ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಪ್ರತಿಯೊಬ್ಬರ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತುಂಬಾನೇ ಮಹತ್ವದ್ದು. ಜೀವನದ ಪ್ರಮುಖ ಮೆಟ್ಟಿಲುಗಳಲ್ಲಿ ಎಸ್ಸೆಸ್ಸೆಲ್ಸಿ ಸಹ ಪ್ರಮುಖ ಮೆಟ್ಟಿಲು. ಈ ಪರೀಕ್ಷೆಯನ್ನು ಯಶಸ್ವಿಯಾಗಿ ದಾಟಿದವರು ಉತ್ತಮ ಭವಿಷ್ಯ ಕಟ್ಟಿಕೊಳ್ಳುವುದು ನಿಶ್ಚಿತ. ಆದ್ದರಿಂದ ಪರೀಕ್ಷೆ ಬರೆಯಲು ಸಿದ್ಧರಾಗಿರುವ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಅವರೊಂದಿಗೆ ಶಾಲಾ ಶಿಕ್ಷಣ ಇಲಾಖೆಯು ಏನೆಲ್ಲಾ ಕಸರತ್ತು ನಡೆಸುತ್ತಿದೆ.2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾರ್ಚ್ 25ರಿಂದ ಶುರುವಾಗಲಿದ್ದು, ದಿನಗಣನೆ ಶುರುವಾಗಿವೆ. ಧಾರವಾಡ ಜಿಲ್ಲೆಯಿಂದ ಈ ಪರೀಕ್ಷೆ ಬರೆಯಲು 28,085 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಸಮರ್ಥವಾಗಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಅಣಿಯಾಗಿದ್ದಾರೆ. 2022-23ನೇ ಸಾಲಿಗೆ ಧಾರವಾಡ ಜಿಲ್ಲೆಯು ಶೇ. 86.09ರಷ್ಟು ಸಾಧನೆ ಮಾಡಿದ್ದು, ಈ ಬಾರಿ ಶೇ. 90ಕ್ಕಿಂತ ಹೆಚ್ಚು ಫಲಿತಾಂಶ ಸುಧಾರಣೆಗೆ ಪ್ರಯತ್ನಗಳು ನಡೆಯುತ್ತಿವೆ. ಮಕ್ಕಳ ಪ್ರಯತ್ನಕ್ಕೆ ಪೂರಕವಾಗಿ ಶಾಲಾ ಶಿಕ್ಷಣ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಏನವು ಕಾರ್ಯಕ್ರಮ?ಸಾಮಾನ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಅಲ್ಲಿ ಕಲಿಯುತ್ತಿರುವ ಮಕ್ಕಳು ಟ್ಯುಶನ್ ಹಾಗೂ ವಿಶೇಷ ತರಗತಿಗಳ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎದುರಿಸುತ್ತಾರೆ. ಆದರೆ, ಸರ್ಕಾರಿ ಶಾಲಾ ಮಕ್ಕಳಿಗೆ ಈ ಅವಕಾಶಗಳು ಕಡಿಮೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ವಿಶೇಷ ಪ್ರಯತ್ನಗಳೊಂದಿಗೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ತರಬೇತಿ ನೀಡುತ್ತಿದೆ. ಅದರಲ್ಲೂ ಧಾರವಾಡದಲ್ಲಿ ಪಾಸಿಂಗ್ ಪ್ಯಾಕೆಜ್ ಮೂಲಕ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಂಡಿದೆ. ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಶಿಕ್ಷಣಾಧಿಕಾರಿ ರವಿಕುಮಾರ ಬಾರಟಕ್ಕೆ, ಈ ಹಿಂದಿನ ವರ್ಷಗಳಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆ ಹಾಗೂ ಅಲ್ಲಿಯ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳು ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣಗೊಳ್ಳುತ್ತಿರುವ ಕಾರಣ ಈ ವಿಷಯಗಳಲ್ಲಿ ಮಕ್ಕಳ ವೈಯಕ್ತಿಕ ಕಡತ ನಿರ್ವಹಿಸಲಾಗಿದೆ ಎಂದರು.
