ಸಾರಾಂಶ
ಶರಣು ಸೊಲಗಿ
ಕನ್ನಡಪ್ರಭ ವಾರ್ತೆ ಮುಂಡರಗಿಮುಂಡರಗಿ ಮತಕ್ಷೇತ್ರ ರದ್ದಾದಾಗಿನಿಂದ ಈ ಭಾಗದ ಅನೇಕ ಜನಪರ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಸಿಂಗಟಾಲೂರು ಏತ ನೀರಾವರಿ, ಜಾಲವಾಡಗಿ ಏತ ನೀರಾವರಿ ಸೇರಿದಂತೆ ಪ್ರಮುಖ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ಫೆ.16ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ತಾಲೂಕಿಗೆ ವಿಶೇಷ ಕೊಡುಗೆಯ ನಿರೀಕ್ಷೆಯಲ್ಲಿದ್ದಾರೆ ಜನತೆ.
ಜಾಲವಾಡಗಿ ಏತ ನೀರಾವರಿ ಯೋಜನೆ ಮೂಲಕ ಶಿರಹಟ್ಟಿ, ರೋಣ ಹಾಗೂ ಗದಗ ವಿಧಾನಸಭೆ ಮತಕ್ಷೇತ್ರಗಳ 29 ಕೆರೆಗಳಿಗೆ ಹಾಗೂ ಎರಡು ಸಿರೇಜ್ ಅಫ್ ಚೆಕ್ ಡ್ಯಾಂ ಗಳಿಗೆ ನೀರು ತುಂಬಿಸುವ 197.5 ಕೋಟಿ ರು.ಗಳ ಈ ಯೋಜನೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣಕಾಸಿನ ಮಂಜೂರಾತಿಗಾಗಿ ಕೊನೆಯ ಹಂತಕ್ಕೆ ಬಂದು ನಿಂತಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಬರುವ ಬಜೆಟ್‌ನಲ್ಲಿ ಇದಕ್ಕೆ ₹197.50 ಕೋಟಿ ಕಾಯ್ದಿರಿಸುವ ಮೂಲಕ ಈ ಮೂರು ಕ್ಷೇತ್ರದ ರೈತರು ನೀರಾವರಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು.ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಈಗಾಗಲೇ ಸರ್ಕಾರ ಸಾವಿರಾರು ಕೋಟಿ ರು.ಗಳನ್ನು ಖರ್ಚು ಮಾಡಿದ್ದು, ಸಂಪೂರ್ಣವಾಗಿ ನೀರು ನಿಲ್ಲಿಸುವವರೆಗೂ ಈ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಆದರೆ ನೀರು ನಿಲ್ಲಿಸಬೇಕಾದರೆ ಹಿನ್ನೀರಿನಿಂದ ಮುಳುಗಡೆ ಆಗುತ್ತಿರುವ ತಾಲೂಕಿನ ಬಿದರಹಳ್ಳಿ, ವಿಠಲಾಪೂರ ಮತ್ತು ಗುಮ್ಮಗೋಳ ಗ್ರಾಮಗಳು ಸ್ಥಳಾಂತರ ಅವಶ್ಯವಾಗಿದ್ದು, ಸ್ಥಳಾಂತರಕ್ಕಾಗಿ ಬಿದರಹಳ್ಳಿ ಹಾಗೂ ಗುಮ್ಮಗೋಳ ಗ್ರಾಮಕ್ಕೆ ಪರಿಹಾರ ನೀಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಬಿದರಹಳ್ಳಿ ಗ್ರಾಮದಲ್ಲಿ ಹೆಚ್ಚಿನ ಕುಟುಂಬಗಳು ಸ್ಥಳಾಂತರವಾಗಿದ್ದು, ಗುಮ್ಮಗೋಳದಲ್ಲಿ ಮಾತ್ರ ಇನ್ನೂ ಆಗಿಲ್ಲ. ಈ ಬಗ್ಗೆ ಕೇಳಿದರೆ ನಮಗೆ 2010ರಲ್ಲಿ ಪರಿಹಾರ ನೀಡಿದ್ದು, 2016-17ರಲ್ಲಿ ನಿವೇಶನ ನೀಡಿದ್ದಾರೆ. ಈಗ ನಮ್ಮಲ್ಲಿ ಹಣ ಇಲ್ಲ, ಎಲ್ಲ ಖರ್ಚಾಗಿದೆ ಎನ್ನುತ್ತಿದ್ದಾರೆ. ಆದ್ದರಿಂದ ಸರ್ಕಾರ ಎರಡೂ ಗ್ರಾಮಗಳಿಗೆ ಬೇಕಾಗುವಷ್ಟು ಮನೆಗಳನ್ನು ವಿಶೇಷ ಯೋಜನೆಯಲ್ಲಿ ಮಂಜೂರು ಮಾಡಿಸಲು ಬಜೆಟ್‌ನಲ್ಲಿ ಹಣವನ್ನು ಮೀಸಲಿಡಬೇಕು.ತಾಲೂಕಿನ ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನದ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನವಿಲುಗಳಿರುವುದರಿಂದ ಇಲ್ಲೊಂದು ನವಿಲು ಧಾಮಕ್ಕಾಗಿ ಹಾಗೂ ಉತ್ತರ ಕರ್ನಾಟದಲ್ಲಿ ಇದೊಂದು ಐತಿಹಾಸಿಕ ಸ್ಥಳವಾಗಿರುವುದರಿಂದ ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಯೋಜನೆಯೊಂದನ್ನು ರೂಪಿಸುವುದಕ್ಕಾಗಿ ಹಣವನ್ನು ಕಾಯ್ದಿರಿಸಬೇಕು. ಅಲ್ಲದೇ ಗುಮ್ಮಗೋಳ ಗೋಣಿ ಬಸವೇಶ್ವರ ದೇವಸ್ಥಾನ ಸಿಂಗಟಾಲೂರು ಯೋಜನೆಯಿಂದ ಮುಳುಗಡೆಯಾಗಲಿದ್ದು, ಕೂಡಲ ಸಂಗಮ ಮಾದರಿಯಲ್ಲಿ ಸಂರಕ್ಷಿಸಬೇಕು.ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡವನ್ನು ಈಗಾಗಲೇ ಸರ್ಕಾರ ವನ್ಯಜೀವಿ ಧಾಮ ಎಂದು ಘೋಷಣೆ ಮಾಡಿದ್ದು, ಇಲ್ಲಿರುವ ನೂರಾರು ಔಷಧಿ ಸಸ್ಯಗಳನ್ನು ಹಾಗೂ ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸುವುದರ ಜೊತೆಗೆ ಸರ್ಕಾರ ಇಲ್ಲೊಂದು ಆಯುರ್ವೇದ ವಿಶ್ವವಿದ್ಯಾಲಯ ಮಾಡುವ ಮೂಲಕ ನಮ್ಮ ದೇಶಿ ವನಸ್ಪತಿಗೆ ಮರು ಜೀವ ನೀಡಬೇಕು. ಮುಂಡರಗಿ ತಾಲೂಕಿನಲ್ಲಿ ಪ್ರತಿ 5 ಕಿ.ಮೀಟರ್‌ಗೆ ಒಂದರಂತೆ ಸುಮಾರು 18ರಿಂದ 20 ಸರ್ಕಾರಿ ಪ್ರೌಢಶಾಲೆಗಳಿದ್ದು, ತಾಲೂಕು ಕೇಂದ್ರವಾಗಿರುವ ಮುಂಡರಗಿ ಪಟ್ಟಣದಲ್ಲಿ ಒಂದೇ ಒಂದು ಸರ್ಕಾರಿ ಪ್ರೌಢಶಾಲೆ ಇಲ್ಲ. ಹೀಗಾಗಿ ಪಟ್ಟಣದ ವಿದ್ಯಾರ್ಥಿಗಳು ಪಕ್ಕದ ಗ್ರಾಮೀಣ ಪ್ರದೇಶವಾಗಿರುವ ಬರದೂರು, ನಾಗರಹಳ್ಳಿ ಗ್ರಾಮಗಳಿಗೆ ಹೋಗಬೇಕು. ಆದ್ದರಿಂದ ಸರ್ಕಾರ ಮುಂಡರಗಿ ಪಟ್ಟಣಕ್ಕೊಂದು ಸರ್ಕಾರಿ ಪ್ರೌಢಶಾಲೆ ಮಂಜೂರಾತಿಗೆ ಬಜೆಟ್‌ನಲ್ಲಿ ಹಣವನ್ನುಕಾಯ್ದಿರಿಸಬೇಕು.
ತಾಲೂಕಿನ ಕೆಲವು ಗ್ರಾಮಗಳಲ್ಲಿ ಈಗಲೂ ಜನ ಗುಳೆ ಹೋಗುತ್ತಿದ್ದು, ಗುಳೆಯನ್ನು ತಪ್ಪಿಸಲು ಸ್ಥಳೀಯ ಜನತೆಗೆ ಉದ್ಯೋಗಾವಕಾಶಗಳನ್ನು ನೀಡುವಂತಹ ಸಣ್ಣ ಮಟ್ಟದ ಗುಡಿ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಸ್ವಯಂ ಉದ್ಯೋಗಕ್ಕೆ ಅನುಕೂಲ ಮಾಡಿಕೊಡಬೇಕು, ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಗೋವಿನ ಜೋಳ ಹಾಗೂ ಶೇಂಗಾ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುವುದರಿಂದ ಅವುಗಳನ್ನು ಬಳಕೆ ಮಾಡಿಕೊಳ್ಳುವಂತಹ ರೈತ ಸ್ನೇಹಿ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಮುಂಡರಗಿ ಪಟ್ಟಣದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇದ್ದು, ಇಲ್ಲೊಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡುವುದರಿಂದ ಐಟಿಐ ಮುಗಿಸಿದ ಯುವಕರಿಗೆ ಕೌಶಲ್ಯಾಭಿವೖದ್ದಿಗೆ ಅನುಕೂಲವಾಗಿತ್ತದೆ.ಸರ್ಕಾರ ಸಿಂಗಟಾಲೂರು ಯೋಜನೆಯ ಮುಳುಗಡೆ ಗ್ರಾಮಗಳ ಸ್ಥಳಾಂತರ ಹಾಗೂ ಶಿರಹಟ್ಟಿ, ಗದಗ ಹಾಗೂ ರೋಣ ಮತಕ್ಷೇತ್ರಗಳ 29 ಕೆರೆಗಳು ಹಾಗೂ ಎರಡು ಸಿರೇಜ್ ಅಫ್ ಚೆಕ್ ಡ್ಯಾಂಗಳನ್ನು ತುಂಬಿಸಲು ಅನುಕೂಲವಾಗುವ ಜಾಲವಾಡಗಿ ಏತ ನೀರಾವರಿ ಯೋಜನೆಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಮೀಸಲಿಡುವ ಮೂಲಕ ರೈತರಿಗೆ ಆಸರೆಯಾಗಿ ನಿಲ್ಲಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣ ಇಲ್ಲೂರ ಹೇಳುತ್ತಾರೆ.