ಸಾರಾಂಶ
ಈಗಾಗಲೇ ಆರು ಹಂತದ ಹೋರಾಟ ಮಾಡಿದ್ದು, 7ನೇ ಹಂತದ ಹೋರಾಟದ ಕುರಿತು ತೀರ್ಮಾನಿಸಲು ಸೆ. 22ರಂದು ಬೆಳಗಾವಿ ಗಾಂಧಿ ಭವನದಲ್ಲಿ ರಾಜ್ಯಮಟ್ಟದ ಪಂಚಮಸಾಲಿ ವಕೀಲರ ಸಮಾವೇಶ ಮಾಡಲಾಗುತ್ತಿದೆ.
ಧಾರವಾಡ:
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎನ್ನುವ ಹೋರಾಟ ಇದೀಗ ಸಮಾಜದ ವಕೀಲರ ಬೆನ್ನಿಗೆ ಬಿದ್ದಿದೆ. ಸಮುದಾಯದ ಶಾಸಕರು ನಿರೀಕ್ಷಿತ ಮಟ್ಟದಲ್ಲಿ 2ಎ ಮೀಸಲಾತಿಗಾಗಿ ಹೋರಾಟ ಮಾಡದ ಹಿನ್ನೆಲೆಯಲ್ಲಿ ಹೋರಾಟದ ಮುಖಂಡತ್ವ ವಹಿಸಿರುವ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ತಮ್ಮ ಸಮುದಾಯದ ವಕೀಲರ ಮೂಲಕ ಹೋರಾಟ ಯಶಸ್ವಿಗೊಳಿಸಲು ತೀರ್ಮಾನಿಸಿದ್ದಾರೆ.ಬುಧವಾರ ಧಾರವಾಡದಲ್ಲಿ ಪ್ರಥಮವಾಗಿ ಪಂಚಮಸಾಲಿ ವಕೀಲರ ಸಭೆ ನಡೆಸಿದ ಸ್ವಾಮೀಜಿ, ಇನ್ಮುಂದೆ ಕಾನೂನು ಮೂಲಕ ಹೋರಾಟ ಮಾಡವುದಾಗಿ ಮಾಧ್ಯಮಗಳ ಎದುರು ಹೇಳಿದರು. ಕಳೆದ ಅಧಿವೇಶನದಲ್ಲಿ ಸಮುದಾಯದ ಶಾಸಕರು ಮೀಸಲಾತಿಗಾಗಿ ಹೋರಾಟ ಮಾಡುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ, ಅಧಿವೇಶನದಲ್ಲಿ ಯಾವ ಶಾಸಕರು ಇಚ್ಛಾಶಕ್ತಿ ತೋರದ ಹಿನ್ನೆಲೆಯಲ್ಲಿ ಈ ವಿಷಯ ಚರ್ಚೆಗೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಧಾರವಾಡ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಾಜದ ವಕೀಲರ ಸಭೆ ನಡೆಸಿ ಕಾನೂನು ಮೂಲಕ ಮುಖ್ಯಮಂತ್ರಿಗಳ ಕಣ್ತೆರೆಯಿಸುವ ಕಾರ್ಯ ಮಾಡಲಾಗುವುದು ಎಂದರು.
ಸೆ. 22ರಂದು ರಾಜ್ಯಮಟ್ಟದ ಸಭೆ:ಈಗಾಗಲೇ ಆರು ಹಂತದ ಹೋರಾಟ ಮಾಡಿದ್ದು, 7ನೇ ಹಂತದ ಹೋರಾಟದ ಕುರಿತು ತೀರ್ಮಾನಿಸಲು ಸೆ. 22ರಂದು ಬೆಳಗಾವಿ ಗಾಂಧಿ ಭವನದಲ್ಲಿ ರಾಜ್ಯಮಟ್ಟದ ಪಂಚಮಸಾಲಿ ವಕೀಲರ ಸಮಾವೇಶ ಮಾಡಲಿದ್ದು, ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲರಾದ ಸಿ.ಆರ್. ಮೆಣಸಿನಕಾಯಿ, ಬಿ.ಪಿ. ಧನಶೆಟ್ಟಿ, ಸಿ.ಎಸ್. ನೇಗಿನಹಾಳ, ಸಿದ್ದು ಹುಬ್ಬಳ್ಳಿ, ಎ.ಸಿ. ಚಾಕಲಬ್ಬಿ, ರಾಜು ಸವದತ್ತಿ, ಸಿ.ಎಸ್. ಪಾಟೀಲ, ಪಿ.ಬಿ. ಭಾವಿಕಟ್ಟಿ ಇದ್ದರು.