29, 30 ರಂದು ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಸಮಿತಿ ಸಭೆ, ರಾಜ್ಯ ಸಮ್ಮೇಳನ

| Published : Sep 21 2024, 01:45 AM IST

29, 30 ರಂದು ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಸಮಿತಿ ಸಭೆ, ರಾಜ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ಕಬ್ಬು ಬೆಳೆಗಾರ ಸಂಘದ ರಾಷ್ಟ್ರ ಸಮಿತಿ ಸಭೆ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಸಮ್ಮೇಳನವು ಸೆ.29 ಮತ್ತು ಸೆ.30 ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಕಬ್ಬು ಬೆಳೆಗಾರ ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತರಾಜ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಖಿಲ ಭಾರತ ಕಬ್ಬು ಬೆಳೆಗಾರ ಸಂಘದ ರಾಷ್ಟ್ರ ಸಮಿತಿ ಸಭೆ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಸಮ್ಮೇಳನವು ಸೆ.29 ಮತ್ತು ಸೆ.30 ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಕಬ್ಬು ಬೆಳೆಗಾರ ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತರಾಜ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಅಖಿಲ ಭಾರತ ಅಧ್ಯಕ್ಷ ಡಿ.ರವೀಂದ್ರನ್, ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ವಿಜು ಕೃಷ್ಣನ್, ಅಖಿಲ ಭಾರತ ಕಬ್ಬು ಬೆಳೆಗಾರ ಸಂಘದ ರಾಷ್ಟ್ರೀಯ, ಪ್ರಧಾನ ಕಾರ್ಯದರ್ಶಿ ಎನ್.ಕೆ.ಶುಕ್ಲಾ ಮುಂತಾದವರು ಭಾಗವಹಿಸಲಿದ್ದಾರೆ. ಜತೆಗೆ ಉತ್ತರ ಪ್ರದೇಶ ಪಂಜಾಬ್, ಹರಿಯಾಣ, ತೆಲಂಗಾಣ. ಆಂಧ್ರಪ್ರದೇಶ, ಮದ್ಯಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ ತಮಿಳುನಾಡು ಬಿಹಾರ, ಕರ್ನಾಟಕ ಮುಂತಾದ ಕಬ್ಬು ಬೆಳೆಯುವ ರಾಜ್ಯಗಳಿಂದ ಕಬ್ಬು ಬೆಳೆಗಾರ ಸಂಘದ ರಾಷ್ಟ್ರಮಟ್ಟದ ಮುಖಂಡರುಗಳು ಭಾಗವಹಿಸಲಿದ್ದಾರೆ. ದೇಶದ ಕಬ್ಬು ಬೆಳೆಗಾರರ ಸ್ಥಿತಿಗತಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸುವರು ಎಂದರು.ಕೇಂದ್ರ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ₹5000 ಬೆಲೆ ನಿಗದಿ ಮಾಡದೆ ಸಕ್ಕರೆ ಕಾರ್ಖಾನೆ ಮಾಲಿಕರೊಂದಿಗೆ ಶಾಮಿಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರ ಸಕ್ಕರೆ ಕಂಪನಿ ಮಾಲೀಕರ ಮುಲಾಜಿನಲ್ಲಿ ನಡೆಯುತ್ತಿದೆ. ಇವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಮೋದಿ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹5000 ಎಫ್.ಆರ್‌.