ಶಿವಾನಂದ ಗೊಂಬಿ
ಹುಬ್ಬಳ್ಳಿ: ಕಳೆದ 15-20 ದಿನಗಳಲ್ಲಿ 2500ಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರು ಹುಬ್ಬಳ್ಳಿಗೆ ಬಂದಿದ್ದಾರೆಯೇ?ಇಂಥ ಪ್ರಶ್ನೆಗಳೀಗ ಹುಬ್ಬಳ್ಳಿ ಗಲ್ಲಿ ಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರತಿ ಎರಡು ದಿನಕ್ಕೊಮ್ಮೆ (ದಿನ ಬಿಟ್ಟು ದಿನ) ಶಾಲಿಮಾರ್- ವಾಸ್ಕೋಡಿಗಾಮಾ ಎಕ್ಸ್‌ಪ್ರೆಸ್ ರೈಲಿನಲ್ಲಿ 200ಕ್ಕೂ ಅಧಿಕ ಜನ ವಲಸಿಗರು ಬರುತ್ತಿದ್ದಾರೆ.
ಇಲ್ಲಿಂದ ಕೆಲವೊಂದಿಷ್ಟು ಜನ ಬೆಳಗಾವಿ, ಗೋವಾ, ಮಹಾರಾಷ್ಟ್ರದ ಕೆಲ ಹಳ್ಳಿಗಳತ್ತ ಬಸ್ ಮೂಲಕ ತೆರಳುತ್ತಿದ್ದರೆ, ಮತ್ತೆ ಕೆಲವರು ಹುಬ್ಬಳ್ಳಿಯ ಬೇರೆ ಬೇರೆ ಕಡೆಗಳಿಗೆ ತೆರಳುತ್ತಿದ್ದಾರಂತೆ. ಆದರೆ, ಇವರು ಕಾರ್ಮಿಕರು, ಆಧಾರ್ ಕಾರ್ಡ್‌ಗಳೆಲ್ಲ ಇವೆ ಎಂಬ ಸಬೂಬು ಪೊಲೀಸರದ್ದು. ಮಕ್ಕಳು, ಹೆಣ್ಮಕ್ಕಳು, ಯುವಕರು, ವೃದ್ಧರೂ ಇವರಲ್ಲುಂಟು.ಆಗಿದ್ದೇನು?
ಕಳೆದ ಹದಿನೈದು ದಿನಗಳ ಹಿಂದೆ ಎಂಟ್ಹತ್ತು ಜನರ ಗುಂಪು ರೈಲಿನ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದೆ. ಇವರು ತಮ್ಮನ್ನು ತಾವು ಕಾರ್ಮಿಕರು ಎಂದು ಹೇಳಿಕೊಂಡಿದ್ದಾರೆ. ಇವರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ದಾಖಲೆ ಪರಿಶೀಲಿಸಿ ಕಳುಹಿಸಿದ್ದಾರೆ.
ಇದಾದ ಬಳಿಕ ಪ್ರತಿ ಎರಡು ದಿನಕ್ಕೊಮ್ಮೆ ಬರುವ ಶಾಲಿಮಾರ್ ಎಕ್ಸ್‌ಪ್ರೆಸ್ ರೈಲಿನ ಮೂಲಕ 200ಕ್ಕೂ ಅಧಿಕ ಪಶ್ಚಿಮ ಬಂಗಾಳ, ಓಡಿಸಾ ಸೇರಿದಂತೆ ಈಶಾನ್ಯ ರಾಜ್ಯದ ವಿವಿಧೆಡೆಗಳಿಂದ ಬರುತ್ತಿದ್ದಾರೆ. ಇವರನ್ನು ಆರ್‌ಪಿಎಫ್, ರೈಲ್ವೆ ಪೊಲೀಸರು, ಸ್ಥಳೀಯ ಪೊಲೀಸ್ ಕಮಿಷನರೇಟ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದೆ.
ಎಲ್ಲಿಂದ ಬಂದರು; ಇಲ್ಲಿಗೇಕೆ ಬಂದರು? ಎಲ್ಲಿಗೆ ಹೋಗುತ್ತಾರೆ ಎಂಬ ಬಗ್ಗೆ ಪರಿಶೀಲನೆ ನಡೆಸುವ ಜವಾಬ್ದಾರಿ ಸ್ಥಳೀಯ ಪೊಲೀಸರದ್ದು. ಆ ಕೆಲಸ ಪೊಲೀಸರು ಮಾಡಬೇಕು. ಆದರೆ, ಕಾಟಾಚಾರಕ್ಕೆಂಬಂತೆ ಆಧಾರ್ ಕಾರ್ಡ್ ನೋಡಿ ಸುಮ್ಮನೆ ಬಿಡಲಾಗುತ್ತಿದೆ ಎಂಬ ಆರೋಪ ಬಿಜೆಪಿಯದು.ಹೀಗೆ ಬಂದವರು ತಮ್ಮನ್ನು ತಾವು ಕಾರ್ಮಿಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಏಕಕಾಲಕ್ಕೆ ಅದ್ಹೇಗೆ ಇಷ್ಟೊಂದು ಕಾರ್ಮಿಕರ ಅಗತ್ಯತೆ ಬೀಳುತ್ತದೆ. ಇವರನ್ನೆಲ್ಲ ಯಾರು ಯಾವ ಗುತ್ತಿಗೆದಾರ ಕರೆಯಿಸಿಕೊಳ್ಳುತ್ತಿದ್ದಾರೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರವಿಲ್ಲ.