ಪ್ರತಿ ಶಾಲೆಗಳಲ್ಲೂ ಅಭ್ಯಾಸದ ಗುಂಪು ರಚಿಸಿ ವಿಜ್ಞಾನ, ಇಂಗ್ಲಿಷ್ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗಿದೆ. ಶಾಲಾ ಅವಧಿ ಪೂರ್ವ ಹಾಗೂ ನಂತರ ಗುಂಪು ಅಧ್ಯಯನ, ಪ್ರತಿ ವಿಷಯದಲ್ಲಿ ಒಂದು ಅಂಕದ ಪ್ರಶ್ನೆ, ಉತ್ತರ ತಯಾರಿ ಮಾಡುವುದು, ಘಟಕ ಪರೀಕ್ಷೆ, ರಸ ಪ್ರಶ್ನೆ ಕಾರ್ಯಕ್ರಮ, ವ್ಯಾಕರಣ ರೂಢಿ, ಪಂದ್ಯಗಳ ಕಂಠಪಾಠ, ಗಣಿತದ ಪ್ರಮೇಯಗಳನ್ನು ಬಿಡಿಸುವುದು ಹಾಗೂ ಪರೀಕ್ಷಾ ಭಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬ್ಲಾಕ್ ಹಂತದಲ್ಲಿ ಆಯಾ ವಿಷಯ ತಜ್ಞರಿಂದ ಪಾಠ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಲ್ಲಿನ ತಜ್ಞರನ್ನು ಕರೆಯಿಸಿ ಕಾರ್ಯಾಗಾರ ಮಾಡಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಾಸಿಂಗ್ ಪ್ಯಾಕೆಜ್ ಪುಸ್ತಕದ ಮೂಲಕ ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಲಾಗಿದೆ. ವಿಜ್ಞಾನ ಹಾಗೂ ಗಣಿತದ ರೇಖೆಗಳನ್ನು ಸರಳವಾಗಿ ಬಿಡಿಸಲು ಅನುಕೂಲವಾಗಲು ಚಿತ್ರಕಲಾ ಕಲಾವಿದರ ಮೂಲಕ ವಿಡಿಯೋ ಮಾಡಿ ಮಕ್ಕಳಿಗೆ ನೀಡಲಾಗಿದೆ. ಮಕ್ಕಳಿಗೆ ವಾರ್ಷಿಕ ಪರೀಕ್ಷೆಯ ರೂಢಿ ಪರೀಕ್ಷೆ ಮಾಡಿಸಲಾಗಿದೆ. ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಅಂತಹ ವಿವಿಧ ಸಂಸ್ಥೆಗಳ ಜತೆಗೂಡಿ ಪ್ರೇರಣಾ ಕಾರ್ಯಾಗಾರ, ಫೋನ್ ಇನ್ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಶೇ. 90ರಷ್ಟು ಫಲಿತಾಂಶದ ನಿರೀಕ್ಷೆ
ಧಾರವಾಡ ಜಿಲ್ಲೆಯು ಈ ಸಾಲಿನ ಎಸ್ಸೆಸ್ಲೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ. ಪಾಲಕರು, ಶಿಕ್ಷಕರು, ಇಲಾಖೆ ಅಧಿಕಾರಿಗಳು ಮಕ್ಕಳ ಓದಿನೊಂದಿಗೆ ಪೂರಕವಾಗಿ ಕಾರ್ಯ ಮಾಡಿದ್ದು, ಶೇ. 90ರಷ್ಟು ಫಲಿತಾಂಶದ ನಿರೀಕ್ಷೆ ಇದೆ ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ತಿಳಿಸಿದ್ದಾರೆ.ನಕಲು ಮುಕ್ತ ಪರೀಕ್ಷೆ
