ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿಗೆ ಹಾವೇರಿ ಜಿಲ್ಲೆಯ ರೈತರಿಗೆ ₹28.84 ಕೋಟಿ ಬೆಳೆಹಾನಿ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಹಾವೇರಿ: ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿಗೆ ಜಿಲ್ಲೆಯ ರೈತರಿಗೆ ₹28.84 ಕೋಟಿ ಬೆಳೆಹಾನಿ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 16,801 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಎಸ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಈಗಾಗಲೇ 33,726 ರೈತರಿಗೆ ₹14.66 ಕೋಟಿ ಡಿಬಿಟಿ ಮೂಲಕ ಜಮೆ ಮಾಡಲಾಗಿತ್ತು. ಇಂದು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರಿಗೆ ₹8,500ರಂತೆ ಜಿಲ್ಲೆಯ 33,725 ರೈತರ ಖಾತೆಗೆ ₹14.18 ಕೋಟಿ ಬೆಳೆಹಾನಿ ಪರಿಹಾರ ಜಮೆಗೆ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.ಮಳೆಯಾಶ್ರಿತ, ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿ ಜಂಟಿ ಸಮೀಕ್ಷೆಯನ್ನು ಜಿಲ್ಲಾಡಳಿತ ಅತ್ಯಂತ ಮುತುವರ್ಜಿಯಿಂದ ಮಾಡಿದ್ದು, ಜಿಲ್ಲೆಯ ರೈತರಿಗೆ ಸೂಕ್ತ ಪರಿಹಾರ ಕೊಡಿಸಲು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಎಸ್‌ಡಿಆರ್‌ಎಫ್ ಹೊರತಾಗಿ ಪ್ರತಿ ಹೆಕ್ಟೇರ್‌ಗೆ ₹8,500ರಂತೆ ಹೆಚ್ಚುವರಿಯಾಗಿ ಪರಿಹಾರ ನೀಡಿದ್ದು, ರಾಜ್ಯದ 27 ಜಿಲ್ಲೆಗಳಿಗೆ ₹1,033 ಕೋಟಿ ಬೆಳೆಹಾನಿ ಪರಿಹಾರ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.ಮೆಕ್ಕೆಜೋಳ ಬೆಂಬಲ ನಿಗದಿ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ಮೆಕ್ಕೆಜೋಳ, ಕಬ್ಬು ಹಾಗೂ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಬೆಂಬಲ ಬೆಲೆ ನಿಗದಿಪಡಿಸಿರುವುದು ಕೇಂದ್ರ ಸರ್ಕಾರದ ಕೆಲಸವಾಗಿದೆ, ಅದನ್ನು ಕಾಲಕಾಲಕ್ಕೆ ಅವರು ಮಾಡಬೇಕು ಹಾಗೂ ಅವರು ಹೇಳಿದ ಕೆಲಸ ಮಾಡಲು ನಾವು ತಯಾರಿದ್ದೇವೆ. ರೈತರ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಇದ್ದರು.ಸಿಎಂ ಹುದ್ದೆ ಗೊಂದಲ ಎರಡು ದಿನಗಳಲ್ಲಿ ಎಲ್ಲವೂ ಬಗೆಹರಿಯುತ್ತದೆ:
ಮುಖ್ಯಮಂತ್ರಿ ಹುದ್ದೆ ಬಗ್ಗೆ ನಮ್ಮ ನಾಯಕರು ಒಮ್ಮತದಿಂದ ರಾಜಕೀಯ ನಿರ್ಣಯ ಮಾಡುತ್ತಾರೆ. ಇನ್ನು ಎರಡು ದಿನಗಳಲ್ಲಿ ಎಲ್ಲವೂ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಪಕ್ಷ ಬಹಳ ಅವಶ್ಯ, ವ್ಯಕ್ತಿಯಲ್ಲ. ಪಕ್ಷ ಉಳಿದರೆ ವ್ಯಕ್ತಿ ಉಳಿಯುತ್ತಾನೆ. ಪಕ್ಷದಲ್ಲಿ ಪ್ರತಿ ವ್ಯಕ್ತಿಗೂ ಸಾಮರ್ಥ್ಯ ಇರುತ್ತದೆ. ಅದನ್ನು ನಾನು ಇಲ್ಲ ಅಂತೇಳಲ್ಲ. ಪಕ್ಷದಲ್ಲಿ ಎಲ್ಲರೂ ದುಡಿದ್ದಾರೆ. ಅವರಿಗೂ ಸಾಮರ್ಥ್ಯವಿದೆ. ಪರಮೇಶ್ವರ ಅವರು ದುಡಿದಿದ್ದಾರೆ, ಅವರಿಗೂ ಆದ್ಯತೆಯಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ಹಿಂದೆ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ತಪ್ಪಿಹೋಗಿದೆ. ಅಧಿಕಾರದಲ್ಲಿ ಇರೋದು ಬಹಳ ಮುಖ್ಯವಲ್ಲ. ಇದ್ದಾಗ ಏನು ಮಾಡ್ತೀವಿ ಅನ್ನೋದು ಬಹಳ ಮುಖ್ಯ. ಪಕ್ಷದಲ್ಲಿ ಯಾರು ಅರ್ಹರಿದ್ದಾರೆಯೋ ಅವರಿಗೆಲ್ಲ ಅಧಿಕಾರ ಕೊಡಬೇಕು. ಸಂದರ್ಭ ಬಂದಾಗ ಹೈಕಮಾಂಡ್ ಕೊಟ್ಟೆ ಕೊಡುತ್ತದೆ ಎಂದರು.ಎಚ್.ಡಿ. ದೇವೇಗೌಡ್ರ ಅವರು ಆಸೆ ಪಟ್ಟಿರಲಿಲ್ಲ, ಆದರೆ ಪ್ರಧಾನಮಂತ್ರಿಯಾದರು. ಡಿ.ಕೆ. ಶಿವಕುಮಾರ ಅವರಿಗೂ ಅಧಿಕಾರ ಸಿಗಲಿ ಎಂದು ನೀವು ಹಾರೈಸಿ, ನಾನು ಹಾರೈಸ್ತೀನಿ. ಸ್ವಾಮೀಜಿಗಳು ಆಶೀರ್ವಾದ ಮಾಡಬೇಕು ಅಥವಾ ಹಾರೈಸಬೇಕು. ಹಾರೈಸಿದರೆ ಅದನ್ನು ನಾನು ತಪ್ಪು ಅಂತೇಳಲ್ಲ. ಸ್ವಾಮೀಜಿಗಳು ರಾಜಕಾರಣದಿಂದ ದೂರ ಇದ್ದರೆ ಬಹಳ ಒಳ್ಳೆಯದು ಎಂದರು.ಸಚಿವ ಸ್ಥಾನದ ಬಗ್ಗೆ ಎಲ್ಲರಿಗೂ ಆಸೆ ಇರುತ್ತದೆ. ನಮ್ಮಲ್ಲಿ ಯಾವುದೇ ರೀತಿಯ ಬಣವಿಲ್ಲ. ನಾವೆಲ್ಲ 140 ಶಾಸಕರು ಒಂದೇ ಇದ್ದೇವೆ. ಪಕ್ಷದಲ್ಲಿ ಕುದುರೆ ವ್ಯಾಪಾರ ನಡೆದಿದ್ದರೆ ನೀವು ತೋರಿಸಿ ಎಂದರು.