ಎಲ್ಲಿಗೆ ಹೋಗೋದು ಗೊತ್ತಿಲ್ಲ?ಇನ್ನು ಹೀಗೆ ಬರುತ್ತಿರುವವರಿಗೆ ತಾವು ಎಲ್ಲಿಗೆ ಹೋಗಬೇಕು? ಎಲ್ಲಿ ಕೆಲಸ ನಡೆದಿದೆ? ತಮ್ಮನ್ನು ಕರೆಯಿಸಿಕೊಂಡಿರುವುದು ಯಾರು? ಯಾವ ಕೆಲಸ ಮಾಡಿಸಲು ಕರೆಯಿಸಿದ್ದಾರೆ ಎಂಬ ಬಗ್ಗೆಯೂ ಸರಿಯಾಗಿ ಮಾಹಿತಿ ಇಲ್ಲ. ಮಾಲೂಮ್ ನಹೀ ಸಾಬ್.. ಅಬಿ ಯಂಹಾ ಸೆ ಜಾತೆ ಹೈ ಎಂದು ಹೇಳುತ್ತಾರೆ. ಅಲ್ಲದೇ, ಕಂಹಾ ಜಾತೆ ಹೋ ಎಂದರೆ ಅದಕ್ಕೂ ಸರಿಯಾಗಿ ಉತ್ತರ ನೀಡುತ್ತಿಲ್ಲ.
ಬಿಜೆಪಿ ವಾದವೇನು?ಇವರೆಲ್ಲ ಪಶ್ಚಿಮ ಬಂಗಾಳ ರಾಜ್ಯದಿಂದ ಬರುತ್ತಿದ್ದಾರೆ. ಇವರು ಬಾಂಗ್ಲಾ ಅಕ್ರಮ ನುಸುಳುಕೋರು ಇರುವ ಸಾಧ್ಯತೆ ಇದೆ. ಇದೀಗ ಅಲ್ಲಿ ಬಿಜೆಪಿ ಸರ್ಕಾರ ಬಂದಿರುವುದರಿಂದ ಜತೆಗೆ 90 ಲಕ್ಷ ಮತದಾರರ ಹೆಸರು ಡಿಲಿಟ್ ಆಗಿರುವ ಕಾರಣ ಅಲ್ಲಿ ಇರಲು ಸಾಧ್ಯವಾಗದೇ ಇಲ್ಲಿಗೆ ಬರುತ್ತಿದ್ದಾರೆ. ಹೀಗೆ ಬರುತ್ತಿರುವವರ ಪೂರ್ವಾಪರವೆಲ್ಲವನ್ನೂ ವಿಚಾರಿಸಬೇಕು. ಆದರೆ, ಸ್ಥಳೀಯ ಪೊಲೀಸರಿಂದ ಆ ಕೆಲಸ ಆಗುತ್ತಿಲ್ಲ ಎಂಬುದು ಬಿಜೆಪಿಗರ ಆರೋಪ.
ಒಟ್ಟಿನಲ್ಲಿ ತಮ್ಮನ್ನು ತಾವು ಕಾರ್ಮಿಕರು ಎಂದು ಹೇಳಿಕೊಳ್ಳುತ್ತಿರುವ ಇವರು ಹುಬ್ಬಳ್ಳಿಗೆ ರೈಲಿನ ಮೂಲಕ ಬಂದು ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಬೇರೆ ಜಿಲ್ಲೆಗಳಿಗೆ ತೆರಳುತ್ತಿರುವುದಂತೂ ಸತ್ಯ.ಹಾಗಾದರೆ ಇವರೆಲ್ಲ ನಿಜವಾಗಿ ಕಾರ್ಮಿಕರಾ? ಕಾರ್ಮಿಕರಿದ್ದರೆ ಏನು ಕೆಲಸ ಮಾಡುತ್ತಿದ್ದಾರೆ? ಯಾರ ಬಳಿ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ವಿಚಾರಿಸಿ, ನಿಜವೇ ಎಂಬುದನ್ನು ಖಚಿತ ಪಡಿಸಿಕೊಂಡು ಕಳುಹಿಸಬೇಕಿದೆ ಎಂಬುದು ಮಾತ್ರ ಸ್ಪಷ್ಟ.
ಪ್ರತಿ ಎರಡು ದಿನಕ್ಕೊಮ್ಮೆ ಬರುವ ಶಾಲಿಮಾರ್ ಎಕ್ಸ್‌ಪ್ರೆಸ್‌ನಲ್ಲಿ 200ಕ್ಕೂ ಅಧಿಕ ವಲಸಿಗರು ಬರುತ್ತಿದ್ದಾರೆ. ಇವರಿಗೆ ತಾವೆಲ್ಲಿ ಹೋಗಬೇಕು ಎಂಬುದು ಗೊತ್ತಿಲ್ಲ. ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಹೇಳುತ್ತಿಲ್ಲ. ಇವರ ನಡವಳಿಕೆಯಿಂದ ಅಕ್ರಮ ನುಸುಳುಕೋರರೇ ಎಂಬ ಸಂಶಯ ಬರುತ್ತಿದೆ ಎಂದು ಬಿಜೆಪಿ ಮುಖಂಡ ಜಯತೀರ್ಥ ಕಟ್ಟಿ ಹೇಳಿದ್ದಾರೆ.