ಸಾರಾಂಶ
ಶಿವಮೊಗ್ಗ: ಕೆಪಿಎಸ್ ಶಾಲೆ ಅಭಿವೃದ್ಧಿಗಾಗಿ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ 2 ಸಾವಿರ ಕೋಟಿ ರು. ನೀಡಲು ಒಪ್ಪಿದೆ, ಅದಕ್ಕೆ ರಾಜ್ಯ ಸರ್ಕಾರ 500 ಕೋಟಿ ರು. ಸೇರಿಸಿ ಒಟ್ಟು 2500 ಕೋಟಿ ರು. ವೆಚ್ಚದಲ್ಲಿ ಕೆಪಿಎಸ್ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಯಾವ ಬ್ಯಾಂಕ್‌ನವರು ಸಹ ಇಷ್ಟು ಮೊತ್ತದ ಹಣವನ್ನು ಶಾಲಾ ಅಭಿವೃದ್ಧಿಗಾಗಿ ನೀಡುವುದಿಲ್ಲ. ಆದರೆ, ನಮ್ಮ ಅವಧಿಯ 7 ರಿಂದ 8 ತಿಂಗಳಲ್ಲಿ ಶಿಕ್ಷಣದಲ್ಲಾದ ಬದಲಾವಣೆಯನ್ನು ಗಮನಿಸಿ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್‌ನವರು ಇಷ್ಟು ಮೊತ್ತದ ಹಣವನ್ನು ನೀಡಲು ಆಸಕ್ತಿ ತೋರಿದ್ದಾರೆ. ಈ ಹಣದಲ್ಲಿ ಒಟ್ಟು 400 ರಿಂದ 500 ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.ಈ ಹಣವನ್ನು ನಾವು ಬ್ಯಾಂಕ್‌ಗೆ ಹಂತ ಹಂತವಾಗಿ ವಾಪಸ್ ನೀಡುತ್ತೇವೆ. ನಾವು ಸಾಲ ತೆಗೆದುಕೊಳ್ಳಲು ಕೇಂದ್ರ ಸರ್ಕಾರವೇ ಕಾರಣವಾಗಿದೆ. ನಮ್ಮ ಸರ್ಕಾರಕ್ಕೆ ಕಡಿಮೆ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ನೀಟ್ ಕೋಚಿಂಗ್ ೨೫ ಸಾವಿರ ಮಕ್ಕಳಿಗೆ ಸೀಮಿತಗೊಳಿಸಿದ್ದೇವು. ಈಗ ಅದನ್ನು ಎಲ್ಲಾ ಮಕ್ಕಳಿಗೆ ವಿಸ್ತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಶಿಕ್ಷಣದಲ್ಲಿ ಹೊಸದಾಗಿ ಎಐ ತಾಂತ್ರಿಕತೆಯನ್ನು ಅಳವಡಿಸಲಾಗುತ್ತದೆ. ಮಕ್ಕಳು ಓದುವುದರಲ್ಲಿ ಮಾತ್ರ ಚೆನ್ನಾಗಿದ್ದರೆ ಸಾಲದು. ಅವರ ಬಾಡಿ ಲಾಗ್ವೇಜ್ ಸಹ ಸರಿಯಾಗಿರಬೇಕು. ಇನ್ಮುಂದೆ ಅವರು ಕಂಪ್ಯೂಟರ್‌ನೊಂದಿಗೆ ಮಾತನಾಡುತ್ತಾರೆ. ಅದರಿಂದಾಗಿ ಅವರ ಬಾಡಿ ಲಾಂಗ್ವೇಜ್ ಸರಿ ಆಗುತ್ತೆ ಎಂದು ಹೇಳಿದರು.
