ಸಾರಾಂಶ
ಮಾಹೆ ಸಂಸ್ಥೆಯು 25ನೇ ವರ್ಷದ ಮಣಿಪಾಲ ಆರೋಗ್ಯ ಕಾರ್ಡ್-2025 ನೋಂದಣಿ ಆರಂಭಿಸಿದೆ.
ಮಂಗಳೂರು: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಸಂಸ್ಥೆಯು 25ನೇ ವರ್ಷದ ಮಣಿಪಾಲ ಆರೋಗ್ಯ ಕಾರ್ಡ್-2025 ನೋಂದಣಿ ಆರಂಭಿಸಿದೆ ಎಂದು ಮಾಹೆ ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸಲರ್ ಡಾ.ದಿಲೀಪ್ ಜಿ. ನಾೖಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯು ಈಗ ರಜತ ಮಹೋತ್ಸವದ ಮೈಲಿಗಲ್ಲು ತಲುಪಿದೆ. ಕಳೆದ 24 ವರ್ಷಗಳಲ್ಲಿ ಈ ಕಾರ್ಡ್ ಕರ್ನಾಟಕ ಮತ್ತು ಇತರ ರಾಜ್ಯಗಳ ಲಕ್ಷಾಂತರ ಕುಟುಂಬಗಳಿಗೆ ವರದಾನವಾಗಿದೆ ಎಂದು ಹೇಳಿದರು.ಆರಂಭಿಕ ವರ್ಷ 2000ರಲ್ಲಿ 10,500 ಸದಸ್ಯರು ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯಡಿ ನೊಂದಣಿ ಮಾಡಿದ್ದರು. ಈ ಸಂಖ್ಯೆ ಈಗ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 3.68 ಲಕ್ಷ ಕುಟುಂಬಗಳು ನೋಂದಣಿ ಮಾಡಿಕೊಂಡಿವೆ. ವರ್ಷದಿಂದ ವರ್ಷಕ್ಕೆ ಆರೋಗ್ಯ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಕೆಎಂಸಿ ಮಂಗಳೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಘೀರ್ ಸಿದ್ದಿಕಿ ಮಾತನಾಡಿ, ಈ ಯೋಜನೆಯಡಿ ಒಂದು ವರ್ಷ ಮತ್ತು ಎರಡು ವರ್ಷಗಳ ಸದಸ್ಯತ್ವ ಆಯ್ಕೆಗಳನ್ನು ನೀಡುತ್ತಿದ್ದೇವೆ. ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರೂ ಕೂಡ ಸದಸ್ಯರಾಗಿ ಪ್ರಯೋಜನ ಪಡೆಯಬಹುದು ಎಂದು ವಿವರಿಸಿದರು.ಮಣಿಪಾಲ ಆರೋಗ್ಯ ಕಾರ್ಡ್ ಕುರಿತು ಹಾದೂ ಜಿಲ್ಲೆಯಾದ್ಯಂತ ಇರುವ ಅಧಿಕೃತ ಪ್ರತಿನಿಧಿಗಳ ಮಾಹಿತಿಗಾಗಿ ದೂ.ಸಂಖ್ಯೆ: 0824-2285214, 7022078002 ಗೆ ಕರೆ ಮಾಡಬಹುದು.
ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಡಾ.ಶಿವಾನಂದ ಪ್ರಭು, ಕೆಎಂಸಿ ಅತ್ತಾವರದ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಮಡಿ, ಮಾರುಕಟ್ಟೆ ವಿಭಾಗದ ಸೀನಿಯರ್ ಮ್ಯಾನೆಜರ್ ರಾಕೇಶ್ ಇದ್ದರು.