ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ 250 ಕೋಟಿ ರು. ಅನುಮೋದನೆ: ಕೆ.ಎಂ.ಉದಯ್

| Published : Feb 23 2025, 12:35 AM IST

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ 250 ಕೋಟಿ ರು. ಅನುಮೋದನೆ: ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವೇಶ್ವರಯ್ಯ ನಾಲೆ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕೆಂಬ ಉದ್ದೇಶದಿಂದ ಸೀಳು ನಾಲೆಗಳ ಅಭಿವೃದ್ಧಿ, ಸಂಪರ್ಕ ರಸ್ತೆಗಳ ಕಾಮಗಾರಿಗಳಿಗಾಗಿ 250 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ 250 ಕೋಟಿ ರು. ಅನುಮೋದನೆ ದೊರಕಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಕ್ಷೇತ್ರ ವ್ಯಾಪ್ತಿಯ ಹನುಮಂತಪುರ, ಸೋಮನಹಳ್ಳಿ, ಉಪ್ಪಾರದೊಡ್ಡಿ ಹಾಗೂ ಅಣ್ಣೂರು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ವಿಶ್ವೇಶ್ವರಯ್ಯ ನಾಲೆ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕೆಂಬ ಉದ್ದೇಶದಿಂದ ಸೀಳು ನಾಲೆಗಳ ಅಭಿವೃದ್ಧಿ, ಸಂಪರ್ಕ ರಸ್ತೆಗಳ ಕಾಮಗಾರಿಗಳಿಗಾಗಿ 250 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮಗಳು ಸೇರಿದಂತೆ ಈ ವ್ಯಾಪ್ತಿಯ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ 25 ಕೋಟಿ ರು ಮಂಜೂರಾತಿ ಪಡೆಯಲಾಗಿದೆ. ಗಡಿ ವ್ಯಾಪ್ತಿಯ ಕೆರೆಗಳ ನೀರು ತುಂಬಿಸುವ ಕೆಲಸಕ್ಕೂ ಈ ಭಾಗದಿಂದಲೇ ಪೈಪ್ ಲೈನ್ ಅಳವಡಿಸುವ ಯೋಜನೆಯನ್ನು ಕೈಗೊಂಡಿರುವುದಾಗಿ ಹೇಳಿದರು.

ತಾಲೂಕಿನ ಬನ್ನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಮೂರು ತಿಂಗಳ ವೇಳೆಗೆ ಶಿಂಷಾ ನದಿ ವ್ಯಾಪ್ತಿಯ 18 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಸಂಬಂಧ ಈಗಾಗಲೇ ಉಂಟಾಗಿದ್ದ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ನಿಡಘಟ್ಟ ಗ್ರಾಪಂ ಅಧ್ಯಕ್ಷೆ ಕೆ.ಪಿ.ಉಮಾ , ಸದಸ್ಯರಾದ ಮಹೇಶ, ರಾಜಣ್ಣ, ಸಿದ್ದರಾಜು. ದೀಪಕ್, ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್, ಮುಖಂಡರದ ಚಿಕ್ಕ ತಿಮ್ಮೇಗೌಡ,ಸತೀಶ, ಹರೀಶ ಹಾಗೂ ಪಿ ಡಿ ಓ ಶೀಲಾ ಇದ್ದರು.---

ಸಿದ್ದರಾಮಯ್ಯ ಪದಚ್ಯುತಿ ಪ್ರಯತ್ನ ನಡೆಸುತ್ತಿಲ್ಲ

ಮದ್ದೂರು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪದಚ್ಯುತಿಗೆ ನಮ್ಮ ಪಕ್ಷದ ಯಾವುದೇ ಸಚಿವರು ಅಥವಾ ಶಾಸಕರು ಪ್ರಯತ್ನಿಸುತ್ತಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಎಲ್ಲಾ ನಾಯಕರು ಒಗ್ಗೂಡಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ . ಈ ಬಗ್ಗೆ ನಮ್ಮಲ್ಲಿ ಯಾವುದೇ ಆಪಸ್ವರವಿಲ್ಲ, ಎಂದರು.

ಕಳೆದ ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ದುಸ್ಥಿತಿಯಲ್ಲಿತ್ತು. ಆನಂತರ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷಕ್ಕೆ ಪುನಶ್ಚೇತನ ನೀಡುವ ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 138 ಸ್ಥಾನಗಳನ್ನು ಪಡೆದು ರಾಜ್ಯದಲ್ಲಿ ಅಧಿಕಾರ ಹಿಡಿಯುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.