ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಅವಶ್ಯಕತೆ ಅರಿತು ಮಂಡ್ಯದ ವಿ.ಸಿ.ಫಾರಂನಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಸ್ಥಾಪನೆಗೆ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಅಧ್ಯಕ್ಷತೆಯಲ್ಲಿ ಆರು ಮಂದಿ ತಜ್ಞರ ತಂಡ ೧೩೦ ಪುಟಗಳ ಸಮಗ್ರ ವರದಿಯನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ನೀಡಿದೆ.೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಿದ್ದರ ಮೇರೆಗೆ ಮಾ.೧೫ರಂದು ತಜ್ಞರ ಸಮಿತಿ ರಚಿಸಲಾಗಿತ್ತು. ಐದು ತಿಂಗಳ ಕಾಲ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಕುರಿತಂತೆ ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಿದೆ.
ಸಮಿತಿಯ ಶಿಫಾರಸುಗಳು:ರಾಜ್ಯ ಸರ್ಕಾರ ಭವಿಷ್ಯದಲ್ಲಿ ಯಾವುದೇ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಯೋಚಿಸಿದರೆ ವಿಷಯವಾರು ವಿಶೇಷತೆಗಿಂತ ಸಮಗ್ರ ವಿಶ್ವ ವಿದ್ಯಾನಿಲಯಗಳ ಸ್ಥಾಪನೆಗೆ ಶಿಫಾರಸು ಮಾಡುತ್ತದೆ.
ನೂತನವಾಗಿ ಸ್ಥಾಪನೆಯಾಗಲಿರುವ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿದ್ಯಾಲಯ ವ್ಯಾಪ್ತಿಗೆ ಮಂಡ್ಯ, ಮೈಸೂರು, ಕೊಡಗು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಪಡಿಸುವುದು. ಬೆಂಗಳೂರು ಕೃಷಿ ವಿವಿ, ಬಾಗಲಕೋಟೆ ತೋಟಗಾರಿಕೆ ವಿವಿ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಿಂದಲೂ ಕೆಲವೊಂದು ಸಂಸ್ಥೆಗಳನ್ನು ವಿಲೀನಗೊಳಿಸುವಂತೆ ಶಿಫಾರಸು ಮಾಡಲಾಗಿದೆ.ನೂತನ ವಿವಿ ಸ್ಥಾಪನೆಗೆ ಈಗಾಗಲೇ ಲಭ್ಯವಿರುವ ಸೌಕರ್ಯಗಳೊಂದಿಗೆ ಅಗತ್ಯವಿರುವ ಮೂಲ ಸೌಕರ್ಯ, ಚರಾಸ್ಥಿ, ಮಾನವ ಸಂಪನ್ಮೂಲಗಳು, ಆಯವ್ಯಯವನ್ನು ಪೂರೈಸುವುದು.
