25 ಲಕ್ಷ ರು. ಲಂಚ: ಮುಡಾ ಕಮಿಷನರ್‌ ಮನ್ಸೂರ್‌ ಅಲಿ ಲೋಕಾಯುಕ್ತ ಬಲೆಗೆ

| Published : Mar 24 2024, 01:30 AM IST

ಸಾರಾಂಶ

ಉದ್ಯಮಿಯೊಬ್ಬರು ತಮ್ಮ ಜಾಗವನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟಿದ್ದು, ಅದಕ್ಕೆ ಪ್ರತಿಯಾಗಿ ಸರ್ಕಾರ ಕೊಡುವ ಟಿಡಿಆರ್‌ಗೆ ಅನುಮೋದನೆ ನೀಡಲು ಮನ್ಸೂರ್‌ ಅಲಿ 25 ಲಕ್ಷ ರು.ಗೆ ಬೇಡಿಕೆಯಿಟ್ಟಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರುಬರೋಬ್ಬರಿ 25 ಲಕ್ಷ ರು. ಲಂಚ ಪಡೆಯುವಾಗ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್‌ ಮನ್ಸೂರ್ ಅಲಿ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಉದ್ಯಮಿಯೊಬ್ಬರು ತಮ್ಮ ಜಾಗವನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟಿದ್ದು, ಅದಕ್ಕೆ ಪ್ರತಿಯಾಗಿ ಸರ್ಕಾರ ಕೊಡುವ ಟಿಡಿಆರ್‌ಗೆ ಅನುಮೋದನೆ ನೀಡಲು ಮನ್ಸೂರ್‌ ಅಲಿ 25 ಲಕ್ಷ ರು.ಗೆ ಬೇಡಿಕೆಯಿಟ್ಟಿದ್ದರು.

ವಿವರ: ಫಿರ್ಯಾದಿದಾರ ಉದ್ಯಮಿ ಮಂಗಳೂರು ತಾಲೂಕಿನ ಕುಡುಪು ಗ್ರಾಮದಲ್ಲಿ ಒಟ್ಟು 10.8 ಎಕರೆ ಜಮೀನು ಖರೀದಿಸಿದ್ದರು. ಈ ನಡುವೆ ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಘಟಕವನ್ನು ವಿಸ್ತರಿಸುವ ಕುರಿತು ಈ ಜಮೀನನ್ನು ಟಿಡಿಆರ್‌ ನಿಯಮದ ಅಡಿ ಖರೀದಿ ಮಾಡುವ ಬಗ್ಗೆ ಪಾಲಿಕೆ ಹಾಗೂ ಉದ್ಯಮಿ ನಡುವೆ ಪತ್ರ ವ್ಯವಹಾರ ನಡೆದಿತ್ತು. ಅದರಂತೆ ಈ ಜಮೀನು ಜನವರಿ ತಿಂಗಳಲ್ಲಿ ಮಹಾನಗರ ಪಾಲಿಕೆ ಹೆಸರಿಗೆ ನೋಂದಣಿಯಾಗಿತ್ತು. ಬಳಿಕ ಪಾಲಿಕೆ ಆಯುಕ್ತರು ಉದ್ಯಮಿಗೆ ಟಿಡಿಆರ್‌ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿಯಲ್ಲಿ ಫೈಲ್‌ ಕಳುಹಿಸಿದ್ದರು. ಆದರೆ ಮುಡಾ ಆಯುಕ್ತ ಮನ್ಸೂರ್‌ ಅಲಿ ಈ ಫೈಲಿಗೆ ಅನುಮೋದನೆ ನೀಡದೆ ವಿಳಂಬ ಮಾಡಿದ್ದರು. ಈ ಬಗ್ಗೆ ಉದ್ಯಮಿ, ಮುಡಾ ಕಚೇರಿಗೆ ತೆರಳಿ ಮಾತನಾಡಿದಾಗ 25 ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಇದರ ವಿರುದ್ಧ ಉದ್ಯಮಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ, ಶನಿವಾರ 25 ಲಕ್ಷ ರು. ಲಂಚ ಪಡೆಯುವ ವೇಳೆಗೆ ಮನ್ಸೂರ್‌ ಅಲಿ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಮುಡಾ ಕಮಿಷನರ್ ಜತೆಗೆ ಬ್ರೋಕರ್‌ ಸಲೀಂ ಎಂಬಾತನನ್ನೂ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್ಪಿ ಚೆಲುವರಾಜ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಅಮಾನುಲ್ಲಾ ಎ., ಸುರೇಶ್ ಕುಮಾರ್ ಮತ್ತಿ ಸಿಬ್ಬಂದಿ ಭಾಗವಹಿಸಿದ್ದರು.