ಹಾಗೆಯೇ ಗಣಿತ ಗಣಕ ಯೋಜನೆಯಿಂದ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರ ಪೋನ್‌ನಲ್ಲಿ ಮಾತನಾಡಿ ಕಲಿಸುತ್ತಿದ್ದಾರೆ. ಎಲ್‌ಕೆಜಿ, ಯುಕೆಜಿ ಗೆ ಚಿಲಿಪಿಲಿ ಯೋಜನೆಯಡಿ ಪಾಠ ಮಾಡಿಕೊಡಲಾಗುತ್ತಿದೆ. ಹೀಗೆ ಶಿಕ್ಷಣದಲ್ಲಿ ಅನೇಕ ಬದಲಾವಣೆಗಳನ್ನು ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಎಂಎಡಿಬಿ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ, ಪ್ರಮುಖರಾದ ಡಾ.ಶ್ರೀನಿವಾಸ್ ಕರಿಯಣ್ಣ, ಜಿ.ಡಿ.ಮಂಜುನಾಥ್ ಸೇರಿದಂತೆ ಹಲವರಿದ್ದರು.ಕುವೆಂಪು ವಿವಿ ದುಸ್ಥಿತಿಗೆ ಬಿಜೆಪಿ ಸರ್ಕಾರ ಕಾರಣ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಅವ್ಯವಹಾರ ನಡೆದು ಈ ದುಸ್ಥಿತಿಗೆ ಬರಲು ಬಿಜೆಪಿ ಸರ್ಕಾರ ಕಾರಣ, ನಾವು ಆಡಳಿತಕ್ಕೆ ಬಂದ ಮೇಲೆ ವಿವಿಯನ್ನು ಹತೋಟಿಗೆ ತರುವ ಕೆಲಸ ಮಾಡಿದ್ದೇವೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುವೆಂಪು ವಿಶ್ವವಿದ್ಯಾಲಯ ಮುಚ್ಚುವ ಸ್ಥಿತಿಗೆ ಬಂದಿದ್ದು, ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುವೆಂಪು ವಿವಿಯ ಅದೋಗತಿಗೆ ಬಿಜೆಪಿಯವರೇ ಕಾರಣ ಎಂಬುದು ಎಲ್ಲರಿಗೂ ಗೊತ್ತು. ಸುಮ್ಮನೆ ಇಲ್ಲಸಲ್ಲದ ಆಪಾದನೆಯನ್ನು ನಮ್ಮ ಸರ್ಕಾರದ ಮೇಲೆ ಹೊರಿಸಬೇಡಿ. ನಮ್ಮ ಸರ್ಕಾರ ಬಂದ ಮೇಲೆಯೇ ಕುವೆಂಪು ವಿಶ್ವವಿದ್ಯಾಲಯ ಹತೋಟಿಗೆ ಬಂದಿದ್ದು ಎಂದು ಕುಟುಕಿದರು.ಡಿ.ಎಸ್.ಅರುಣ್ ಅವರಿಗೆ ಕಾಮನ್ ಸೆನ್ಸ್ ಇಲ್ಲ:ರಾಜ್ಯಪಾಲರು ಒಂದು ಕಾರ್ಯಕ್ರಮಕ್ಕೆ ಬಂದಾಗ ಯಾವ ರೀತಿಯ ಸಭ್ಯತೆಯಿಂದ ವರ್ತಿಸಬೇಕು ಎಂದು ಡಿ.ಎಸ್.ಅರುಣ್‌ರವರು ಮೊದಲು ಕಲಿತುಕೊಳ್ಳಬೇಕು. ಘಟಿಕೋತ್ಸವಕ್ಕೆ ರಾಜ್ಯಪಾಲರು ಬಂದ ದಿನ ಉನ್ನತ ಶಿಕ್ಷಣ ಸಚಿವರು ಬಾರದೆ ಇರುವ ಒಂದು ವಿಷಯವನ್ನು ಹಿಡಿದುಕೊಂಡು ಆರೋಪವನ್ನು ಮಾಡುತ್ತಿದ್ದಾರೆ. ಆದರೆ ರಾಜ್ಯಪಾಲರು ಬಂದಾಗ ಡಿ.ಎಸ್.ಅರುಣ್‌ರವರು ತಡವಾಗಿ ಬರುವ ಮೂಲಕ ಶಿಷ್ಟಾಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಕಾಮನ್ ಸೆನ್ಸ್‌ಇಲ್ಲ ಎಂದು ಗುಡುಗಿದರು.ಮ್ಯಾಮ್‌ಕೋಸ್ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲಿಸಿ
ಶಿವಮೊಗ್ಗ: ಮ್ಯಾಮ್‌ಕೋಸ್ ಚುನಾವಣೆಯು ಫೆ.4 ರಂದು ನಡೆಯುತ್ತಿದ್ದು ನಮ್ಮ ಪಕ್ಷದ 19 ಜನರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಮತ ನೀಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸದಸ್ಯರ ಪರವಾಗಿ ಮತಯಾಚಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.4ರಂದು ಮ್ಯಾಮ್ ಕೋಸ್ ಚುನಾವಣೆ 17 ಜಿಲ್ಲೆಯಲ್ಲಿ ನಡೆಯಯುತ್ತಿದೆ. ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಅಡಿ 19 ಜನ ಕಾಂಗ್ರೆಸ್ ಬೆಂಬಲಿಗರು ಸ್ಪರ್ಧಿಸುತ್ತಿದ್ದಾರೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲು ನಮಗೆ ಹೈಕಮಾಂಡ್ ಸೂಚಿಸಿದೆ. ಹಾಗಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ಕಡೆ ಸಭೆಯಿದೆ. ಅದನ್ನು ಮುಗಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಪ್ರಚಾರಕ್ಕೆ ಇಳಿಯಲಿದ್ದೇವೆ ಎಂದು ತಿಳಿಸಿದರು.ಮ್ಯಾಮ್ ಕೋಸ್ ಸದ್ಯ ಬಹಳ ಹಾಳಾಗಿದ್ದು, ಬೇರೆ ಪಕ್ಷದವರು ಪಕ್ಷದ ಚಟುವಟಿಕೆಗಾಗಿ ಮ್ಯಾಮ್ ಕೋಸ್‌ನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.