ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ: ಚಿಕ್ಕೊಪ್ಪ.ಎಸ್.ಕೆ ಗ್ರಾಮದ ಉಡಚಮ್ಮನಗರ ಹಾಗೂ ಲಕ್ಷ್ಮೀ ನಗರಗಳಿಗೆ ರಸ್ತೆ ಸಂಪರ್ಕ, ಸತ್ಯಮ್ಮನ ಹಳ್ಳಕ್ಕೆ ಸೇತುವೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಆದಷ್ಟು ಬೇಗನೆ ಕಲ್ಪಿಸುವುದಾಗಿ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.
ಭಾನುವಾರ ₹3.43 ಕೋಟಿ ವೆಚ್ಚದಲ್ಲಿ ತಾಲೂಕಿನ ಚಿಕ್ಕೊಪ್ಪ ಎಸ್.ಕೆ ಗ್ರಾಮದ ಉಡಚಮ್ಮ ನಗರದಿಂದ ಚಿಕ್ಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಜೊತೆಗೆ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಹಿತ ಸುಧಾರಣೆ ಮಾಡಲು ಅಗತ್ಯ ಕ್ರಮಕೈಗೊಳ್ಳಲಿದೆ ಎಂದರು.ಉಡಚಮ್ಮ ನಗರದ ಜನರ ಬಹುದಿನದ ಬೇಡಿಕೆಗಳಾದ ಶುದ್ಧ ಕುಡಿಯುವ ನೀರು ಪೂರೈಕೆ ಕೆಲಸ ಪ್ರಗತಿಯಲ್ಲಿದೆ. ಈಗ ಚಿಕ್ಕೊಪ್ಪ ಗ್ರಾಮದ ಮುಖ್ಯರಸ್ತೆ ಕಾಮಗಾರಿ ಆರಂಭವಾಗಿದ್ದು, ಇನ್ನು ಮುಖ್ಯವಾಗಿ ಉಡಚಮ್ಮ ನಗರದಿಂದ ಹೆದ್ದಾರಿ ಸಂಪರ್ಕಿಸುವ ಬೈರನಹಟ್ಟಿ ರಸ್ತೆಯನ್ನು ನೀರಾವರಿ ಇಲಾಖೆಯ ಅನುದಾನದಲ್ಲಿ ಮತ್ತು ಲಕ್ಷ್ಮೀನಗರಕ್ಕೆ ಸಂಪರ್ಕಿಸುವ ಸತ್ಯಮ್ಮನ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಸೇತುವೆ 6 ತಿಂಗಳೊಳಗೆ ಕೆಲಸ ಪ್ರಾರಂಭಿಸಲಾಗುವುದು. ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಜನರು ತಾಳ್ಮೆಯಿಂದ ಇರಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಉಡಚಮ್ಮ ನಗರದ ಅಂಗನವಾಡಿ ಮತ್ತು ಹೆಚ್ಚುವರಿ ಶಾಲಾ ಕಟ್ಟಡ ನಿರ್ಮಿಸುವಂತೆ ನಿವಾಸಿಗಳು ಶಾಸಕರಿಗೆ ಮನವಿ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶಾಂತವ್ವ ಭಜಂತ್ರಿ, ಸದಸ್ಯರಾದ ದೊಡ್ಡವ್ವ ಬಾಗಲಿ, ಭೀಮಪ್ಪ ಮರೆನ್ನವರ, ಮುದಕಪ್ಪ ಕಲೂತಿ, ಮುಖಂಡರಾದ ಯಂಕಪ್ಪ ಲಕ್ಕನವರ, ಅಯ್ಯಪ್ಪ ಕಳಸದ, ಭೀರಪ್ಪ ಕಳಸದ, ಲಕ್ಷ್ಮಣ ಕಳಸದ, ಯಮನಪ್ಪ ಆಡಗಲ, ಕೆಪಿಸಿಸಿ ಸದಸ್ಯ ಸುರೇಶ ಪತ್ತೇಪೂರ, ಪಿಡಬ್ಲೂಡಿ ಎಇಇ ರವಿಕುಮಾರ, ಗುತ್ತಿಗೆದಾರ ಎಂ.ಎಂ.ಅತ್ತಾರ ಸೇರಿದಂತೆ ಹಲವರು ಇದ್ದರು.