ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಪಟ್ಟಣದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 25 ಲಕ್ಷ ರು. ಹಣ ಬಿಡುಗಡೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ತಿಳಿಸಿದರು.ರಾಘವೇಂದ್ರ ಯೂತ್ ಸ್ಪೋರ್ಟ್ ಕ್ಲಬ್ ಆಯೋಜಿಸಿರುವ ಅರಕಲಗೂಡು ಚಾಂಪಿಯನ್ ಸೀಸನ್ -3 ಸಿದ್ದರಾಮಯ್ಯ ಕಪ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ವರ್ಷ ನಡೆದ ಪಂದ್ಯಾವಳಿಯಲ್ಲಿ ನೀಡಿದ್ದ ಭರವಸೆಯಂತೆ ಹಣ ಬಿಡುಗಡೆ ಮಾಡಿಸಿದ್ದು ಮುಂದಿನ ವರ್ಷ 25 ಲಕ್ಷ ರು. ಹಣವನ್ನು ಮಂಜೂರು ಮಾಡಿಸಲು ಎಲ್ಲ ಪ್ರಯತ್ನ ನಡೆಸುವುದಾಗಿ ಹೇಳಿದರು. ಸಣ್ಣದಾಗಿ ಪ್ರಾರಂಭಗೊಂಡು ಬೃಹತ್ ಆಗಿ ಬೆಳೆದಿರುವ ಪಂದ್ಯಾವಳಿ ರಾಜ್ಯದಾದ್ಯಂತ ಗಮನ ಸೆಳೆಯುತ್ತಿರುವುದು ಸಂತಸದ ಸಂಗತಿ. ಯಾವುದೇ ಊರು ಆರೋಗ್ಯಕರವಾಗಿರಬೇಕಾದರೆ ಅಲ್ಲಿನ ಕ್ರೀಡಾಂಗಣ ಮತ್ತು ಗರಡಿಮನೆಗಳು ಸುಸ್ಥಿತಿಯಲ್ಲಿರಬೇಕು. ಜನರು ಆಸ್ಪತ್ರೆ, ಪೊಲೀಸ್ ಠಾಣೆ ಕೇಳುವ ಮೊದಲು ಕ್ರೀಡಾಂಗಣ, ಶಾಲೆ ನೀಡುವಂತೆ ಕೆಳುವಂತಾಗಬೇಕು. ಕ್ರೀಡೆ ಮತ್ತು ದೈಹಿಕ ವ್ಯಾಯಾಮ ಮನುಷ್ಯನ ಚಟುವಟಿಕೆಯ ಜೀವನಕ್ಕೆ ಸಹಕಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರಾಜ್ಯದ ಅಸ್ಮಿತೆ. ಸದಾ ಜನಪರ ಚಿಂತನೆಯಲ್ಲಿ ತೊಡಗಿರುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಬರಿದಾಯಿತು ಎಂಬ ಆಪಾದನೆ ಹುರುಳಿಲ್ಲದ್ದು. ಈ ಯೋಜನೆಗಳಿಂದ ಬಡಕುಟುಂಬಗಳು ನೆಮ್ಮದಿಯ ಬದುಕು ಕಂಡುಕೊಂಡಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್. ಎಸ್. ಪ್ರಸನ್ನ ಕುಮಾರ್, ದೇವರಾಜ ಅರಸು ಅವರ ಬಳಿಕ ಬಡವರು, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎರಡೂ ಅವಧಿಯ ಆಡಳಿತದಲ್ಲಿ ನಡೆಸಿದ್ದಾರೆ. ಹಲವು ದಶಕಗಳಿಂದ ಜಮೀನು ಉಳುಮೆ ಮಾಡುತ್ತಿದ್ದರೂ ಖಾತೆಯಾಗದೆ ಸಂಕಷ್ಟದಲ್ಲಿದ್ದ ರೈತರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಮೂಲಕ ಮೂರು ತಿಂಗಳಲ್ಲಿ ಜಮೀನಿನ ಖಾತೆಗಳನ್ನು ಮಾಡಿಕೊಡಲು ಕ್ರಮ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಹಾಗೂ ಅವರ ಸರ್ಕಾರ ಕೈಗೊಂಡ ಜನಪರ ಕಾರ್ಯಗಳ ಕುರಿತು ಜನಸಾಮಾನ್ಯರು, ಯುವಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಂದ್ಯಾವಳಿಗೆ ಸಿದ್ದರಾಮಯ್ಯ ಕಪ್ ಎಂದು ಹೆಸರಿಡಲಾಗಿದೆ ಎಂದರು.ಕಡೂರು ಶಾಸಕ ಆನಂದ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ವಿ.ಗೋಪಾಲಸ್ವಾಮಿ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಬಸವರಾಜ್ ಜೆಟ್ಟಹುಂಡಿ, ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರಾಚಂದನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಮಾತನಾಡಿದರು. ಬಾಲಭವನ್ ಅಭಿವೃದ್ಧಿ ಅಧಿಕಾರಿ ಬಿ.ಆರ್. ನಾಯ್ಡು, ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾದ್ಯಕ್ಷ ಸುಬಾನ್ ಷರೀಪ್, ಸದಸ್ಯರಾದ ಕೃಷ್ಣಯ್ಯ, ಹೂವಣ್ಣ, ಅನಿಕೇತನ್, ಅಬ್ದುಲ್ ಬಾಸಿದ್, ಗೀತಾ, ಮುಖಂಡರಾದ ಚಿದಾನಂದ ಪಟೇಲ್, ಜೆಸಿಬಿ ಚಂದ್ರು, ಮಂಜೇಗೌಡ, ದಿವಾಕರ ಗೌಡ, ಸುರೇಶ್, ವಿನೋದ್, ಕಾರ್ಗಿಲ್ ಯೋಗೇಶ್, ನಟರಾಜ್, ಚಿಕ್ಕಹೊನ್ನೇಗೌಡ, ಎನ್.ರವಿಕುಮಾರ್, ಬಾಗೇವಾಳು ಮಂಜೇಗೌಡ, ರಂಜಿತ್, ಹೊಳೆನರಸೀಪುರ ಡಿವೈಎಸ್‌ಪಿ ಶಾಲು, ಸಿಪಿಐ ವಸಂತ್ ಉಪಸ್ಥಿತರಿದ್ದರು.
ಉಪನ್ಯಾಸಕ ಹಾಗೂ ಸಾಮಾಜಿಕ ಕಾರ್ಯಕರ್ತ ಕೊಣನೂರಿನ ಜಮೀರ್ ಅಹಮದ್ ಅವರನ್ನು ಗೌರವಿಸಲಾಯಿತು. ನಾಲ್ಕು ದಿನಗಳ ಕಾಲ ಐಪಿಎಲ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿವೆ. ಗೆದ್ದ ತಂಡಗಳಿಗೆ ಪ್ರಥಮ ಬಹುಮಾನ 1, 11,111 ರು. ನಗದು, ಟ್ರೋಫಿ ಮತ್ತು ಟಗರು. ದ್ವಿತೀಯ ಬಹುಮಾನ 77,777 ರು. ನಗದು, ಟ್ರೋಫಿ, ಟಗರು. ತೃತೀಯ ಬಹುಮಾನ 55,555 ರು. ನಗದು, ಟ್ರೋಫಿ. ನಾಲ್ಕನೇ ಬಹುಮಾನ 33,333 ರು. ನಗದು, ಟ್ರೋಫಿ ನೀಡಲಾಗುವುದು.