ರಾಜ್ಯದಲ್ಲಿನ ಭೀಕರ ಬರದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲು ಮೇವು ಕಿಟ್‌ ಖರೀದಿ ಮಾಡಲು ಪಶುಸಂಗೋಪನಾ ಇಲಾಖೆಗೆ 25 ಕೋಟಿ ರು. ಮಂಜೂರು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

ಕನ್ನಡಪ್ರಭ ಚಾರ್ತೆ ಬೆಂಗಳೂರು:

ರಾಜ್ಯದಲ್ಲಿನ ಭೀಕರ ಬರದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲು ಮೇವು ಕಿಟ್‌ ಖರೀದಿ ಮಾಡಲು ಪಶುಸಂಗೋಪನಾ ಇಲಾಖೆಗೆ 25 ಕೋಟಿ ರು. ಮಂಜೂರು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

ಸಂಪುಟ ಸಭೆ ತೀರ್ಮಾನವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ರಾಜ್ಯದಲ್ಲಿ 150 ವರ್ಷಗಳಲ್ಲೇ ಅತ್ಯಂತ ಭೀಕರ ಬರ ಆವರಿಸಿದೆ. ಹೀಗಾಗಿ ಈಗಾಗಲೇ 101 ತಾಲೂಕುಗಳಲ್ಲಿ ಬರ ಘೋಷಿಸಿದ್ದು, ಇನ್ನೂ 30ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಮುಂದಿನ ಹಂತದಲ್ಲಿ ಅವುಗಳನ್ನೂ ಘೋಷಿಸಲಾಗುವುದು.

ಕಳೆದ ಬಾರಿ ರಾಜ್ಯದಲ್ಲಿ ಬರ ಬಂದಾಗ 60 ಸಾವಿರ ಕೋಟಿ ರು.ನಷ್ಟು ನಷ್ಟ ಉಂಟಾಗಿತ್ತು. ಆದರೆ ಎನ್‌ಡಿಆರ್‌ಎಫ್‌ ನಿಯಮಗಳ ಅನ್ವಯ 18 ಸಾವಿರ ಕೋಟಿ ರು. ಪರಿಹಾರಕ್ಕೆ ಮನವಿ ಮಾಡಿದ್ದೆವು. ಆದರೆ ಕೇಂದ್ರ ಸರ್ಕಾರ ನಾವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಳಿಕ 3,500 ಕೋಟಿ ರು. ನೀಡಿತು. ಹೀಗಾಗಿ ಈ ಬಾರಿ ಯಾವ ರೀತಿ ಪ್ರಸ್ತಾವನೆ ಸಲ್ಲಿಸಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದರು.ರಾಜ್ಯದ ಆಸ್ಪತ್ರೆಗಳಲ್ಲಿ ಸಮಗ್ರ ಅಪಘಾತ ಆರೈಕೆ ಸೇವೆಗೆ ಕ್ರಮ:

ರಾಜ್ಯ 182 ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಮಗ್ರ ಅಪಘಾತ ಆರೈಕೆ ಸೇವೆ ಒದಗಿಸಲು ತುರ್ತು ಚಿಕಿತ್ಸಾ ಕೊಠಡಿ ಮತ್ತು ಶಸ್ತ್ರಚಿಕಿತ್ಸೆ ಕೊಠಡಿ, ಐಸಿಯುಗಳಿಗೆ ವೈದ್ಯಕೀಯ ಉಪಕರಣ ಮತ್ತು ಸಾಧನೆಗಳ ಪೂರೈಕೆಗೆಗಾಗಿ 46 ಕೋಟಿ ರು. ವೆಚ್ಚಕ್ಕೆ ಸಂಪುಟಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಇದರಡಿ 100 ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್, ಮೈಸೂರು, ದಾವಣಗೆರೆ, ಬೆಂಗಳೂರು ಸಿ.ವಿ ರಾಮನ್ ಆಸ್ಪತ್ರೆಗಳಿಗೆ 3 -ಸಿಟಿ ಸ್ಕ್ಯಾನ್‌ ಯಂತ್ರ, ಐಸಿಟಿ ಉಪಕರಣಗಳು ಸೇರಿ ಚಿಕಿತ್ಸಾ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.ಗಣಿಗಾರಿಕೆ ನಿಧಿ ನಿರ್ವಹಣಾ ಸಮಿತಿ ರಚನೆ:

