ಸದ್ಯಕ್ಕೆ ಸವದತ್ತಿಯಿಂದ 3 ಪೈಪ್‌ಲೈನ್ ಮೂಲಕ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಹುಬ್ಬಳ್ಳಿಗೆ ನೇರವಾಗಿ 100 ಎಂಎಲ್‌ಡಿ, ಧಾರವಾಡಕ್ಕೆ 55 ಎಂಎಲ್‌ಡಿ ಹಳೆಯ ಪೈಪ್‌ಲೈನ್ ಮಾರ್ಗದ ಮೂಲಕ ನೀರು ಬರುತ್ತಿದೆ. ಇದೀಗ ಮತ್ತೆ 43 ಎಂಎಲ್‌ಡಿ ನೀರನ್ನು ಹೊಸದಾಗಿ ನಗರಕ್ಕೆ ತರಲಾಗಿದೆ.
ಧಾರವಾಡ:
ಹುಬ್ಬಳ್ಳಿ-ಧಾರವಾಡ ಮಹಾನಗರದ ಎಲ್ಲ 82 ವಾರ್ಡ್‌ಗಳಿಗೂ 2027ರ ಅಂತ್ಯದೊಳಗೆ ನಿರಂತರ ಕುಡಿಯುವ ನೀರು (24/7) ಯೋಜನೆ ಜಾರಿಗೊಳಿಸುವ ಗುರಿ ಹೊಂದಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.ಇಲ್ಲಿನ ಜರ್ನಲಿಸ್ಟ್ ಗಿಲ್ಡ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಮೀಟ್ ದೀ ಪ್ರೇಸ್‌ನಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಸವದತ್ತಿಯಿಂದ 3 ಪೈಪ್‌ಲೈನ್ ಮೂಲಕ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಹುಬ್ಬಳ್ಳಿಗೆ ನೇರವಾಗಿ 100 ಎಂಎಲ್‌ಡಿ, ಧಾರವಾಡಕ್ಕೆ 55 ಎಂಎಲ್‌ಡಿ ಹಳೆಯ ಪೈಪ್‌ಲೈನ್ ಮಾರ್ಗದ ಮೂಲಕ ನೀರು ಬರುತ್ತಿದೆ. ಇದೀಗ ಮತ್ತೆ 43 ಎಂಎಲ್‌ಡಿ ನೀರನ್ನು ಹೊಸದಾಗಿ ನಗರಕ್ಕೆ ತರಲಾಗಿದ್ದು, ಇದರಿಂದ ಅವಳಿ ನಗರದಲ್ಲಿ 10 ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ನೀರು ಐದು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ ಎಂದು ಹೇಳಿದರು.
ನೀರ ಸಾಗರ ಕೆರೆಯಿಂದಲೂ 20 ಎಂಎಲ್‌ಡಿ ನೀರು ಲಭ್ಯವಿದ್ದು, ಇದನ್ನು ಸುತ್ತಮುತ್ತಲಿನ ಹಳ್ಳಿಗಳಿಗೆ ಪೂರೈಕೆ ಮಾಡಲಾಗುವುದು. ಸದ್ಯಕ್ಕೆ ಈ ನೀರು ಪೂರೈಕೆಯಾಗುತ್ತಿದ್ದರೂ, ಮನೆ-ಮನೆ ಸರಬರಾಜು ಪೈಪ್‌ಲೈನ್ ಕಾರ್ಯ ಪೂರ್ಣವಾಗಿಲ್ಲ. ಇನ್ನೊಂದು ವರ್ಷದಲ್ಲಿ ಎಲ್ಲವನ್ನು ಮುಗಿಸಿ 2027ರ ಅಂತ್ಯದ ಒಳಗಾಗಿ ಅವಳಿ ನಗರಕ್ಕೆ ದಿನದ 24/7 ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.11 ಲಕ್ಷ ಮೆಟ್ರಿಕ್ ಟನ್ ಕಸ ಕರಗಸ್ತೇವೆ:
