅಭ್ಯಾಸ ಮತ್ತು ತಾಲೀಮುಗಳ ಪ್ರದರ್ಶನ ಆಯೋಜನೆ

2.ಗ್ರಾಮ, ಪಟ್ಟಣಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ರಕ್ಷಣೆ ಹೊಣೆಗಾರಿಕೆ ಹೊತ್ತಿರುವ ಗೃಹ ರಕ್ಷಕ ದಳ, ಎನ್‌ಸಿಸಿ, ಸಿವಿಲ್ ಡಿಫೆನ್ಸ್‌ ವಾರ್ಡನ್‌ಗಳು ಹಾಗೂ ವಿದ್ಯಾರ್ಥಿಗಳು ಸಂಘಗಳು ಸೇರಿ ಇತರರ ಜತೆ ಸಮನ್ವಯ

3.ಸಾರ್ವಜನಿಕರು ಶಾಂತ ಹಾಗೂ ಜಾಗೃತವಾಗಿರಲು ಮುಂಜಾಗ್ರತಾ ಕ್ರಮವಾಗಿ ಮನೆಗಳಲ್ಲಿ ನಿಗದಿತ ನಗದು, ಇಂಧನ ತುಂಬಿದ ವಾಹನಗಳು, ಸಾಕಷ್ಟು ಔಷಧಗಳು ಹಾಗೂ ಕೆಡದಿರುವ ಆಹಾರ, ಹೊದಿಕೆಗಳು ಹಾಗೂ ಮೊಬೈಲ್‌ ಸದಾ ಚಾರ್ಜ್‌ನಲ್ಲಿರುವಂತೆ ನೋಡಿಕೊಳ್ಳುವುದು.