ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾದ ಜಾಗದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಠಾಣಾ ಪೊಲೀಸರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಸೇರಿದಂತೆ 17 ಮಂದಿ ವಿರುದ್ಧ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಪೊಲೀಸರು ಶಾಸಕ ಹರೀಶ್ ಪುಂಜ ವಿರುದ್ಧ ಕೋರ್ಟ್‌ಗೆ ಎರಡನೇ ಆರೋಪ ಪಟ್ಟಿ ಸಲ್ಲಿಸಿದಂತಾಗಿದೆ.2023 ಅಕ್ಟೋಬರ್‌ನಲ್ಲಿ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಲೋಲಾಕ್ಷ ಎಂಬವರು ಮೀಸಲು ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದನ್ನು ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಕಿತ್ತು ಹಾಕಿದ್ದರು. ಇದನ್ನು ವಿರೋಧಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿ ಕಾರ್ಯಕರ್ತರು ಮನೆ ಮರು ನಿರ್ಮಾಣ ಮಾಡಿದ್ದರು. ಮತ್ತೆ ಅರಣ್ಯ ಇಲಾಖೆ ಮನೆ ತೆರವು ಮಾಡಲು 9-10-2023 ರಂದು ಮುಂದಾದಾಗ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮತ್ತು ಇತರರು ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಎಂಬವರ ದೂರು ನೀಡಿದ್ದರು.
ಈ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮತ್ತು ಇತರ 15 ಮಂದಿ ಸೇರಿದಂತೆ ಒಟ್ಟು 17 ಮಂದಿ ವಿರುದ್ಧ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್‌ಗೆ ಶನಿವಾರ ದೋಷರೋಪ ಪಟ್ಟಿ ಸಲ್ಲಿಸಿದ್ದಾರೆ.ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸರಿಗೆ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಶಾಸಕ ಹರೀಶ್ ಪುಂಜ ಸೇರಿದಂತೆ 15 ಮಂದಿ ವಿರುದ್ಧ ಕಳೆದ ವಾರ ಬೆಳ್ತಂಗಡಿ ಠಾಣಾ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.