ಧಾರವಾಡ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಒಟ್ಟು 101 ಕೇಂದ್ರಗಳಲ್ಲಿ ನಡೆಯಲಿದೆ. ಹುಬ್ಬಳ್ಳಿ ಶಹರದಲ್ಲಿ 34, ಧಾರವಾಡ ಶಹರದಲ್ಲಿ 16, ಧಾರವಾಡ ಗ್ರಾಮೀಣದಲ್ಲಿ 14, ಹುಬ್ಬಳ್ಳಿ ಗ್ರಾಮೀಣದಲ್ಲಿ 13, ಕಲಘಟಗಿಯಲ್ಲಿ ಎಂಟು, ಕುಂದಗೋಳದಲ್ಲಿ ಏಳು ಹಾಗೂ ನವಲಗುಂದದ ಒಂಭತ್ತು ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಎಲ್ಲ ಕೇಂದ್ರಗಳಲ್ಲೂ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಹಾಕಲಾಗಿದ್ದು, ಕಟ್ಟುನಿಟ್ಟಿನಿಂದ ನಕಲು ಮುಕ್ತ ಪರೀಕ್ಷೆ ನಡೆಸಲು ಇಲಾಖೆ ಕ್ರಮ ಕೈಗೊಂಡಿದೆ. ಮಕ್ಕಳು ಯಾವುದೇ ಕಾರಣಕ್ಕೂ ನಕಲು ಮಾಡುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದ್ದು ಪಾಲಕರಿಗೂ ಈ ಬಗ್ಗೆ ತಿಳಿವಳಿಕೆ ನೀಡಲಾಗಿದೆ. 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿಮಾರ್ಚ್ 25 - ಪ್ರಥಮ ಭಾಷೆ
ಮಾರ್ಚ್ 27 - ವಿಜ್ಞಾನಮಾರ್ಚ 30 - ಸಮಾಜ ವಿಜ್ಞಾನ
ಏಪ್ರಿಲ್ 2- ಗಣಿತಏಪ್ರಿಲ್ - 4 ತೃತೀಯ ಭಾಷೆ
ಏಪ್ರಿಲ್ -6 ದ್ವಿತೀಯ ಭಾಷೆಇಂದು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಕಾರ್ಯಾಗಾರಧಾರವಾಡ - ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್, ಗುರುದೇವ ಪದವಿ ಪೂರ್ವ ಕಾಲೇಜು, ಶಾಲಾ ಶಿಕ್ಷಣ ಇಲಾಖೆ ಜೊತೆಗೂಡಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಫೆ. 19ರ ಬೆಳಿಗ್ಗೆ 10ಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಸಂಭ್ರಮ ಪ್ರೇರಣಾ ಕಾರ್ಯಾಗಾರ ಆಯೋಜಿಸಿದೆ. ಜಿಲ್ಲಾಧಿಕಾರಿ ದಿವ್ಯಪ್ರಭು ಉದ್ಘಾಟನೆ ನೆರವೇರಿಸಲಿದ್ದು, ಡಿಡಿಪಿಐ ಎಸ್.ಎಸ್. ಕೆಳದಿಮಠ ಅಧ್ಯಕ್ಷತೆ ವಹಿಸುತ್ತಾರೆ. ಅತಿಥಿಗಳಾಗಿ ಶಂಕರ ಹಲಗತ್ತಿ, ಎಸ್.ಎಂ. ಹುಡೇದಮನಿ, ಅಶೋಕ ಸಿಂಧಗಿ ಭಾಗವಹಿಸುತ್ತಾರೆ. ನಂತರ ಮನೋರೋಗ ತಜ್ಞ ಡಾ. ಆದಿತ್ಯ ಪಾಂಡುರಂಗಿ ಹಾಗೂ ಗುರುದೇವ ಪಿಯು ಕಾಲೇಜಿನ ಉಪ ಪ್ರಾಚಾರ್ಯ ಮಹಾಲಿಂಗ ಕಮತಗಿ ಉಪನ್ಯಾಸ ನೀಡಲಿದ್ದಾರೆ.