ಕೆಲ ಜಿಲ್ಲೆಯಲ್ಲಿರುವ ಗಣಿಗಾರಿಕೆ ನಿಧಿ ಬಳಕೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸದಸ್ಯರನ್ನಾಗಿ ಮಾಡಿ ಕೇಂದ್ರ ಸರ್ಕಾರ ನಿಯಮ ಬದಲಾಯಿಸಿದೆ. ಜಿಲ್ಲಾಧ್ಯಕ್ಷರು ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸದಸ್ಯರಾಗುವುದು ಸರಿಯಲ್ಲ. ಹೀಗಾಗಿ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಿರ್ವಹಣಾ ಸಮಿತಿ ರಚಿಸಲು ತೀರ್ಮಾನಿಸಿದ್ದು, ಸಮಿತಿಯಲ್ಲಿ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗಣಿ ಇಲಾಖೆ ಸಚಿವರು ಇರಲಿದ್ದಾರೆ. ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಿ ಸಮಿತಿಗೆ ಕಳಿಸಬೇಕು. ಈ ಸಮಿತಿಯೇ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಅನುಮೋದನೆ ನೀಡುತ್ತದೆ. ಇದರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಂತಾಗುವುದಿಲ್ಲ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಅಗೌರವ ಉಂಟಾಗಲ್ಲ ಎಂದು ಉಪಮುಖ್ಯಮಂತ್ರಿ ಡಾಜಿ. ಪರಮೇಶ್ವರ್ ತಿಳಿಸಿದರು.

ಉಡಾನ್‌ಗೆ ರಾಜ್ಯದ ನೆರವು:

ಉಡಾನ್‌ ಯೋಜನೆಗೆ ನೆರವಾಗಲು ರಾಜ್ಯ ಸರ್ಕಾರ ನೀಡಬೇಕಾಗಿರುವ ಅನುದಾನ ಬಿಡುಗಡೆ ಮಾಡಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಯಡಿ ಉಡಾನ್ ಕಾರ್ಯಕ್ರಮಕ್ಕೆ ಕೆಲವು ಮಾರ್ಪಾಡುಗಳನ್ನು ಮಾಡಿ ಅದಕ್ಕೆ ಆಡಳಿತಾತ್ಮಕ ಸ್ವರೂಪ ನೀಡಿ ಪ್ರಾದೇಶಿಕ ವಿಮಾನಯಾನ ಮೂಲಸೌಕರ್ಯಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಅನುದಾನದ ವಿಚಾರದಲ್ಲಿ ಕೆಲ ಬದಲಾವಣೆ ಆಗಿದ್ದವು. ರಾಜ್ಯ ಸರ್ಕಾರ ವಿಮಾನಯಾನ ಸಂಸ್ಥೆಗಳಿಗೆ ನೀಡಬೇಕಿದ್ದ ಸಬ್ಸಿಡಿ ನಿಲ್ಲಿಸಿತ್ತು. ಇದರಿಂದ ವಿಮಾನಯಾನ ಸೇವೆಗೆ ಅಡ್ಡಿ ಆಗುತ್ತದೆ ಎಂಬ ಕಾರಣಕ್ಕೆ ಕೆಲ ಬದಲಾವಣೆಗಳೊಂದಿಗೆ ಅನುದಾನ ನೀಡಲು ಸಂಪುಟ ತೀರ್ಮಾನಿಸಿದೆ.

ಇತರೆ ಪ್ರಮುಖ ತೀರ್ಮಾನ:

- ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಹಂಚಿಕೆಯಾಗಿರುವ 4,500 ವಿವಿಧ ಮಾದರಿಯ ಎಲೆಕ್ಟ್ರಿಕ್ ಬಸ್ಸುಗಳನ್ನು ಜಿಸಿಸಿ ಮಾದರಿಯಲ್ಲಿ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ.

- ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 600 ಕೋಟಿ ರು. ಬಿಡುಗಡೆ. ಈ ಹಣದ ಪೈಕಿ 249 ಕೋಟಿ ರು. ವೆಚ್ಚದಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಒಪ್ಪಿಗೆ.