ಆನ್‌ಲೈನ್ ಗೇಮಿಂಗ್‌ಗೆ ಶೇ.28 ಜಿಎಸ್ಟಿ: ಸರ್ಕಾರದಿಂದ ಸುಗ್ರೀವಾಜ್ಞೆ
KannadaprabhaNewsNetwork | Published : Oct 04 2023, 01:00 PM IST
ಆನ್‌ಲೈನ್ ಗೇಮಿಂಗ್‌ಗೆ ಶೇ.28 ಜಿಎಸ್ಟಿ: ಸರ್ಕಾರದಿಂದ ಸುಗ್ರೀವಾಜ್ಞೆ
ಸಾರಾಂಶ
gst, karnataka, ordinance, online game
ಅ.1ರಿಂದ ಹೊಸ ಜಿಎಸ್ಟಿ ದರ ಜಾರಿ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಜಾರಿ ಕನ್ನಡಪ್ರಭ ವಾರ್ತೆ, ಬೆಂಗಳೂರು ಕೇಂದ್ರ ಜಿಎಸ್ಟಿ ಕೌನ್ಸಿಲ್ ಸೂಚನೆಯಂತೆ ರಾಜ್ಯದಲ್ಲೂ ಆನ್ಲೈನ್ ಗೇಮ್ ಹಾಗೂ ಕ್ಯಾಸಿನೋಗಳಿಗೆ ಅ.1 ರಿಂದ ಅನ್ವಯವಾಗುವಂತೆ ಶೇ.28 ರಷ್ಟು ಜಿಎಸ್ಟಿ ವಿಧಿಸಿ ಕರ್ನಾಟಕ ಸರಕು ಮತ್ತು ಸೇವೆಗಳ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಸೆ.27 ರಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಂಗೀಕಾರ ನೀಡಿದ್ದು, ಶುಕ್ರವಾರ ರಾಜ್ಯಪತ್ರ ಪ್ರಕಟಗೊಂಡಿದೆ. ಸುಗ್ರೀವಾಜ್ಞೆ ಮೂಲಕ ತಂದಿರುವ ಜಿಎಸ್ಟಿ ತಿದ್ದುಪಡಿ ಕಾಯ್ದೆ ಅನ್ವಯ, "ಆನ್‌ಲೈನ್ ಗೇಮ್, ಆನ್‌ಲೈನ್ ಮನಿ ಗೇಮ್, ಬೆಟ್ಟಿಂಗ್, ಕ್ಯಾಸಿನೋಗಳು, ಜೂಜು, ಕುದುರೆ ರೇಸಿಂಗ್, ಲಾಟರಿ " ಸೇರಿ ಎಲ್ಲಾ ರೀತಿಯ ಆನ್‌ಲೈನ್ ಗೇಮ್‌ಗಳ ಆದಾಯದ ಮೇಲೆ ಶೇ.28 ರಷ್ಟು ಜಿಎಸ್ಟಿ ವಿಧಿಸಲಾಗಿದೆ. ಇದು ಅ. 1ರಿಂದಲೇ ರಾಜ್ಯದಲ್ಲಿ ಜಾರಿಯಾಗಲಿದೆ. ಆನ್‌ಲೈನ್ ಆಟಗಳ ಮೇಲೆ ತೆರಿಗೆ ವಿಧಿಸುವುದು ಈ ವ್ಯವಹಾರಗಳನ್ನು ಕ್ರಮಬದ್ಧಗೊಳಿಸುವುದಿಲ್ಲ. ಜತೆಗೆ ಇದರಡಿ ಎಸಗಲಾದ ಯಾವುದೇ ಅಪರಾಧವು ಕ್ರಿಮಿನಲ್ ಕ್ರಮದಿಂದ ವಿನಾಯಿತಿ ಹೊಂದಿರುವುದಿಲ್ಲ ಎಂದು ರಾಜ್ಯಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಸುಗ್ರೀವಾಜ್ಞೆ ಯಾಕೆ? 2023ರ ಆ.2 ರಂದು ಜಿಎಸ್ಟಿ ಕೌನ್ಸಿಲ್ ಶಿಫಾರಸು ಮಾಡಿ ಎಲ್ಲಾ ರಾಜ್ಯಗಳು ಆನ್‌ಲೈನ್ ಗೇಮ್‌ಗಳ ಮೇಲೆ ಶೇ.28 ರಷ್ಟು ಜಿಎಸ್ಟಿ ವಿಧಿಸಲು ಸೂಚಿಸಿತ್ತು. ಜತೆಗೆ ಅ.1 ರಿಂದ ಜಾರಿಯಾಗುವಂತೆ ಹೇಳಿತ್ತು. ಈ ತಿದ್ದುಪಡಿ ಜಾರಿಗೆ ತರಲು ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ ಇಲ್ಲ. ಹೀಗಾಗಿ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯದೆ ತಿದ್ದುಪಡಿ ಮಾಡುವ ಅವಶ್ಯಕತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿ ಮಾಡಲಾಗಿದೆ. 1,500 ಕೋಟಿ ರು. ಹೆಚ್ಚುವರಿ ಆದಾಯ ನಿರೀಕ್ಷೆ: ಆನ್‌ಲೈನ್ ಗೇಮ್ ಗಳ ಮೇಲೆ ಶೇ.18 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿತ್ತು. ಈ ಪ್ರಮಾಣ ಶೇ.28ಕ್ಕೆ ಏರಿಕೆಯಾಗುವುದರಿಂದ, ಬೆಟ್ಟಿಂಗ್‌ನ ಪೂರ್ಣ ಮೊತ್ತದ ಮೇಲೆ ತೆರಿಗೆ ಜಾರಿಯಾಗುವುದರಿಂದ ಹಾಗೂ ಅ.1 ರಿಂದಲೇ ಅನ್ವಯವಾಗುವುದರಿಂದ ಪ್ರಸಕ್ತ ವರ್ಷದಲ್ಲಿ ರಾಜ್ಯದ ವಾಣಿಜ್ಯ ತೆರಿಗೆ ಆದಾಯ 1,500 ಕೋಟಿ ರು.ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಾಣಿಜ್ಯ ತೆರಿಗೆಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.