ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು
ಕಳೆದ ಮೂರು ತಿಂಗಳ ಅವಧಿಯಲ್ಲಿ ಸಿಂಧನೂರು ಕ್ಷೇತ್ರದ ವಿವಿಧ ಇಲಾಖೆಗಳ ಪ್ರಗತಿ ಕಾರ್ಯಗಳಿಗಾಗಿ ರಾಜ್ಯ ಸರ್ಕಾರದಿಂದ ₹291 ಕೋಟಿ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ಸಿಂಧನೂರಿನ 12ನೇ ವಾರ್ಡ್‌ನಿಂದ 30ನೇ ವಾರ್ಡ್‌ನವರೆಗೆ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಲ್ಲಿ ₹33.50 ಕೋಟಿ ಬಿಡುಗಡೆಯಾಗಿದೆ. ಮ್ಯಾಕ್ರೋ ಯೋಜನೆಯಲ್ಲಿ ರೈತನಗರ ಕ್ಯಾಂಪ್ ರಸ್ತೆಯ ಡಾಂಬರೀಕರಣಕ್ಕೆ ₹1.35 ಕೋಟಿ, ಜೊತೆಗೆ ದಿದ್ದಿಗಿ, ರಾಮತ್ನಾಳ, ಗೋನವಾರ, ಹಂಚಿನಾಳ, ರಾಗಲಪರ್ವಿ, ಚಿಂತಮಾನದೊಡ್ಡಿ ಮತ್ತಿತರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಅಕ್ಕಮಹಾದೇವಿ ಸ್ನಾತಕೋತ್ತರ ಕೇಂದ್ರದ ವಸತಿ ನಿಲಯದ ಕಟ್ಟಡಕ್ಕೆ ₹5 ಕೋಟಿ, ಕಮ್ಮವಾರಿ ಭವನದ ರಸ್ತೆಗೆ ₹1 ಕೋಟಿ, 25 ದೇವಸ್ಥಾನಗಳಿಗೆ ₹1 ಕೋಟಿ, ಚಂದ್ರಮೌಳೇಶ್ವರ ಟ್ರಸ್ಟ್‌ಗೆ ₹4 ಕೋಟಿ, ಗಾಂಧಿನಗರ ರಸ್ತೆಗೆ ₹20 ಕೋಟಿ, ಹುಡಾ ಮತ್ತು ಗೋಮರ್ಸಿ ಏತನೀರಾವರಿ ಯೋಜನೆಗೆ ಎಂಎಸ್ಪಿ ಪೈಪ್ಲೈನ್, 25 ಪ್ರೌಢ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ಮತ್ತು ಪ್ರಯೋಗಾಲಯಕ್ಕೆ ₹1.70 ಕೋಟಿ, ಸರ್ಕಾರಿ ಪದವಿ ಕಾಲೇಜು ಕಟ್ಟಡಕ್ಕೆ ₹8 ಕೋಟಿ, ಶಾಲಾ ದುರಸ್ತಿಗೆ ₹30 ಲಕ್ಷ, ಮಸೀದಿಗಳ ಕಟ್ಟಡಕ್ಕೆ ₹5 ಲಕ್ಷ, ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ₹5 ಕೋಟಿ ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮಂಜೂರು ಮಾಡಿಸಿದ್ದು, ಕೆಲ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿವೆ. ಇನ್ನು ಕೆಲ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ವಿವರಿಸಿದರು.ಈ ಹಿಂದೆಯೂ ಯಾವುದೇ ನಿಗಮ ಮಂಡಳಿಯ ಅಧಿಕಾರ ಬೇಡವೆಂದು ಹೇಳಿದ್ದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೇಮಕ ಮಾಡಿದ್ದಕ್ಕೆ ಅವರಿಗೆ ಕೃತಜ್ಞತೆ ಹೇಳಿದ್ದೇನೆ. ಆದರೆ ಆ ಅಧಿಕಾರ ಮಾತ್ರ ಬೇಡವೆಂದೇ ಅವರಿಬ್ಬರ ಗಮನಕ್ಕೆ ತಂದಿರುವುದಾಗಿ ಶಾಸಕ ಬಾದರ್ಲಿ ಹೇಳಿದರು.
ಶಾಸಕನಾಗಿ ಆಯ್ಕೆಯಾದ ದಿನದಿಂದ ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಯಾವ ಪ್ರಗತಿಯನ್ನು ಗಣನೆಗೆ ತೆಗೆದುಕೊಳ್ಳದೆ ಏಕಾಏಕಿಯಾಗಿ ಪೂರ್ವಗ್ರಹ ಪೀಡಿತರಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಶಾಸಕರು ನಿರ್ಲಕ್ಷಿಸಿದ್ದಾರೆಂದು ಹೇಳಿಕೆ ನೀಡಿರುವ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ನಿದ್ದೆಗಣ್ಣಿನಲ್ಲಿದ್ದಂತೆ ತೋರುತ್ತದೆ ಎಂದು ತಿರುಗೇಟು ನೀಡಿದರು.ಈ ಹಿಂದೆ ಹಿಂಗಾರು ಜೋಳದ ಬೆಳೆಗೆ ಮಾತ್ರ ಖರೀದಿ ಕೇಂದ್ರ ತೆರೆಯಲಾಗುತ್ತಿತ್ತು. ಫೆ.22ರಂದು ನೂತನ ಆದೇಶ ನೀಡಿರುವ ಸರ್ಕಾರ ಎರಡೂ ಹಂಗಾಮಿನ ಜೋಳಕ್ಕೆ ಖರೀದಿ ಕೇಂದ್ರ ತೆರೆಯಲು ಅವಕಾಶ ನೀಡಿದೆ. ಪ್ರತಿ ರೈತನಿಂದ 10 ಕ್ವಿಂಟಲ್ ಮಾತ್ರ ಖರೀದಿಸಲಾಗುತ್ತಿತ್ತು. ಅದನ್ನು 20 ಕ್ವಿಂಟಲ್‌ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎನ್.ನಾಯಕ ಇದ್ದರು.