ಸಾರಾಂಶ
ಬೀದರ್‌ನ ಘೋಡಂಪಳ್ಳಿ ಗ್ರಾಮದಲ್ಲಿರುವ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 3 ಕೋಟಿ ರು. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ನಾನು ಬದ್ಧವಾಗಿದ್ದೇನೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಕಾಲೇಜುಗಳಿಗೆ ಮೂಲ ಸೌಕರ್ಯಗಳು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ಅಭ್ಯಾಸ ಮಾಡಬೇಕೆಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ನುಡಿದರು.ಅವರು ಕ್ಷೇತ್ರದ ಘೋಡಂಪಳ್ಳಿ ಗ್ರಾಮದಲ್ಲಿರುವ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 3 ಕೋಟಿ ರು. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಕ್ಷೇತ್ರ ಸಂಪೂರ್ಣ ಗ್ರಾಮೀಣ ಪ್ರದೇಶದಿಂದ ಕೂಡಿದ್ದು ಬಡ ವಿದ್ಯಾರ್ಥಿಗಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಈ ಕಾಲೇಜು ಆರಂಭವಾಗಿದ್ದು, ಈ ಕಾಲೇಜಿನಲ್ಲಿ ಕಾಂಪೌಂಡ್ ಗೋಡೆ ಹಾಗೂ ಮೂಲ ಸೌಕರ್ಯ ಕೊರತೆಯಿಂದ ವಿಧ್ಯಾರ್ಥಿಗಳಿಗೆ ತೊಂದರೆ ಅನುಭವಿಸುವಂತಾಗಿತ್ತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಕುರಿತು ನನಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಇದೀಗ ಕಾಲೇಜು ಅಭಿವೃದ್ಧಿಗೆ ಅನುದಾನ ಕಲ್ಪಿಸಲಾಗಿದೆ ಎಂದು ಹೇಳಿದರು.
ಕಾಮಗಾರಿಯನ್ನು ಗುತ್ತಿಗೆದಾರರು ಉತ್ತಮವಾಗಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ಡಾ. ಬೆಲ್ದಾಳೆ ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಿವರಾಜ ಪಾಟೀಲ, ಶಿವಕುಮಾರ ಸ್ವಾಮಿ, ಚಂದ್ರಯ್ಯ ಸ್ವಾಮಿ, ಶಿವಕುಮಾರ ಪಾಟೀಲ್ ಚಿಟ್ಟಾ, ಆನಂದ ಪಾಟೀಲ್, ರಾಜಕುಮಾರ ಸಿದ್ದಣ್ಣ, ಆದಿತ್ಯಾ ರೆಡ್ಡಿ, ವಿಜಯಕುಮಾರ, ವಿಜಯಕುಮಾರ ಝರೆಪ್ಪ, ಕಾಲೇಜಿನ ಪ್ರಾಂಶುಪಾಲರಾದ ದೇವಿದಾಸ ತುಮಕುಂಟೆ, ಪ್ರೋ. ವೇದಪ್ರಕಾಶ ಆರ್ಯ, ಪ್ರೋ. ಅಂಜಲಿ ಲುಲ್ಲೆ, ಪ್ರೋ. ಭಾಗ್ಯವಂತಿ ಚಿಲ್ಲಶೆಟ್ಟಿ, ಡಾ. ಸಂತೋಷ ಬಡಿಗೇರ, ಸಚಿದಾನಂದ ರುಮ್ಮಾ ಮತ್ತಿತರರು ಉಪಸ್ಥಿತರಿದ್ದರು.