ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ.1 ರಿಂದ 20 ರವರೆಗೆ ನಡೆಯಲಿದ್ದು, ಸುಗಮ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮಾರ್ಗದಲ್ಲಿ ಪೊಲೀಸರ ನಿಯೋಜನೆ, ಪರೀಕ್ಷಾ ಕೇಂದ್ರದಲ್ಲಿ ಶ್ರುಶೂಷಕರು ಹಾಗೂ ಪೊಲೀಸರ ನಿಯೋಜನೆ, ಬ್ಯಾಗ್ ಇಟ್ಟುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ, ಕುಡಿಯುವ ನೀರು ಕಲ್ಪಿಸುವುದು ಮತ್ತಿತರ ಅಗತ್ಯ ಮೂಲ ಸೌಲಭ್ಯ ಒದಗಿಸಲು ಸಂಬಂಧಪಟ್ಟ ಇಲಾಖೆ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಸಲಹೆ ಮಾಡಿದರು.ಪರೀಕ್ಷೆ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಗಮನಹರಿಸಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೆ ಪರೀಕ್ಷೆಯನ್ನು ಸುಲಲಿತವಾಗಿ ನಡೆಸಬೇಕು ಎಂದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನಿಯೋಜಿಸಿರುವ ಎಲ್ಲಾ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ತಮಗೆ ವಹಿಸಿರುವ ಕೆಲಸವನ್ನು ವ್ಯವಸ್ಥಿತವಾಗಿ ಮತ್ತು ಗಂಭೀರವಾಗಿ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಮಾಡಿದರು.ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಎಸ್‌ಆರ್‌ಟಿಸಿ ಬಸ್ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಆರ್.ಐಶ್ವರ್ಯ ನಿರ್ದೇಶನ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೆ.ಮಂಜುಳ ಮಾಹಿತಿ ನೀಡಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ.1 ರಿಂದ 20 ರವರೆಗೆ ನಡೆಯಲಿದ್ದು, ಪರೀಕ್ಷಾ ದಿನದಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ 19 ಪರೀಕ್ಷಾ ಕೇಂದ್ರಗಳಿದ್ದು, ಗೋಣಿಕೊಪ್ಪದ ಕಾವೇರಿ ಪಿಯು ಕಾಲೇಜು, ನಾಪೋಕ್ಲು, ಪೊನ್ನಂಪೇಟೆ, ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ಹಾಗೂ ಕುಶಾಲನಗರ ಸರ್ಕಾರಿ ಪಿಯು ಕಾಲೇಜು, ಮೂರ್ನಾಡು ಪಿಯು ಕಾಲೇಜು, ಚೇರಂಬಾಣೆ ಅರುಣ ಪಿಯು ಕಾಲೇಜು, ಕೊಡ್ಲಿಪೇಟೆಯ ಪಿಯು ಕಾಲೇಜು, ಶ್ರೀಮಂಗಲ ಪಿಯು ಕಾಲೇಜು, ಶನಿವಾರಸಂತೆ ಪಿಯು ಕಾಲೇಜು, ನಗರದ ಸಂತ ಮೈಕಲರ ಶಾಲೆ, ನೆಲ್ಯಹುದಿಕೇರಿ ಹಾಗೂ ಕೂಡಿಗೆಯ ಸರ್ಕಾರಿ ಪಿಯು ಕಾಲೇಜು, ವಿರಾಜಪೇಟೆಯ ಸಂತ ಅನ್ನಮ್ಮ ಪಿಯು ಕಾಲೇಜು, ಕುಶಾಲನಗರದ ಕನ್ನಡ ಭಾರತಿ ಪಿಯು ಕಾಲೇಜು, ಸುಂಟಿಕೊಪ್ಪ ಸರ್ಕಾರಿ ಸಂಯುಕ್ತ ಪಿಯು ಕಾಲೇಜು, ಗೋಣಿಕೊಪ್ಪ ವಿದ್ಯಾನೀಕೇತನ ಪಿಯು ಕಾಲೇಜು ಇಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕೆ.ಮಂಜುಳ ಅವರು ವಿವರಿಸಿದರು.
‘ಜಿಲ್ಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ 5,240 ವಿದ್ಯಾರ್ಥಿಗಳು ಹಾಜರಾಗಲಿದ್ದು, ಇವರಲ್ಲಿ ಪ್ರೆಸರ್ಸ್ 4865 ವಿದ್ಯಾರ್ಥಿಗಳು, ಖಾಸಗಿಯಾಗಿ 254 ವಿದ್ಯಾರ್ಥಿಗಳು ಮತ್ತು 121 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.’19 ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಕಚೇರಿ ಅಧೀಕ್ಷಕರು, ಉತ್ತರ ಪತ್ರಿಕೆ ಪಾಲಕರು, ಕೊಠಡಿ ಮೇಲ್ವಿಚಾರಕರು, ಕರ್ತವ್ಯ ನಿರ್ವಾಹಕರನ್ನು ನಿಯೋಜಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು.
ಜಿಲ್ಲಾ ಖಜಾನೆಯಲ್ಲಿ ತ್ರಿಸದಸ್ಯ ಸಮಿತಿ ಅಧಿಕಾರಿಗಳಿಗೆ ಮತ್ತು ಎಲ್ಲಾ ಮಾರ್ಗ ಅಧಿಕಾರಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ನಿರ್ವಹಿಸಲಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಮಂಜುಳಾ ಅವರು ಹೇಳಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಂಗಧಾಮಪ್ಪ, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ತಹಸೀಲ್ದಾರರಾದ ಪ್ರವೀಣ್ ಕುಮಾರ್, ರಾಮಚಂದ್ರ, ಕಿರಣ್ ಗೌರಯ್ಯ, ಮೋಹನ್ ಕುಮಾರ್, ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಇತರರು ಇದ್ದರು.