ಮೈಸೂರು ಕಂದಾಯ ವಿಭಾಗದಲ್ಲಿ ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಫಾರ್ಮ (ವಿ.ಸಿ. ಫಾರ್ಮ) ಪ್ರಸ್ತಾಪಿತ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಾರಂಭಿಸುವ ಸಂದರ್ಭದಲ್ಲಿಯೇ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದಿಂದ ಮಂಡ್ಯ ನೂತನ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲು ಪ್ರಸ್ತಾಪಿಸಿದ ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಆರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಲಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವನ್ನೂ ಸಹ ಶಿವಮೊಗ್ಗ ಹಾಗೂ ಮಂಡ್ಯದ ಮಾದರಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸಲು ಸಮಿತಿಯ ಶಿಫಾರಸು ಮಾಡುತ್ತದೆ.ಸಮಿತಿಯ ಸಲಹೆಗಳು:
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್‌ನ್ನು ರಾಜ್ಯವ್ಯಾಪಿ ವಿಶ್ವವಿದ್ಯಾಲಯವಾಗಿ ಮುಂದುವರೆಸುವುದು. ರಾಯಚೂರುಉ, ಧಾರವಾಡ ಕೃಷಿ ವಿವಿ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸೂಕ್ತ ಜಿಲ್ಲೆಗಳ ವ್ಯಾಪ್ತಿಯನ್ನು ನಿಗದಿಪಡಿಸಿ ಸಮಗ್ರವಾಗಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಗಳನ್ನಾಗಿ ಪರಿವರ್ತಿಸಬಹುದೆಂಬುದು ಸಮಿತಿಯ ಅಭಿಪ್ರಾಯವಾಗಿದೆ.ಸಮಗ್ರ ಕೃಷಿ ವಿವಿ ಸ್ಥಾಪನೆ ಅವಶ್ಯಕತೆ
ರಾಜ್ಯದಲ್ಲಿ ಶೇ.೮೫ರಷ್ಟು ಭೂ ಹಿಡುವಳಿದಾರರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸಮಗ್ರ ಕೃಷಿ ಪದ್ಧತಿ ಅಳವಡಿಸುವುದು ಅವಶ್ಯಕವಾಗಿದೆ. ಸಮಗ್ರ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಯಿಂದ ರೈತರ ಅನೇಕ ಸಮಸ್ಯೆಗಳಿಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಒಂದೇ ಮೂಲದಿಂದ ಪರಿಹಾರ ದೊರಕಿದಂತಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ರಾಷ್ಟ್ರದಲ್ಲಿ ಯಾವುದೇ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವಾಗ ವಿಶೇಷವಾಗಿ ವೃತ್ತಿಪರ ವಿದ್ಯಾಲಯಗಳಲ್ಲಿ ಒಂದಾದ ಕೃಷಿ ವಿಶ್ವವಿದ್ಯಾಲಯಗಳನ್ನು ಸಮಗ್ರ ಕೃಷಿ ವಿಶ್ವ ವಿದ್ಯಾಲಯಗಳಾಗಿ ರಚಿಸುವಂತೆ ಶಿಫಾರಸು ಮಾಡಿರುವುದಾಗಿ ಸಮಿತಿ ತಿಳಿಸಿದೆ.ಉತ್ತರಕ್ಕೆ ಸೀಮಿತರಾಜ್ಯದಲ್ಲಿ ೨೦೦೪ಕ್ಕೂ ಪೂರ್ವದಲ್ಲಿ ಕೃಷಿ, ತೋಟಗಾರಿಕೆ ಮತ್ತು ಪಶು ವೈದ್ಯಕೀಯ ವಿಶ್ವವಿದ್ಯಾಲಯಗಳು ಉತ್ತರದಲ್ಲಿ ಧಾರವಾಡ ಹಾಗೂ ದಕ್ಷಿಣದಲ್ಲಿ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದ್ದವು. ನಂತರ ರಾಯಚೂರಿನಲ್ಲಿ ಕೃಷಿ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಬೀದರ್‌ನಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದ್ದವು.ಮೈಸೂರಿಗೂ ನ್ಯಾಯ
