ಸಾರಾಂಶ
ಬೆಂಗಳೂರು : ಬೆಳಗಾವಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಾಗೂ ಕೊರೋನಾ ಸೋಂಕು ದೃಢಪಟ್ಟಿದ್ದ 70 ವರ್ಷದ ವೃದ್ಧರೊಬ್ಬರು ಬುಧವಾರ ಮೃತಪಟ್ಟಿದ್ದು, ರಾಜ್ಯದಲ್ಲಿ ಕೊರೋನಾದಿಂದ ಮೃತರಾದವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.
ಗುರುವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 42 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 19 ಮಂದಿ ಗುಣಮುಖರಾಗಿದ್ದಾರೆ. ಇದೇ ವೇಳೆ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ಬೆಳಗಾವಿ ತಾಲೂಕಿನ ಬೆನಕನಹಳ್ಳಿಯ 70 ವರ್ಷದ ವೃದ್ಧರೊಬ್ಬರು ಮೇ 26 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನ್ಯೂರೋಫಿಸಿಷಿಯನ್ ಅವರು ಚಿಕಿತ್ಸೆ ನೀಡಿದಾಗ ಅವರಿಗೆ ಅನಿಮಿಯಾ, ಟಿಬಿ ಸಮಸ್ಯೆ ಇತ್ತು. ಜತೆಗೆ ಎರಡು ವರ್ಷದ ಹಿಂದೆ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದ ಅವರಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ತೀವ್ರ ಹೃದ್ರೋಗ ಸಮಸ್ಯೆ ಇತ್ತು.
ಈ ವೇಳೆ ಸ್ವ್ಯಾಬ್ ಪರೀಕ್ಷೆ ನಡೆಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಮೇ 28 ರಂದು ರೋಗಿಯ ಸಹಾಯಕರು ಬೆಳಗಾವಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಸಿರಾಟ ಸಮಸ್ಯೆ ವಿಭಾಗದಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಮೇ 28 ರಂದು ಅವರು ಮೃತಪಟ್ಟಿದ್ದಾರೆ. ಕೊರೋನಾ ಇದ್ದರೂ ಅವರು ಬೇರೆ ಅನಾರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
148 ಸಕ್ರಿಯ ಪ್ರಕರಣ:
ಗುರುವಾರ ಒಟ್ಟು 513 ಮಂದಿಗೆ ಪರೀಕ್ಷೆ ನಡೆಸಿದ್ದು ಶೇ.8.18 ರಷ್ಟು ಪಾಸಿಟಿವಿಟಿ ದರದೊಂದಿಗೆ 42 ಮಂದಿಗೆ ಸೋಂಕು ದೃಢಪಟ್ಟಿದೆ. ಜ.1 ರಿಂದ ಈವರೆಗೆ 253 ಮಂದಿಗೆ ಸೋಂಕು ದೃಢಪಟ್ಟಿದ್ದು 103 ಮಂದಿ ಗುಣಮುಖರಾಗಿ ಇಬ್ಬರು ಮೃತಪಟ್ಟಿದ್ದಾರೆ.
ಉಳಿದ 148 ಸಕ್ರಿಯ ಸೋಂಕು ಪ್ರಕರಣಗಳಲ್ಲಿ 9 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.