ಉ.ಕ ಪ್ರತ್ಯೇಕಕ್ಕೆ 26 ಶಾಸಕರು, 2 ಸಂಸದರ ಬೆಂಬಲ

| Published : Nov 23 2025, 03:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಕೈಗೊಂಡಿರುವ ಹೋರಾಟಕ್ಕೆ ಇದೀಗ ಸುಮಾರು 26 ಶಾಸಕರು ಮತ್ತು ಇಬ್ಬರು ಸಂಸದರು ಬೆಂಬಲ ವ್ಯಕ್ತಪಡಿಸಿದ್ದು, ಇದರಲ್ಲಿ 11 ಶಾಸಕರು ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಲಿದ್ದಾರೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಕೈಗೊಂಡಿರುವ ಹೋರಾಟಕ್ಕೆ ಇದೀಗ ಸುಮಾರು 26 ಶಾಸಕರು ಮತ್ತು ಇಬ್ಬರು ಸಂಸದರು ಬೆಂಬಲ ವ್ಯಕ್ತಪಡಿಸಿದ್ದು, ಇದರಲ್ಲಿ 11 ಶಾಸಕರು ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಲಿದ್ದಾರೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ನಿರಂತವಾಗಿ ಅನ್ಯಾಯವಾಗುತ್ತಿರುವುದನ್ನು ವಿರೋಧಿಸಿ ಪ್ರತ್ಯೇಕ ರಾಜ್ಯದ ಬಗ್ಗೆ ಶಾಸಕರಾದ ರಾಜು ಕಾಗೆ ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಇದೀಗ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಶಾಸಕರು ಪಕ್ಷಾತೀತವಾಗಿ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಈ 26 ಶಾಸಕರು ಡಿ.8ರಂದು ಒಂದು ಸಭೆ ಮಾಡಲಿದ್ದು, ಈಗಾಗಲೇ 11 ಜನ ಪ್ರತ್ಯೇಕ ರಾಜ್ಯದ ಪರ ಧ್ವನಿ ಎತ್ತುವುದಾಗಿ ಹೇಳಿದ್ದಾರೆ. ಉಳಿದವರು ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಮಾತನಾಡಲಿದ್ದಾರೆ. ಆದರೆ, ಡಿ.8ರ ಸಭೆಯಲ್ಲಿ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಲು ಮುಂದೆ ಬರುವವರ ಸಂಖ್ಯೆ ಹೆಚ್ಚಳವಾಗಬಹುದು. ಇವರೆಲ್ಲ ಡಿ.11ರಂದು ಸದನದಲ್ಲಿ ಧ್ವನಿ ಎತ್ತಲಿದ್ದಾರೆ. ಹೀಗೆಯೇ ಅನೇಕ ವಿಧಾನ ಪರಿಷತ್ ಸದಸ್ಯರು ಸಹ ಈ ಹೊರಾಟ ಬೆಂಬಲಿಸಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ನಾವು ಉತ್ತರ ಕರ್ನಾಟಕ ಭಾಗದಲ್ಲಿ ಜನಾಭಿಪ್ರಾಯ ಸಂಗ್ರಹಿಸಿದ್ದೇವೆ. ನ.20ರವರೆಗೆ ಒಟ್ಟು 1,48,91,346 ಜನ ಪ್ರತ್ಯೇಕ ರಾಜ್ಯದ ಪರವಾಗಿ ಲಿಖಿತವಾಗಿ ಬೆಂಬಲ ವ್ಯಕ್ತಪಡಿಸಿ ಸಹಿ ಮಾಡಿದ್ದಾರೆ. ನಮ್ಮ ಭಾಗಕ್ಕೆ ಪತ್ಯೇಕ ರಾಜ್ಯ ಕೇಳುತ್ತಿರುವುದು ರಾಜ್ಯ ವಿರೋಧಿ ಚಟುವಟಿಕೆಯಲ್ಲ. ನಮಗೆ ಆಗುತ್ತಿರುವ ಅನ್ಯಾಯದಿಂದ ಸಿಡಿದೆದ್ದು ನಾವು ಕೇಳುತ್ತಿರುವ ಹಕ್ಕು ಇದಾರೆ. ಮೊದಲು ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಅಭಿಪ್ರಾಯ ಹೊಂದಿದ್ದರು. ಈಗ ರಾಜು ಕಾಗೆ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ಪ್ರತ್ಯೇಕ ರಾಜ್ಯಕ್ಕಾಗಿ ಈ ಸಲವೂ ಅಧಿವೇಶನ ಸಮಯದಲ್ಲಿ ಹತ್ತು ದಿನ ಹೋರಾಟ ಮಾಡುತ್ತೇವೆ. ಇದಕ್ಕೆ ರೈತ ಸಂಘಟನೆ, ವಿದ್ಯಾರ್ಥಿ ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಈ ಹಿಂದೆ ಪಾದಯಾತ್ರೆ, ಬೈಕ್ ರ್‍ಯಾಲ, 2017ರಲ್ಲಿ ಉಪವಾಸ ಸತ್ಯಾಗ್ರಹಗಳನ್ನು ಮಾಡಿದ್ದೇವೆ. ಹೋರಾಟ ಮಾಡಿದಾಗೆಲ್ಲ ಅಭಿವೃದ್ಧಿಯ ಭರವಸೆ ಕೊಟ್ಟಿದ್ದರು. ಆದರೆ, ಏನೂ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಹತ್ತು ಕಚೇರಿಗಳನ್ನು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವಂತೆ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. 2019ರಲ್ಲೇ ಸ್ಥಳಾಂತರಕ್ಕೆ ಆದೇಶವಾಗಿದೆ. ಆದರೆ, ಒಂದೇ ಒಂದು ಕಚೇರಿಯೂ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರವಾಗಿಲ್ಲ. ಅಧಿಕಾರಿ ಸ್ಥಳಾಂತರ ಮಾಡದೇ ಹೋದಲ್ಲಿ ಮುಂದೆ ನಾವು ಬೆಂಗಳೂರಿನ ವಿಧಾನಸೌಧ ದ್ವಂಸಗೊಳಿಸಿದರೆ ಕಚೇರಿ ಸ್ಥಳಾಂತರ ಮಾಡಬಹುದೇನೋ? ಇಷ್ಟು ಕ್ರೂರವಾದ ಉಗ್ರ ಹೋರಾಟದ ನಿರ್ಧಾರ ಮಾಡುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಜಗಜಂಪಿ, ಅಡಿವೇಶ ಇಟಗಿ, ಅಶೋಕ ದೇಶಪಾಂಡೆ, ಪ್ರಕಾಶ ದೇಸಾಯಿ, ವೈ.ಜಿ.ಪಾಟೀಲ, ಮಹಾಂತೇಶ ಶೆಲ್ಲಿಕೇರಿ, ವಿಲೀನಕುಮಾರ ತಾರಿಹಾಳ, ಅದೃಶ್ಯ ತಡಸಲೂರ ಮುಂತಾದವರು ಇದ್ದರು.