ರಾಜ್ಯವು ಬೆಂಗಳೂರು. ಬೆಳಗಾವಿ, ಕಲಬುರಗಿ, ಮೈಸೂರು ಸೇರಿದಂತೆ ನಾಲ್ಕು ಕಂದಾಯ ವಿಭಾಗಗಳಿವೆ. ಇದರಲ್ಲಿ ಮೈಸೂರು ಕಂದಾಯ ವಿಭಾಗವನ್ನು ಹೊರತುಪಡಿಸಿ ಉಳಿದ ಎಲ್ಲಾ ಕಂದಾಯ ವಿಭಾಗಗಳಲ್ಲೂ ಒಂದಕ್ಕಿಂತ ಹೆಚ್ಚು ಕೃಷಿ ಮತ್ತು ತೋಟಗಾರಿಕೆ, ಪಶು ವೈದ್ಯಕೀಯ ವಿಶ್ವವಿದ್ಯಾನಿಲಯವಿರುತ್ತದೆ. ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಯಾವುದೇ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದಿಲ್ಲ. ಮೈಸೂರು ಕಂದಾಯ ವಿಭಾಗದಲ್ಲಿ ಪ್ರತ್ಯೇಕ ವಿಶ್ವ ವಿದ್ಯಾಲಯವನ್ನು ಸ್ಥಾಪಿಸುವುದರಿಂದ ರಾಜ್ಯಾದ್ಯಂತ ಸಮಾನತೆಯನ್ನು ಸಾಧಿಸಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.ಸಮಗ್ರ ವಿವಿ ಸ್ಥಾಪನೆಗೆ ೨೮೫ ಕೋಟಿ ರು. ಅನುದಾನಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಸ್ಥಾಪನೆಗೆ ೨೮೫ ಕೋಟಿ ರು. ಅನುದಾನದ ಅವಶ್ಯಕತೆ ಇರುವುದಾಗಿ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಮಂಡ್ಯ ವಿ.ಸಿ.ಫಾರಂನಲ್ಲಿರುವ ಕಟ್ಟಡಗಳ ಜೊತೆಗೆ ಹೊಸದಾಗಿ ಆಡಳಿತಾತ್ಮಕ ಮುಖ್ಯ ಕಟ್ಟಡ, ಟೆಕ್ನಾಲಜಿ ಹಬ್, ವಸತಿಗೃಹಗಳು, ತರಗತಿ ಕೊಠಡಿಗಳು, ಪ್ರಯೋಗಾಲಯ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಅಂದಾಜು ೧೬೨ ಕೋಟಿ ರು. ಅಗತ್ಯವಿದೆ. ಗಣಕಯಂತ್ರ, ಪ್ರಯೋಗಾಲಯಗಳು, ಉಪಕರಣಗಳು, ಪೀಠೋಪಕರಣಗಳು, ವಾಹನ ಖರೀದಿಗೆ ೪೫ ಕೋಟಿ ರು. ಸೇರಿ ೨೮೫ ಕೋಟಿ ರು. ಅಗತ್ಯವಿದೆ ಎಂದು ತಿಳಿಸಿದ್ದಾರೆ.ಕೃಷಿ ಪದವಿ ಪ್ರವೇಶಕ್ಕೆ ೧ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು...!
ರಾಜ್ಯದಲ್ಲಿ ಒಟ್ಟು ಆರು ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಿದ್ದು ಅವುಗಳಡಿ ೩೯ ಕೃಷಿ, ತೋಟಗಾರಿಕೆ, ಹಾಗೂ ಪಶುವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಮಹಾ ವಿದ್ಯಾಲಯಗಳು ಸೇರಿ ರಾಜ್ಯದಲ್ಲಿ ಒಟ್ಟು ವಿವಿಧ ಸ್ನಾತಕ ಪದವಿಗಳಿಗೆ ೪ ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ೨೦೧೩ರಿಂದ ಕೃಷಿ ಹಾಗೂ ಕೃಷಿ ಸಂಬಂಧಿತ ಸ್ನಾತಕ ಪದವಿಗಳ ಪ್ರವೇಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರಾರಂಭಿಸಿದ ಅವಧಿಯಿಂದ ಪ್ರತಿ ವರ್ಷ ಕೃಷಿ ಮತ್ತು ಕೃಷಿ ಸಂಬಂಧಿತ ಪದವಿಗಳಿಗೆ ಪ್ರವೇಶ ಪಡೆಯಲು ಬಯಸುವ ಸಂಖ್ಯೆಗೆ ಅನುಗುಣವಾಗಿ ಹೆಚ್ಚಾಗುತ್ತಿದ್ದು, ಪ್ರಸ್ತುತ ಸಾಲುಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾಕಾಂಕ್ಷಿಗಳಾಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು ರಾಜ್ಯದ ಸಾರ್ವಜನಿಕ ವಲಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬಹುದು.