3-day district festival begins today

* ಒಂದೇ ಆಸೆ, 2 ದಶಕಗಳ ಕನಸು ಕೊನೆಗೂ ನನಸು । ಸ್ವಚ್ಛ-ಸುಂದರವಾಗಿ ಸಿಂಗಾರಗೊಂಡ ಎಡೆದೊರೆ ನಾಡು ರಾಯಚೂರುರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಹೆಸರಿನಲ್ಲಿ ಪ್ರತಿ ವರ್ಷ ಉತ್ಸವಗಳು ನಡೆಯುತ್ತವೆ ಆದರೆ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಜಿಲ್ಲೆಯ ಎಲ್ಲ ವರ್ಗದವರ 1 ಆಸೆಯು ಈಡೇರಿದ್ದು, 2 ದಶಕಗಳ ಬಳಿಕ 3 ದಿನಗಳ ಕಾಲ ಜಿಲ್ಲಾ ಉತ್ಸವ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರವಾದ ರಾಯಚೂರು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಫೆ.5 ರಿಂದ 7 ವರೆಗೆ ಸ್ಥಳೀಯ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಜೊತೆಗೆ ಆಯ್ದ ವಿವಿಧ ಪ್ರದೇಶ ಗಳಲ್ಲಿ ಜರುಗಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ - 2026ಕ್ಕೆ ಸಂಬಂಧಿಸಿದಂತೆ ವೇದಿಕೆ, ಮೆರವಣಿಗೆ, ಮೇಳಗಳು, ಕಲೆ-ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.

ದೊಡ್ಡ ಹಬ್ಬಕ್ಕೆ ಸಜ್ಜಾದ ಬಿಸಿಲೂರು: ಪ್ರತಿ ವರ್ಷ ಮುನ್ನೂರು ಕಾಪು ಸಮಾಜ ಆಯೋಜಿಸಿದ್ದ ಮುಂಗಾರು ಸಾಂಸ್ಕೃತಿಕ ಹಬ್ಬದನ್ನು ಆರಾಧಿಸಿದ್ದ ಬಿಸಿಲೂರಿನ ಜನ ಇದೀಗ ಸರ್ಕಾರವೇ ಆಯೋಜಿಸಿರುವ ದೊಡ್ಡ ಹಬ್ಬವನ್ನು ಆಚರಿಸಲು ಸಜ್ಜಾಗಿ ನಿಂತಿದ್ದಾರೆ. ಮೂರು ದಿನಗಳ ಉತ್ಸವಕ್ಕೆ ಪೂರ್ವದಲ್ಲಿ ಎರಡು ದಿನಗಳ ಕಾಲ ನಡೆದ ಮಕ್ಕಳ ಹಬ್ಬಕ್ಕೆ ಅದ್ದೂರಿ ಸ್ಪಂದನೆ ಲಭಿಸಿದ್ದು ಗುರುವಾರದಿಂದ ಆರಂಭಗೊಳ್ಳುತ್ತಿರುವ ಉತ್ಸವಕ್ಕು ಇನ್ನು ಹೆಚ್ಚಿನ ಸ್ಪಂದನೆಯನ್ನು ನಿರೀಕ್ಷಿಸಲಾಗುತ್ತಿದೆ. ಅದಕ್ಕಾಗಿ ಅಗತ್ಯವಾದ ವೇದಿಕೆ, ಊಟ, ವಸತಿ, ವಾಹನಗಳ ನಿಲುಗಡೆಗೆ ಪಾರ್ಕಿಂಗ್‌, ಸುಗಮ ಸಂಚಾರ,ಬಿಗಿ ಬಂದೋಬಸ್ತ್‌, ಆರೋಗ್ಯ ಸೇವೆ, ಕುಡಿಯುವ ನೀರು, ಸ್ವಚ್ಛತೆ, ದೀಪಾಲಂಕಾರ ಸೇರಿಹಲವಾರು ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.

ಮದುವಣಗಿತ್ತಿಯಂತೆ ಸಿಂಗಾರಗೊಂಡ ನಗರ: ಉತ್ಸವ ಪ್ರಯುಕ್ತ ಜಿಲ್ಲಾ ಕೇಂದ್ರವಾದ ರಾಯಚೂರು ನಗರವು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲೆಡೆ ಫ್ಲೆಕ್ಸ್‌-ಬ್ಯಾನರ್, ಐತಿಹಾಸಿಕ ಸ್ಮಾರಕಗಳು, ಹೋಟೆಲ್, ಮಳಿಗೆಗಳು ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ. ಮಹನೀಯರ ಹೆಸರಿನ ವೃತ್ತಗಳು, ಮುಖ್ಯ ರಸ್ತೆಗಳು ಅಕ್ಕ-ಪಕ್ಕದಲ್ಲಿ ಅಲಂಕಾರದ ಬಟ್ಟೆಗಳು, ಫ್ಲೆಕ್ಸ್‌ ಮತ್ತು ಗೋಡೆಗಳಲ್ಲಿ ಐತಿಹಾಸಿಕ ಸ್ಮಾರಕ,ಕ್ರೀಡೆ ಹಾಗೂ ಪ್ರಕೃತಿಗೆ ಸಂಬಂಧಿಸಿದ ವರ್ಣರಂಜಿತ ಚಿತ್ರಗಳು ನಗರಕ್ಕೆ ಹೊಸ ಮೆರುಗನ್ನು ಕೊಟ್ಟಿವೆ.

--

04ಕೆಪಿಆರ್‌ಸಿಆರ್ 01: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಸ್ವಾಗತ ಕಮಾನಿನ ನೋಟ.

04ಕೆಪಿಆರ್‌ಸಿಆರ್ 02: ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ಹಾಕಲಾದ ಮಳಿಗೆಗಳು.