ಹುಬ್ಬಳ್ಳಿಯಲ್ಲಿ 7 ಮತ್ತು ಧಾರವಾಡದಲ್ಲಿ 4 ಲಕ್ಷ ಮೆಟ್ರಿಕ್ ಟನ್ ಸಾಂಪ್ರದಾಯಿಕ ಕಸ ಹಾಗೆ ಉಳಿದುಕೊಂಡು ಗುಡ್ಡೆಯಾಗಿ ಬಿದ್ದಿದೆ. ಇದನ್ನು ಕರಗಿಸದೆ ಹೋದರೆ ಹೊಗೆ, ಬೆಂಕಿ, ವಾಸನೆ ಸೇರಿದಂತೆ ಅನೇಕ ಸಮಸ್ಯೆ ಎದುರಾಗುತ್ತಿವೆ. ಇದನ್ನು 3 ಭಾಗವಾಗಿ ವಿಂಗಡಿಸಿ ಕರಗಿಸಲಾಗುತ್ತಿದೆ. ಇದಕ್ಕಾಗಿ ಎರಡು ಯಂತ್ರ ತಂದಿದ್ದು, ಪ್ರತಿ ದಿನ 400 ಟನ್ ಕಸವನ್ನು ಈ ಯಂತ್ರಗಳು ಪ್ರತ್ಯೇಕಿಸಿ ಕರಗಿಸುತ್ತಿವೆ. ಇನ್ನೊಂದು ವರ್ಷದಲ್ಲಿ ಖಂಡಿತವಾಗಿಯೂ ಕಸದ ಗುಡ್ಡೆ ಕರಗಿಸುತ್ತೇವೆ ಎಂದು ಗಾಳಿ ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ್ ಹೊಂಗಲ್, ಪಾಲಿಕೆ ಮತ್ತು ಜನರ ನಡುವೆ ಪತ್ರಕರ್ತರು ಕೊಂಡಿಯಾಗಿ ಕೆಲಸ ಮಾಡುತ್ತಿದ್ದು, ಜನರ ಸಮಸ್ಯೆಗಳಿಗೆ ಪಾಲಿಕೆ ಸ್ಪಂದಿಸುವ ಅಗತ್ಯತೆಗಾಗಿಯೇ ಇಂತಹ ಮಾಧ್ಯಮ ಸಂವಾದ ನಡೆಸಲಾಗುತ್ತಿದೆ ಎಂದು ಹೇಳಿದರು.
ಗಿಲ್ಡ್ ನ ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಬಸವರಾಜ ಅಳಗವಾಡಿ ಸ್ವಾಗತಿಸಿ ವಂದಿಸಿದರು. ಗಿಲ್ಡ್ ಸದಸ್ಯರು ಉಪಸ್ಥಿತರಿದ್ದರು.ಎಲ್‌ಇಡಿ ಬಲ್ಬ್ ಅಳವಡಿಕೆಯಿಂದ ₹ 12 ಕೋಟಿ ಉಳಿಕೆಮಹಾನಗರದಲ್ಲಿ ಹಳೆಯ ಬೀದಿದೀಪ ತೆಗೆದು ಎಲ್‌ಇಡಿ ಬಲ್ಬ್ ಅಳವಡಿಸುತ್ತಿದ್ದು ಇದರಿಂದ ವಾರ್ಷಿಕವಾಗಿ ಪಾಲಿಕೆಗೆ ಕನಿಷ್ಠ ₹ 12 ಕೋಟಿ ಉಳಿಕೆಯಾಗಲಿದೆ. ಅಲ್ಲದೇ 700 ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೂ ಚಿಂತನೆ ಇದ್ದು, ಇಲ್ಲಿ ಕೂಡ ವಿದ್ಯುತ್ ಉತ್ಪಾದಿಸಲು ಸಿದ್ಧತೆ ನಡೆದಿದೆ ಎಂದು ಪಾಲಿಕೆತ್ಯುಕ್ತ ರುದ್ರೇಶ ಗಾಳಿ ಹೇಳಿದರು. ನೀರಿನ ಬಿಲ್ ತುಂಬಲು ಪಾಲಿಕೆ ಹೊಸ ವ್ಯವಸ್ಥೆ ರೂಪಿಸಿದ್ದು, ಮನೆಯಲ್ಲಿ ಕುಳಿತುಕೊಂಡು ಮೊಬೈಲ್ ಮೂಲಕವೇ ಪಾವತಿಸಬಹುದಾಗಿದೆ ಎಂದ ಅವರು, ಸಾರ್ವಜನಿಕ ಉದ್ಯಾನವನದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲು ಚಿಂತನೆ ನಡೆದಿದೆ. ಈಗಾಗಲೇ ಉಣಕಲ್, ತೋಳನಕೆರೆ ಸೇರಿದಂತೆ ಕೆಲವು ಕಡೆಗಳಲ್ಲಿ ಖಾಸಗಿ ನಿರ್ವಹಣೆ ನಡೆಯುತ್ತಿದ್ದು, ಇನ್ನುಳಿದ ಕಡೆಗಳೆಲ್ಲೂ ಬೇಡಿಕೆ ಬಂದರೆ ಅವುಗಳನ್ನು ನೀಡಲಾಗುವುದು ಎಂದು ಗಾಳಿ ತಿಳಿಸಿದರು.