ಪಿ ದರ ನಿಗದಿಪಡಿಸಬೇಕಿತ್ತು. ಅದೇ ರೀತಿ ರಾಜ್ಯ ಸರ್ಕಾರ ಪ್ರತಿ ಟನ್‌ಗೆ ಕನಿಷ್ಠ ₹500 ಎಸ್‌ಎಪಿ ನಿಗದಿಪಡಿಸದೆ ರೈತ ವಿರೋಧಿಗಳಾಗಿವೆ ಎಂದರು.2024-25ನೇ ಸಾಲಿಗೆ ಕಬ್ಬಿನ ಎಫ್‌ಆರ್‌ಪಿ ಯನ್ನು ಟನ್‌ಗೆ ಶೇ.9.5 ಇಳುವರಿಗೆ ₹3150 ಹಾಗೂ ಶೇ.10.25 ಇಳುವರಿಗೆ ₹3400 ಎಂದು ನಿಗದಿ ಮಾಡಿದ್ದಾರೆ. ಒಂದು ಪರ್ಸೆಂಟ್ ಇಳುವರಿ ಹೆಚ್ಚಾದರೇ ₹320 ಹೆಚ್ಚಾಗುತ್ತದೆ ಒಂದು ಪರ್ಸೆಂಟ್ ಕಡಿಮೆಯಾದರೇ ₹320 ಕಡಿಮೆಯಾಗುತ್ತದೆ. ಆದರೆ, ರಾಜ್ಯದ ಸಕ್ಕರೆ ಕಾರ್ಖಾನೆಗಳು ಘೋಷಿಸುವ ಇಳುವರಿಯಲ್ಲಿ ಪಾರದರ್ಶಕತೆ ಇರುವುದಿಲ್ಲ. ಇಳುವರಿ ಘೋಷಣೆಯ ಸತ್ಯಾಂಶದಲ್ಲಿ ಅನುಮಾನ ಇದೆ. ಅದೇ ರೀತಿ ತೂಕದಲ್ಲಿಯೂ ಸಹ ಮೋಸ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಆರೋಪಿಸಿದರು.ಈ ವಿಷಯಗಳ ಬಗ್ಗೆ ರೈತ ಮುಖಂಡರೊಳಗೊಂಡ ಸಮಿತಿ ರಚಿಸಲು ಕಬ್ಬು ನಿಯಂತ್ರಣ ಮಂಡಳಿ ಸೂಚನೆಗಳಿದ್ದರೂ ಅದನ್ನು ಮಾಡಲು ಜಿಲ್ಲಾಡಳಿತ ಮುಂದಾಗಿಲ್ಲ. ಕಬ್ಬು ಬೆಳೆಗಾರರ ಸಂಘದ ಹೋರಾಟದ ಫಲವಾಗಿ ರೈತರ ಒಳಗೊಂಡ ಸಮಿತಿ ರಚಿಸಲು ಕೆಲವು ಜಿಲ್ಲೆಯ ಜಿಲ್ಲಾಧಿಕಾರಿಗಳು, ಆಹಾರ ಇಲಾಖೆಯ ಉಪ ನಿರ್ದೇಶಕರು ಕೃಷಿ ಇಲಾಖೆಯ ಉಪ ನಿರ್ದೇಶಕರು ಹಾಗೂ ಕೃಷಿ ವಿಜ್ಞಾನಿಗಳು ಒಳಗೊಂಡಂತೆ ಸಮಿತಿ ರಚನೆ ಮಾಡಿದ್ದರೂ ಅವುಗಳು ಕಾರ್ಯಗತವಾಗಿಲ್ಲ ಎಂದು ದೂರಿದರು.ಕಟಾವು ಮತ್ತು ಸಾಗಾಣಿಕ ವೆಚ್ಚ ಕುರಿತಂತೆ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಅಧಿಕಾರಿಗಳು ಹಾಗೂ ಕಬ್ಬು ಬೆಳೆಗಾರರ ಸಂಘದ ಮುಖಂಡರು ಒಳಗೊಂಡ ಸಭೆ ನಡೆಸಬೇಕು. ದ್ವಿಪಕ್ಷಿಯ ಸಮಿತಿ ರಚಿಸಬೇಕು. ಕಬ್ಬು ಕಟಾವಾದ 14 ದಿನದೊಳಗೆ ಹಣಪಾವತಿ ಮಾಡದಿರುವುದು ಸಹ ಕಾನೂನು ಬಾಹಿರವಾಗಿರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಇಳುವರಿ ಮತ್ತು ತೂಕ ಪರೀಕ್ಷಿಸಲು ರೈತ ಮುಖಂಡರು ತಜ್ಞರು ಒಳಗೊಂಡ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.ಕಬ್ಬು ತುಂಬಿದ ವಾಹನ ಇತರೆ ಗಾಡಿಗಳು ಕಬ್ಬು ತುಂಬಿಕೊಂಡು ಬಂದ ತಕ್ಷಣ ಆನ್ ಲೋಡ್ ಮಾಡಬೇಕು. ವಿನಾಕಾರಣ ಕಬ್ಬನ್ನು ಒಣಗಿಸಬಾರದು, ಕಟಾವು ಮತ್ತು ಸಾಗಣಿಕೆ ವೆಚ್ಚವನ್ನ ಕಡಿತ ಮಾಡಿಕೊಳ್ಳುವಾಗ ಕಿ.ಮೀ ಆಧಾರದ ಮೇಲೆ ಹಣ ಕಡಿತ ಮಾಡಬೇಕು. ಚಾಲಕರು ಮತ್ತು ಇತರರಿಗೆ ವಿಶ್ರಾಂತಿ ಕೊಠಡಿ ಊಟಕ್ಕಾಗಿ ಕ್ಯಾಂಟೀನ್‌ಗಳನ್ನು ತೆರೆದು ರಿಯಾಯತಿ ದರದಲ್ಲಿ ಊಟ ವ್ಯವಸ್ಥೆ ಮಾಡಬೇಕು ಮುಂತಾದ ವಿಚಾರಗಳ ಕುರಿತು ಈ ಸಮ್ಮೇಳನ ಮತ್ತು ರಾಷ್ಟ್ರೀಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಅಣ್ಣಾರಾಯ ಈಳಗೇರ, ಭೀಮರಾಯ ಪೂಜಾರ, ಗೋಪಾಲ ಶಿವಗದ್ದಿಗೆ, ಹಣಮಂತ ಕುಂಬಾರ, ಅಪ್ಪುಗೌಡ ಪಾಟೀಲ, ಸುರೇಖಾ ರಜಪೂತ, ರಾಮು ಹಿರೆಪಡಸಲಗಿ ಉಪಸ್ಥಿತರಿದ್ದರು.