ಸಾರಾಂಶ
ಕರ್ನಾಟಕ ವುಶು ಎಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ವುಶು ಘಟಕ ವತಿಯಿಂದ ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ 24ನೇ ರಾಜ್ಯ ಮಟ್ಟದ ವುಶು ಚಾಂಪಿಯನ್‌ಶಿಪ್ ಉದ್ಘಾಟನೆ ನೆರವೇರಿತು. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಫರೀದ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ವುಶು ಎಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ವುಶು ಘಟಕ ವತಿಯಿಂದ ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ 24ನೇ ರಾಜ್ಯ ಮಟ್ಟದ ವುಶು ಚಾಂಪಿಯನ್‌ಶಿಪ್ ಉದ್ಘಾಟನೆ ನೆರವೇರಿತು.ಉದ್ಘಾಟನೆ ನೆರವೇರಿಸಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಫರೀದ್, ವುಶು ಕ್ರೀಡೆ ಹಾಗೂ ಕರ್ನಾಟಕ ವುಶು ಎಸೋಸಿಯೇಶನ್‌ಗೆ ಅಗತ್ಯವಿರುವ ಎಲ್ಲ ನೆರವು ಹಾಗೂ ಪ್ರೋತ್ಸಾಹವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದರು.
ವಿದ್ಯಾರ್ಥಿಗಳು ವುಶು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಚಾಂಪಿಯನ್‌ಶಿಪ್‌ನಲ್ಲಿ ಗೆಲವು ಪಡೆಯಬಹುದು ಅಥವಾ ಪಡೆಯದೇ ಇರಬಹುದು. ಆದರೆ, ಭವಿಷ್ಯದ ಬದುಕಿನಲ್ಲಿ ವುಶು ಕ್ರೀಡೆ ಪ್ರಯೋಜನಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ತರಬೇತುದಾರರು ಹಾಗೂ ಮಕ್ಕಳ ಹೆತ್ತವರ ಪ್ರೋತ್ಸಾಹ ಪ್ರಶಂಸನೀಯ ಎಂದರು.ರಾಜ್ಯ ವುಶು ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಅಶೋಕ್ ಮೊಖಾಶಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಕರ್ನಾಟಕ ವುಶು ಎಸೋಸಿಯೇಶನ್ ಕೋಶಾಧಿಕಾರಿ ಸಂಗಮೇಶ್ ಲಾಯದಗುಂಡಿ ಅತಿಥಿಯಾಗಿದ್ದರು. ಇದೇ ಸಂದರ್ಭ ಯು.ಟಿ. ಖಾದರ್ ಹಾಗೂ ಪ್ರದೀಪ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ವುಶು ಚಾಂಪಿಯನ್‌ಶಿಪ್ ಸಂಘಟನಾ ಕಾರ್ಯದರ್ಶಿ ರೋಹನ್ ಎಸ್. ಸ್ವಾಗತಿಸಿದರು. ವಿಜಯನಗರ ಜಿಲ್ಲೆ ವುಶು ಸಂಸ್ಥೆ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ನಿರೂಪಿಸಿ, ವಂದಿಸಿದರು.ಸ್ಪರ್ಧಾಕೂಟದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ವುಶು ಕ್ರೀಡಾಪಟುಗಳು, ತರಬೇತಿದಾರರು, ನಿರ್ಣಾಯಕರು ಭಾಗವಹಿಸಿದ್ದಾರೆ. ವಿವಿಧ ವಿಭಾಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.